ನನ್ನದು ಸ್ವಂತ ಮನೆ, ಬಾಡಿಗೆ ಮನೆಯಿಂದ ಬಂದವನಲ್ಲ: ಸಚಿವ ಸ್ಥಾನ ಕುರಿತು ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ಅಸಮಾಧಾನ?

ನನ್ನದು ಸ್ವಂತ ಮನೆ, ಬಾಡಿಗೆ ಮನೆಯಿಂದ ಬಂದವನಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಸಚಿವ ಸ್ಥಾನ ಕುರಿತು ಸಿದ್ದರಾಮಯ್ಯ ವಿರುದ್ಧ  ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ಜಾರೆ.
ಬಿಕೆ.ಹರಿಪ್ರಸಾದ್
ಬಿಕೆ.ಹರಿಪ್ರಸಾದ್

ಬೆಂಗಳೂರು: ನನ್ನದು ಸ್ವಂತ ಮನೆ, ಬಾಡಿಗೆ ಮನೆಯಿಂದ ಬಂದವನಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಸಚಿವ ಸ್ಥಾನ ಕುರಿತು ಸಿದ್ದರಾಮಯ್ಯ ವಿರುದ್ಧ  ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ಜಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಸ್ವಂತ ಮನೆಯಲ್ಲಿ ಇರುವವನು, ಬಾಡಿಗೆ ಮನೆ ತೆಗೆದುಕೊಂಡು ಬಂದವನಲ್ಲ. ಈ ಮನೆ ಬಿಟ್ಟು ಹೋಗಲು ಅಥವಾ ಧ್ವಂಸ ಮಾಡಲು ಸಾಧ್ಯವಿಲ್ಲ. ರಾಜೀನಾಮೆ ಗೀಜಿನಾಮೆ ಪ್ರಶ್ನೆ ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಓಡಾಡುತ್ತಿದೆ.ಅದಕ್ಕೆ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ನನ್ನ ಸಾಮಾಜಿಕ ನ್ಯಾಯಕ್ಕೂ, ಅಹಿಂದಕ್ಕೂ ಬಹಳ ವ್ಯತ್ಯಾಸವಿದೆ. ನಾನು ಅಹಿಂದ ಎಂದು ಯೋಚನೆ ಮಾಡುವವನಲ್ಲ. ನಾನು ಯೋಚನೆ ಮಾಡತಕ್ಕಂತಹದ್ದು ಪ್ರತಿಯೊಬ್ಬರಿಗೂ ಸಹ ಸಮಾನವಾದ ಅವಕಾಶಗಳು, ಸಮಾನವಾದ ಹಕ್ಕು. ಕಾಂಗ್ರೆಸ್ ಪಕ್ಷದ ಸಿದ್ದಾಂತ ಏನಿದೆ, ಸರ್ವ ಧರ್ಮ ಸಮನ್ವಯ ಸಮಭಾವ ಅದರಲ್ಲಿ ನಂಬಿಕೆ ಇಟ್ಟುಕೊಂಡವನು. ಯಾವುದೇ ಬೇಧ ಭಾವ ಇಲ್ಲ. ದೊಡ್ಡವರು-ಸಣ್ಣವರು ಇಲ್ಲ, ಎಲ್ಲರೂ ಸಹ ಒಂದೆ” ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರ ಹಾಕಿದರು.

ನಾನು 5 ರಾಜ್ಯಗಳಲ್ಲಿ ಕ್ಯಾಬಿನೆಟ್ ರಚಿಸಿ ಬಂದವನು. ಅದನ್ನು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದ್ದು. ಈಗಿರುವ ಮಂತ್ರಿಗಳು 5 ವರ್ಷ ಇರಬಹುದು. ಬಿಜೆಪಿಯವರು ಆ ಕನಸು ಕಂಡಿದ್ದರು, ನಾವೂ ಆ ಕನಸು ಕಾಣುವುದರಲ್ಲಿ ತಪ್ಪಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಡಿಸಿಎಂ ಮಾಡಿದ್ದೇವಲ್ಲ. ಸಿಎಂ ಆಗಲು ಇನ್ನು ಒಂದು ಸ್ಟೆಪ್ ಮುಂದಕ್ಕೆ ಹೋಗಬೇಕು. ಸಮಯ ಬಂದಾಗ ಮಾತನಾಡುತ್ತೇನೆ. ವಾಟ್ಸಾಪ್ ಯೂನಿವರ್ಸಿಟಿ, ಟೆಲಿವಿಷನ್ ಯೂನಿವರ್ಸಿಟಿ ಚೆನ್ನಾಗಿದ್ದರೆ ಸರ್ಕಾರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದರು.

