ಸಂಪುಟ ವಿಸ್ತರಣೆ: 8 ಲಿಂಗಾಯತ, 6 ಒಕ್ಕಲಿಗ, 9 ಎಸ್ ಸಿ; ಸಿದ್ದು ಸರ್ಕಾರದ ಜಾತಿ ಸೂತ್ರ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಶನಿವಾರ ವಿಸ್ತರಿಸಲಾಗಿದ್ದು, 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 
ಸಿದ್ದು ಸಂಪುಟ ವಿಸ್ತರಣೆ
ಸಿದ್ದು ಸಂಪುಟ ವಿಸ್ತರಣೆ

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಶನಿವಾರ ವಿಸ್ತರಿಸಲಾಗಿದ್ದು, 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಆಡಳಿತಾರೂಢ ಪಕ್ಷವು ವಿವಿಧ ಜಾತಿಗಳು ಮತ್ತು ಗುಂಪುಗಳಿಗೆ ಪ್ರಾತಿನಿಧ್ಯ ನೀಡಲು ಪ್ರಯತ್ನಿಸುತ್ತಿದ್ದು, 8 ಲಿಂಗಾಯತ, 6 ಒಕ್ಕಲಿಗ, 9 ಎಸ್ ಸಿ ಸೇರಿದಂತೆ ವಿವಿಧ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಬೆಂಗಳೂರಿನ ರಾಜಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 24 ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಬಾರಿಯ ಸಂಪುಟ ವಿಸ್ತರಣೆಯೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸೇರಿದಂತೆ 34 ಸಚಿವರ ಸಂಪೂರ್ಣ ಬಲವನ್ನು ತಲುಪಿದೆ.

ನೂತನ ಸಚಿವ ಸಂಪುಟದಲ್ಲಿ ಒಕ್ಕಲಿಗ ಸಮುದಾಯದ ಆರು, ಲಿಂಗಾಯತ ಎಂಟು, ಪರಿಶಿಷ್ಟ ಜಾತಿಯ ನಾಲ್ವರು, ಪರಿಶಿಷ್ಟ ಪಂಗಡದ ಮೂವರು, ಮುಸ್ಲಿಂ ಸಮುದಾಯದ ಇಬ್ಬರು ಹಾಗೂ ಕ್ರೈಸ್ತ ಸಮುದಾಯದ ಒಬ್ಬರು ಸದಸ್ಯರಿದ್ದಾರೆ. ಮರಾಠ ಮತ್ತು ಬ್ರಾಹ್ಮಣ ಸಮುದಾಯಕ್ಕೂ ಪ್ರಾತಿನಿಧ್ಯ ಸಿಕ್ಕಿದೆ. 23 ಶಾಸಕರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಒಬ್ಬರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹೆಚ್ಚಿನ ಶಾಸಕರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕೆಲವರು ದೇವತೆಗಳು ಮತ್ತು ಪೂಜ್ಯ ವ್ಯಕ್ತಿಗಳ ಹೆಸರನ್ನು ತೆಗೆದುಕೊಂಡರು.

