ಹಾಸನದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಹೆಚ್.ಡಿ.ಕುಮಾರಸ್ವಾಮಿ

ಬಿಜೆಪಿ ಜೊತೆಗಿನ ಮೈತ್ರಿ ವಿಚಾರದಲ್ಲಿ ಅಪಸ್ವರ ಮತ್ತು ಕೆಲ ನಾಯಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿರುವ ವದಂತಿ ದಳಪತಿಗಳಿಗೆ ತಲೆಬಿಸಿ ಉಂಟು ಮಾಡಿದ್ದು, ಎಲ್ಲರನ್ನು ಹಿಡಿತದಲ್ಲಿಟ್ಟುಕೊಳ್ಳಲು ಜೆಡಿಎಸ್ ವರಿಷ್ಠರು ಕಸರತ್ತು ಆರಂಭಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ಹಾಸನ: ಬಿಜೆಪಿ ಜೊತೆಗಿನ ಮೈತ್ರಿ ವಿಚಾರದಲ್ಲಿ ಅಪಸ್ವರ ಮತ್ತು ಕೆಲ ನಾಯಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿರುವ ವದಂತಿ ದಳಪತಿಗಳಿಗೆ ತಲೆಬಿಸಿ ಉಂಟು ಮಾಡಿದ್ದು, ಎಲ್ಲರನ್ನು ಹಿಡಿತದಲ್ಲಿಟ್ಟುಕೊಳ್ಳಲು ಜೆಡಿಎಸ್ ವರಿಷ್ಠರು ಕಸರತ್ತು ಆರಂಭಿಸಿದ್ದಾರೆ.

ಈ ನಿಟ್ಟಿನಲ್ಲಿ ಹಾಸನಾಂಬ ದೇವಾಲಯದ ದರ್ಶನದ ಜೊತೆಗೆ ಎಲ್ಲರೂ ಒಗ್ಗೂಡಿ ಊಟ ಮಾಡುವ ನೆಪದಲ್ಲಿ ಆಡಳಿತಾರೂಢ ಕಾಂಗ್ರೆಸ್'ಗೆ ಜೆಡಿಎಸ್ ನ ಎಲ್ಲಾ ಶಾಸಕರು ಒಟ್ಟಾಗಿದ್ದೇವೆಂಬ ಸಂದೇಶ ಸಾರುವ ಪ್ರಯತ್ನ ನಡೆಸಲಾಗಿದೆ.

ಹಾಸನದ ಆದಿ ದೇವತೆ ಹಾಸನಾಂಬ ದೇಗುಲಕ್ಕೆ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ, ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿಯವರು, ದೇವರಿಗೆ ಪೂಜೆ ಸಲ್ಲಿಸುವ ವೇಳೆ ಬರದ ಸಂಕಷ್ಟದಿಂದ ನೊಂದಿರುವ ನಾಡಿನ ಅನ್ನದಾತ ರೈತರಿಗೆ ಒಳ್ಳೆಯದಾಗಲಿ. ನಾಡಿನ ಎಲ್ಲ ಜನರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.

ಬಡವರ, ರೈತರ, ದೀನದಲಿತರ ಸೇವೆ ಮಾಡಲು ಒಳ್ಳೆಯ ಆರೋಗ್ಯವನ್ನು ತಾಯಿ ನನಗೆ ಕರುಣಿಸಲಿ ಎಂದು ಕೇಳಿಕೊಂಡಿರುವುದಾಗಿ ತಿಳಿಸಿದರು.

ಬಳಿಕ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮ್ಮ ಪಕ್ಷದ ಶಾಸಕರ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಹಾಗಾಗಿ ಜೆಡಿಎಸ್​ನ ಎಲ್ಲಾ ಶಾಸಕರು ಹಾಸನಾಂಬ ದರ್ಶನಕ್ಕೆ ಆಗಮಿಸಲಿದ್ದು, ಹಾಸನಾಂಬೆ ದೇವಿಯ ಪವಿತ್ರ ಕ್ಷೇತ್ರದಿಂದಲೇ ತಾವು ಒಗ್ಗಟ್ಟು ಪ್ರದರ್ಶನ ಮಾಡುವುದಾಗಿ ಇದೆ ವೇಳೆ ಘೋಷಿಸಿದರು.

ಹಾಸನಾಂಬ ದೇಗುಲಕ್ಕೆ ತಂದೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರೊಡನೆ ಭೇಟಿ ನೀಡುತ್ತಿದ್ದ ಸಂದರ್ಭವನ್ನು ಹಾಗೂ ತಮ್ಮ ಅಜ್ಜಿ ಹಾಸನಾಂಬ ದೇವರ ದೀಪಕ್ಕಾಗಿ ಎಣ್ಣೆ ತಂದು ಕೊಡುತ್ತಿದ್ದ ದಿನಗಳನ್ನು ಇದೇ ವೇಳೆ ಹೆಚ್​ಡಿಕೆ ನೆನೆದರು.

ಕುಮಾರಸ್ವಾಮಿಯವರು 2 ದಿನಗಳ ಕಾರ ಹಾಸನದಲ್ಲಿ ಒಗ್ಗಟ್ಟಿನ ಪ್ರದರ್ಶನ ಕೈಗೊಂಡಿದ್ದು, ಮಂಗಳವಾರ ಕೆಲವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಬುಧವಾಲ ಎಲ್ಲರೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

19 ಶಾಸಕರು ಒಗ್ಗಟ್ಟಾಗಿದ್ದು, ಎರಡು ದಿನಗಳ ಕಾಲ ಹಾಸನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಶಾಸಕರು ಬುಧವಾರವೂ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com