ನಾಳೆ ಚುನಾವಣಾ ಫಲಿತಾಂಶ: ಗರಿಗೆದರಿದ ರಾಜಕೀಯ ಚಟುವಟಿಕೆ; ಬಿಎಸ್'ವೈ ನಿವಾಸಕ್ಕೆ ಬಿಜೆಪಿ ನಾಯಕರು ದೌಡು!

ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಪೂರ್ಣಗೊಂಡಿದ್ದು, ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. 11 ಸಮೀಕ್ಷೆಗಳ ಪೈಕಿ 8 ಸಮೀಕ್ಷೆಗಳು ಕಾಂಗ್ರೆಸ್ ಪರ ಹಾಗೂ 3 ಸಮೀಕ್ಷೆಗಳು ಬಿಜೆಪಿ ಪರ ಭವಿಷ್ಯ ನುಡಿದಿವೆ. ಅಂತಿಮವಾಗಿ ಶನಿವಾರ ಫಲಿತಾಂಶ ಹೊರಬೀಳಲಿದ್ದು, ಈ ವೇಳೆ ಯಾವ ಪಕ್ಷ 113 ಸಂಖ್ಯೆಯನ್ನು ದಾಟಲಿದೆ ಎಂಬ ಕುತೂಹಲ ಹೆಚ್ಚಾಗಿದೆ,
ಯಡಿಯೂರಪ್ಪ ಜೊತೆಗೆ ಮಾತುಕತೆ ನಡೆಸುತ್ತಿರುವ ಬಿಜೆಪಿ ನಾಯಕರು.
ಯಡಿಯೂರಪ್ಪ ಜೊತೆಗೆ ಮಾತುಕತೆ ನಡೆಸುತ್ತಿರುವ ಬಿಜೆಪಿ ನಾಯಕರು.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಪೂರ್ಣಗೊಂಡಿದ್ದು, ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. 11 ಸಮೀಕ್ಷೆಗಳ ಪೈಕಿ 8 ಸಮೀಕ್ಷೆಗಳು ಕಾಂಗ್ರೆಸ್ ಪರ ಹಾಗೂ 3 ಸಮೀಕ್ಷೆಗಳು ಬಿಜೆಪಿ ಪರ ಭವಿಷ್ಯ ನುಡಿದಿವೆ. ಅಂತಿಮವಾಗಿ ಶನಿವಾರ ಫಲಿತಾಂಶ ಹೊರಬೀಳಲಿದ್ದು, ಈ ವೇಳೆ ಯಾವ ಪಕ್ಷ 113 ಸಂಖ್ಯೆಯನ್ನು ದಾಟಲಿದೆ ಎಂಬ ಕುತೂಹಲ ಹೆಚ್ಚಾಗಿದೆ,

ಚುನಾವಣಾ ಫಲಿತಾಂಶ ನಾಳೆ ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ಖರ್ಗೆ ನಿವಾಸಕ್ಕಿ ಕೈ ನಾಯಕರು ಸಭೆ ನಡೆಸುತ್ತಿದ್ದರೆ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ನಾಯಕರು ಸಭೆ ನಡೆಸುತ್ತಿದ್ದಾರೆ.

ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಭೇಟಿ ನೀಡಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಸಭೆಗೂ ಮುನ್ನ ಆರ್'ಟಿ ನಗರದ ತಮ್ಮ ನಿವಾಸದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಚುನಾವಣೆಗೆ ಮುಂಚೆ, ನಂತರ ಯಾವುದೇ ಇರಲಿ. ಸಮೀಕ್ಷೆಗಳು ಏನೇ ಹೇಳಿರಲಿ. ನನ್ನದು ಆಗಲೂ ಈಗಲೂ ಒಂದೇ ಮಾತು. ಅದು, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಗ್ರೌಡ್ ರಿಪೋರ್ಟ್ ಕೂಡ ಅದೇ ಹೇಳುತ್ತದೆ ಎಂದು ಹೇಳಿದರು.

ವಸ್ತುಸ್ಥಿತಿ ವರದಿಯನ್ನು ವರಿಷ್ಠರಿಗೆ ಸಲ್ಲಿಸಿದ್ದೇನೆ. ಬಿಜೆಪಿ ಗಳಿಸಲಿರುವ ನಂಬರ್ ಗಳ ಬಗ್ಗೆ ಹಿರಿಯ ನಾಯಕರು ಹೇಳಿದ್ದೇ ನನ್ನ ನಂಬರ್. ಇಬ್ಬರದೂ ಬೇರೆ ನಂಬರ್ ಗಳಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ನವರಿಗೆ ಬಹುಮತ ಬರುವುದಿಲ್ಲ. ಹೀಗಾಗಿ ಬೇರೆ ಪಕ್ಷದವರ ಜತೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಪಕ್ಷದ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದಾಯಿತು ಎಂದು ಹೇಳಿದರು.

ಈ ಬಾರಿ ಮೈತ್ರಿ ಪರಿಸ್ಥಿತಿ ಎದುರಾಗುವಿದಿಲ್ಲ. ನಮ್ಮ ಮುಂದೆ ಆ ಪ್ರಶ್ನೆಗಳಿಲ್ಲ. ನಾವು ಬಹುಮತ ಪಡೆಯುವುದು ಖಚಿತ. ಕಾಂಗ್ರೆಸ್ ಸಭೆ ಏನೇ ಆಗಲೀ, ನಾವು ಆ ಬಗ್ಗೆ ಚಿಂತಿಸುವುದಿಲ್ಲ. ಅವರಿಗೆ ಸಭೆ ಮಾಡುವ ಹಕ್ಕಿದೆ, ಮಾಡುತ್ತಾರೆ. ಎಲ್ಲಾ ಪಕ್ಷಗಳೂ ಸಭ ಮಾಡುತ್ತೇವೆ. ಇದರಲ್ಲಿ ಹೊಸದೇನೂ ಇಲ್ಲ ಎಂದರು.

ಎನ್.ರವಿಕುಮಾರ್ ಮಾತನಾಡಿ, ನಾವು ಏನೇ ಹೇಳಿದರೂ ನಾಳೆ ಪ್ರಕಟವಾಗಲಿರುವ ಫಲಿತಾಂಶದಲ್ಲಿ ​ವಾಸ್ತವ ಗೊತ್ತಾಗಲಿದೆ. ನಾವು 105-120ರವರೆಗೆ ತಲುಪುತ್ತೇವೆ. ನನ್ನ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ 15ಕ್ಕಿಂತ ಕಡಿಮೆ ಬರುವುದಿಲ್ಲ. ಬೆಂಗಳೂರಿನಲ್ಲಿ ಕೂಡ 15ಕ್ಕಿಂತ ಹೆಚ್ಚು ಸ್ಥಾನ ಗಳಿಸುತ್ತೇವೆ. ಕರಾವಳಿಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಒಟ್ಟಾರೆ ರಾಜ್ಯದ ವಿಚಾರ ತೆಗೆದುಕೊಂಡರೆ 105ಕ್ಕಿಂತ ಹೆಚ್ಚು ಗೆಲುವು ನಿಶ್ಚಿತ. ಕಾಂಗ್ರೆಸ್ ಏನೇ ಹೇಳಬಹುದು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com