ಶಾಸಕರೂ ಅಲ್ಲ.. ವಿಧಾನಪರಿಷತ್ ಸದಸ್ಯರೂ ಅಲ್ಲದವರಿಗೂ ಸಚಿವ ಸ್ಥಾನ
ಇನ್ನು ಇಂದಿನ ಸಂಪುಟ ವಿಸ್ತರಣೆಯಲ್ಲಿ ಅಚ್ಚರಿ ಅಂಶ ಎಂದರೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್.ಎಸ್.ಬೋಸರಾಜು.. ಬೋಸರಾಜು ಅವರು ಶಾಸಕರೂ ಅಲ್ಲ, ಎಂಎಲ್ಸಿಯೂ ಅಲ್ಲ, ಸಿದ್ದರಾಮಯ್ಯನವರ ನಿಷ್ಠಾವಂತರು. ಆದರೆ, ಸಿದ್ದರಾಮಯ್ಯನವರ ಅನುಯಾಯಿಗಳೆಂದು ಪರಿಗಣಿಸಿದ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಟಿ.ಬಿ.ಜಯಚಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಶಿವಕುಮಾರ್ ಅವರ ನಿಷ್ಠಾವಂತ ಎಂದು ಪರಿಗಣಿಸಲಾದ ಎನ್‌ಎ ಹ್ಯಾರಿಸ್ ಕೂಡ ಸಂಪುಟಕ್ಕೆ ಬರಲಿಲ್ಲ. ಉಳಿದಂತೆ ಎಚ್.ಕೆ.ಪಾಟೀಲ್ ಮೊದಲು ಪ್ರಮಾಣ ವಚನ ಸ್ವೀಕರಿಸಿದರು. ಶಿವಕುಮಾರ್ ಅವರ ನಿಷ್ಠಾವಂತ ನಾಗಮಂಗಲ ಶಾಸಕ ಎನ್.ಚಲುವರಾಯಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು. ಬ್ಯಾಟರಾಯನಪುರ ಶಾಸಕ, ಮಾಜಿ ಸಚಿವ ಕೃಷ್ಣಬೈರೇಗೌಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಹಿರಿಯ ರಾಜಕಾರಣಿ ಮತ್ತು ಟಿ ನರಸೀಪುರದ ಶಾಸಕ ಎಚ್‌ಸಿ ಮಹದೇವಪ್ಪ ಅವರು ಸಿದ್ದರಾಮಯ್ಯ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿದ್ದಾರೆ ಮತ್ತು ಹಳೆ ಮೈಸೂರು ಭಾಗದಿಂದ ಬಂದವರು. 2013-2018ರ ಅವಧಿಯಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಪಿಡಬ್ಲ್ಯುಡಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಇತರ ಅನುಭವಿ ನಾಯಕರಲ್ಲಿ ಬಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಈ ಹಿಂದೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಕರ್ನಾಟಕ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿದ್ದಾರೆ. ಮಾಜಿ ಸಚಿವ ಹಾಗೂ ಗಾಂಧಿನಗರ ಶಾಸಕ ದಿನೇಶ ಗುಂಡೂರಾವ್ ಹಾಗೂ ಶಹಾಪುರ ಶಾಸಕ ಹಾಗೂ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಪ್ರಮಾಣ ವಚನ ಸ್ವೀಕರಿಸಿದರು. 2006ರಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಲಘಟಗಿ ಶಾಸಕ ಸಂತೋಷ್ ಲಾಡ್ ಕೂಡ ಈ ಹಿಂದೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಿದ್ದರಾಮಯ್ಯನವರ ನಿಷ್ಠಾವಂತ ಎಂದು ಪರಿಗಣಿಸಲ್ಪಟ್ಟಿರುವ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು.

ಕನಕಗಿರಿ ಶಾಸಕ ಶಿವರಾಜ ತಂಗಡಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. ಸೇಡಂ ಶಾಸಕ ಶರಣ ಪ್ರಕಾಶ್ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ ಅವರು ಈ ಹಿಂದೆ ಅಬಕಾರಿ, ಸಕ್ಕರೆ, ಬಂದರು ಮತ್ತು ಆಂತರಿಕ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕ್ಯಾತನಸಂದ್ರ ಎನ್ ರಾಜಣ್ಣ (ಕೆಎನ್ ರಾಜಣ್ಣ) ಬುದ್ಧ, ಬಸವ, ಅಂಬೇಡ್ಕರ್ ಮತ್ತು ವಾಲ್ಮೀಕಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಮಧುಗಿರಿಯ ಶಾಸಕರು. ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅಣ್ಣ ಬಸವಣ್ಣನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 2018ರಲ್ಲಿ ಎಚ್‌ಡಿ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದರು. ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಕಲ್ಲೇಶ್ವರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾದ ಶಾಮನೂರು ಶಿವಶಂಕರಪ್ಪ ಅವರ ಪುತ್ರ. 

ಭಟ್ಕಳ ಶಾಸಕ ಮಂಕಾಳು ವೈದ್ಯ ಪ್ರಥಮ ಬಾರಿಗೆ ಸಚಿವರಾದರು. ನೂತನ ಸಚಿವರ ಪೈಕಿ ಮಾಜಿ ಸಿಎಂ ಬಂಗಾರಪ್ಪ ಪುತ್ರ ಹಾಗೂ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಈಡಿಗ ಸಮುದಾಯದವರಾಗಿದ್ದಾರೆ. ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಮ್ ಖಾನ್ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಮೊದಲು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದರು. ಹಿರಿಯೂರು ಶಾಸಕ ಡಿ ಸುಧಾಕರ್ ತೇರು ಮಲ್ಲೇಶ್ವರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 2008ರಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇನ್ನುಳಿದಂತೆ ಚಿಂತಾಮಣಿ ಶಾಸಕ ಎಂಸಿ ಸುಧಾಕರ್ ಮತ್ತು ಬಳ್ಳಾರಿ ಗ್ರಾಮಾಂತರ ಶಾಸಕ ಬಿ ನಾಗೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮೇ 2 ರಂದು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿಕೆ ಶಿವಕುಮಾರ್ ಅವರೊಂದಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇತರ ಎಂಟು ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com