ರಾಜಕೀಯ ಜೀವನ ಅಂತ್ಯವಾಗುವ ಆತಂಕ; ಸ್ಪೀಕರ್ ಹುದ್ದೆಗೆ ಮುಂದೆ ಬಾರದ ನಾಯಕರು, ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ ಅದೊಂದು ಭಯ!

ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರು ತಮಗೆ ನೀಡಲಾಗುತ್ತಿರುವ ಸ್ಪೀಕರ್ ಸ್ಥಾನದ  ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ. ಬಹುತೇಕ ಎಲ್ಲಾ ನಾಯಕರಿಗೆ ಸ್ಪೀಕರ್ ಹುದ್ದೆಯು ದುರದೃಷ್ಟವನ್ನು ತರುವ ಹುದ್ದೆಯಾಗಲಿದೆ ಎನ್ನುವ ಭಯ ಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. 
ವಿಧಾನಸಭೆ
ವಿಧಾನಸಭೆ

ಬೆಂಗಳೂರು: ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರು ತಮಗೆ ನೀಡಲಾಗುತ್ತಿರುವ ಸ್ಪೀಕರ್ ಸ್ಥಾನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ. ಬಹುತೇಕ ಎಲ್ಲಾ ನಾಯಕರಿಗೆ ಸ್ಪೀಕರ್ ಹುದ್ದೆಯು ದುರದೃಷ್ಟವನ್ನು ತರುವ ಹುದ್ದೆಯಾಗಲಿದೆ ಎನ್ನುವ ಭಯ ಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಕರ್ನಾಟಕದಲ್ಲಿ ಸ್ಪೀಕರ್ ಆಗಿದ್ದ ಬಹುತೇಕ ಎಲ್ಲಾ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ ಮತ್ತು ಅವರ ರಾಜಕೀಯ ಜೀವನ ಕೊನೆಗೊಂಡಿದೆ. ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋಲು ಕಂಡಿದ್ದಾರೆ. ಅವರ ಸೋಲು ಪಕ್ಷಕ್ಕೆ ಆಘಾತವನ್ನುಂಟು ಮಾಡಿತು ಮತ್ತು ಕಾಗೇರಿ ಅವರು ಕಂಗಾಲಾಗಿದ್ದಾರೆ.

2004 ರಿಂದ ಈ ಪ್ರತಿಷ್ಠಿತ ಹುದ್ದೆಯಲ್ಲಿ ಯಾರೆಲ್ಲಾ ಕುಳಿತಿದ್ದರೋ ಅವರು ತಮ್ಮ ರಾಜಕೀಯ ಜೀವನದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

2004ರಲ್ಲಿ ಎಸ್.ಎಂ.ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೆಆರ್ ಪೇಟೆ ಶಾಸಕರಾಗಿದ್ದ ಕೃಷ್ಣ ಅವರು 2008ರ ಚುನಾವಣೆಯಲ್ಲಿ ಸೋತಿದ್ದರು.

2013ರಲ್ಲಿ ಸ್ಪೀಕರ್ ಹುದ್ದೆ ಅಲಂಕರಿಸಿದ್ದ ಹಿರಿಯ ಕಾಂಗ್ರೆಸ್ಸಿಗ ಕಾಗೋಡು ತಿಮ್ಮಪ್ಪ ನಂತರದ 2018ರ ಚುನಾವಣೆಯಲ್ಲಿ ಸೋತರು. 2016ರಲ್ಲಿ ಸ್ಪೀಕರ್ ಆಗಿದ್ದ ಐದು ಅವಧಿಯ ವಿಧಾನಸಭಾ ಸದಸ್ಯರಾದ ಕೆಬಿ ಕೋಳಿವಾಡ ಅವರು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತರು ಮತ್ತು 2019ರ ಉಪಚುನಾವಣೆಯಲ್ಲಿ ಸೋತರು.