ಅಧಿಕಾರ ಹಂಚಿಕೆ ಬಗ್ಗೆ ಅವರಿಗೆ ಮಾತ್ರ ಗೊತ್ತು!
ಇದೇ ವೇಳೆ ಅಧಿಕಾರ ಹಂಚಿಕೆ ಕುರಿತು ಮಾತನಾಡಿದ ಅವರು, 'ಅಧಿಕಾರ ಹಂಚಿಕೆ ವಿಚಾರ ಗೊತ್ತಿರುವುದು ಏಳು ಜನರಿಗೆ ಮಾತ್ರ ಗೊತ್ತಿರುವುದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣ್ ದೀಪ್ ಸಿಂಗ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಮಾತ್ರ ಗೊತ್ತಿದೆ. ಎಂಟನೆಯವನು ಹೇಳಿದರೆ ಅದು ಸುಳ್ಳು ಅಧಿಕೃತವಲ್ಲ, ಏಳು ಜನರ ಮಧ್ಯೆ ಮಾತ್ರ ಚರ್ಚೆ ನಡೆದಿದೆ. ಉಳಿದವರು ಹೇಳುತ್ತಿರುವುದು ಯಾರನ್ನಾದರೂ ಸಂತೋಷ ಪಡಿಸಲು ಮಾತ್ರ ಎನ್ನುವ ಮೂಲಕ ಎಂಬಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ ಬಿಜೆಪಿಯವರು 36% ಮತದಲ್ಲೇ ಉಳಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ ಮತ್ತು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಒಕ್ಕಲಿಗ ಸಮುದಾಯದ ಮತ ಪ್ರಮಾಣ ಕಾಂಗ್ರೆಸ್ ಗೆ ಬಂದಿದೆ ಎಂದರು.

ನಾನು ಪರಿಷತ್​ನಲ್ಲಿ ಸಾಮಾನ್ಯ ಸದಸ್ಯನಾಗಿರ್ತೇನೆ
MLC ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಎಂದು ಎಲ್ಲೂ ಹೇಳಿಲ್ಲ. ರಾಜೀನಾಮೆ ನೀಡುವುದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ ಅವರು, ಪರಿಷತ್​ ಸಭಾನಾಯಕ ಯಾರನ್ನು ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರನ್ನೇ ಕೇಳಿ. ನಾನು ಪರಿಷತ್​ನಲ್ಲಿ ಸಾಮಾನ್ಯ ಸದಸ್ಯನಾಗಿರ್ತೇನೆ ಎಂದರು. ಅಲ್ಲದೆ ಜನರಿಗೆ ನೀಡಿದ ಗ್ಯಾರಂಟಿಗಳ ಬಗ್ಗೆ ಅಂಕಿಅಂಶ ಸಂಗ್ರಹಿಸುತ್ತಿದ್ದಾರೆ. ನೀತಿ ನಿಯಮ ಏನು ಮಾಡಬೇಕೆಂದು ಸಮಯ ತೆಗೆದುಕೊಳ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಖಂಡಿತ ಜಾರಿಯಾಗುತ್ತದೆ ಎಂದರು. 

ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ
ಕಾಂಗ್ರೆಸ್​​ ಗ್ಯಾರಂಟಿಗಳ ಬಗ್ಗೆ ಕುಮಾರಸ್ವಾಮಿ ಲೇವಡಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು. ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನವಾಗುತ್ತೆ ಎಂಬ ಹೇಳಿಕೆ H.D.ಕುಮಾರಸ್ವಾಮಿಗೆ ಬಿ.ಕೆ.ಹರಿಪ್ರಸಾದ್ ಟಾಂಗ್ ನೀಡಿದ್ದು, ಹಗಲುಗನಸು ಕಾಣುತ್ತಿದ್ದಾರೆ. ಇಷ್ಟು ದಿನವೂ ಕುಮಾರಸ್ವಾಮಿಗೆ ರಾತ್ರಿ, ಹಗಲು ನಿದ್ದೆ ಇರ್ತಿರಲಿಲ್ಲ. ಈಗ ಹಗಲು ರಾತ್ರಿ ನಿದ್ದೆ ಮಾಡ್ತಿದ್ದಾರೆ, ಹೀಗಾಗಿ ಕನಸು ಕಾಣ್ತಿದ್ದಾರೆ ಎಂದರು.

ಹರಿಪ್ರಸಾದ್​​ಗೆ ಸಚಿವಸ್ಥಾನ ಸಿಗದಿದ್ದಕ್ಕೆ ಬಿಲ್ಲವ ಮುಖಂಡರ ಬೇಸರ
ಇನ್ನು ಬಿಕೆ ಹರಿಪ್ರಸಾದ್​​ ಅವರಿಗೆ ಸಚಿವಸ್ಥಾನ ಸಿಗದಿದ್ದಕ್ಕೆ ಬಿಲ್ಲವ ಮುಖಂಡರ ಬೇಸರವಾಗಿದ್ದಾರೆ. ನಮ್ಮನ್ನು ಪ್ರತಿನಿಧಿಸಲು ಜಿಲ್ಲೆಯಿಂದ ಯಾರಿಗೂ ಅವಕಾಶ ನೀಡಿಲ್ಲ. ಜಿಲ್ಲೆಯಲ್ಲಿ ನಮ್ಮ ಸಮುದಾಯದ ಇಬ್ಬರು ಪರಿಷತ್ ಸದಸ್ಯರಿದ್ದಾರೆ. ಎಂಎಲ್​ಸಿಯಾಗಿ ಬಿ.ಕೆ.ಹರಿಪ್ರಸಾದ್, ಹರೀಶ್ ಕುಮಾರ್ ಇದ್ದಾರೆ. ಹರಿಪ್ರಸಾದ್​​, ಹರೀಶ್​ಕುಮಾರ್​ರನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com