2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ರಮೇಶ್‌ಕುಮಾರ್ ಮೇ 10ರಂದು ನಡೆದ ಚುನಾವಣೆಯಲ್ಲಿ ಸೋತಿದ್ದರು.

ಹೀಗಾಗಿ, ಈ ಹುದ್ದೆಗೆ ನಾಯಕರನ್ನು ಒಪ್ಪಿಸುವುದು ಕಾಂಗ್ರೆಸ್‌ಗೆ ಕಷ್ಟವಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರನ್ನು ಸೋಮವಾರದಿಂದ ಆರಂಭವಾಗುವ ಮೂರು ದಿನಗಳ

ಚೊಚ್ಚಲ ಅಧಿವೇಶನದಲ್ಲಿ ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದು, ಈ ವೇಳೆ ನೂತನ ಸ್ಪೀಕರ್ ಆಯ್ಕೆಯಾಗಲಿದ್ದಾರೆ.
ಡಾ.ಜಿ. ಪರಮೇಶ್ವರ ಅವರು ಈ ಪ್ರಸ್ತಾಪವನ್ನು ನೇರವಾಗಿ ತಿರಸ್ಕರಿಸಿ ಕ್ಯಾಬಿನೆಟ್ ಸಚಿವರಾದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಟಿ.ಬಿ. ಜಯಚಂದ್ರ, ಎಚ್‌ಕೆ ಪಾಟೀಲ್, ಬಿಆರ್ ಪಾಟೀಲ್ ಮತ್ತು ವೈಎನ್ ಗೋಪಾಲಕೃಷ್ಣ ಅವರಲ್ಲಿ ಯಾರಿಗಾದರೂ ಸ್ಪೀಕರ್ ಹುದ್ದೆ ನೀಡಲು ಪಕ್ಷ ಚಿಂತನೆ ನಡೆಸಿದೆ. ಆದರೆ, ಅವರಲ್ಲಿ ಯಾರೊಬ್ಬರೂ ಈ ಹುದ್ದೆಗೆ ಆಸಕ್ತಿ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.

2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಜಯಚಂದ್ರ ಈ ಬಾರಿ ಜಯಭೇರಿ ಬಾರಿಸಿದ್ದರು. ಎಚ್.ಕೆ. ಪಾಟೀಲ್ ಗದಗದ ಪ್ರಮುಖ ಲಿಂಗಾಯತ ನಾಯಕರಾಗಿದ್ದು, ಕ್ಯಾಬಿನೆಟ್ ಸ್ಥಾನಕ್ಕೆ ಪರಿಗಣಿಸಲಾಗಿದೆ. ಹಾಗೆಯೇ ಬಿ.ಆರ್.ಪಾಟೀಲ್ ಕೂಡ ಆಳಂದ ಕ್ಷೇತ್ರದ ಪ್ರಮುಖ ನಾಯಕರಾಗಿದ್ದಾರೆ.

ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೆಜಿ ಬೋಪಯ್ಯ ಅವರು ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಸೋತರು, ಆ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಹಿನ್ನಡೆಯನ್ನು ಎದುರಿಸಿದರು.

ಈ ಹುದ್ದೆಯನ್ನು ನೀಡಲಾಗುತ್ತಿರುವ ಎಲ್ಲಾ ನಾಯಕರು ಸ್ಪೀಕರ್ ಆಗುವುದಕ್ಕಿಂತ ಹೆಚ್ಚಾಗಿ ಶಾಸಕರಾಗಿ ಉಳಿಯಲು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಪ್ರಮುಖ ಕಾರಣವಾದರೆ, ಸ್ಪೀಕರ್ ಹುದ್ದೆಯು ದುರದೃಷ್ಟವನ್ನು ಹೊತ್ತು ತರಬಹುದು ಎಂಬ ಭಯವು ಅವರು ಈ ಜವಾಬ್ದಾರಿಯನ್ನು ನಿರಾಕರಿಸಲು ಮುಖ್ಯ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com