ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿ ತಂಡವೊಂದು ನಡೆಸುತ್ತಿರುವ ಪ್ರಯತ್ನ ಗೊತ್ತಿದೆ: ಡಿ.ಕೆ.ಶಿವಕುಮಾರ್

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪಕ್ಷದ ತಂಡವೊಂದು ಪ್ರಯತ್ನ ನಡೆಸುತ್ತಿರುವುದು ನನಗೆ ಗೊತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಡಿಕೆ.ಶಿವಕುಮಾರ್.
ಡಿಕೆ.ಶಿವಕುಮಾರ್.
Updated on

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪಕ್ಷದ ತಂಡವೊಂದು ಪ್ರಯತ್ನ ನಡೆಸುತ್ತಿರುವುದು ನನಗೆ ಗೊತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವ ನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯ ಆ ತಂಡ ಯಾವ ಶಾಸಕರನ್ನು ಭೇಟಿ ಮಾಡುತ್ತಿದ್ದಾರೆ ಎಂದು ಆ ಶಾಸಕರೇ ನನಗೆ ಹಾಗೂ ಸಿಎಂ ಸಿದ್ದರಾಮಯ್ಯ ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಆಪರೇಷನ್ ಕಮಲಕ್ಕಾಗಿ ಏನೇನು ಆಫರ್ ಮಾಡುತ್ತಿದ್ದಾರೆ ಎಂಬುವುದರ ಬಗ್ಗೆಯೂ ಶಾಸಕರು ಹೇಳುತ್ತಿದ್ದಾರೆ. ಈ ಎಲ್ಲಾ ವಿಚಾರವಾಗಿ ನನ್ನಲ್ಲಿ ಪ್ರತಿಯೊಂದರ ಮಾಹಿತಿಯೂ ಇದೆ. ಅಧಿವೇಶನ ನಡೆಯಲಿ, ಬಿಜೆಪಿಯ ತಂಡ ಯಾರನ್ನೆಲ್ಲಾ ಭೇಟಿ ಮಾಡಿ ಮಾತುಕತೆ ನಡೆಸಿದೆ ಎಂದು ಆ ಶಾಸಕರೇ ಹೇಳುತ್ತಾರೆಂದು ತಿಳಿಸಿದರು.

ಬಿಜೆಪಿ ಮತ್ತು ಜನತಾದಳದವರು ಹತಾಶೆಯ ಅಂತಿಮ ಸ್ಥಿತಿ ತಲುಪಿದ್ದಾರೆ. ಅವರಿಗೆ ಡಾಕ್ಟರ್‌ಗಳೇ ಮೇಜರ್ ಆಪರೇಶನ್ ಮಾಡಬೇಕಿದೆ ಎಂದು ವ್ಯಂಗ್ಯವಾಡಿದರು.

ಜಗದೀಶ್ ಶೆಟ್ಟರ್‌ ಹಾಗೂ ರಮೇಶ್ ಜಾರಕಿಹೊಳಿ ಭೇಟಿ ವಿಚಾರ ಕುರಿತು ಮಾತನಾಡಿ, ಹಾಗೆಲ್ಲ ಎಲ್ಲದರಲ್ಲೂ ಅನುಮಾನಪಡಲು ಆಗಲ್ಲ. ಜಗದೀಶ್ ಶೆಟ್ಟರ್ ಅವರು, ತಮ್ಮ ಶಕ್ತಿ ಏನಿದೆ ಎಂದು ತೋರಿಸಿದ್ದಾರೆ. ಈ ಬಗ್ಗೆ ನಾನೇನು ಹೆಚ್ಚು ಮಾತನಾಡುವುದಿಲ್ಲ ಎಂದರು.

ಬಿಜೆಪಿ ಮುಳುಗುತ್ತಿರೋ ಹಡಗಲ್ಲ, ಮುಳುಗಿರುವ ಹಡಗು: ಎಂಬಿ.ಪಾಟೀಲ್
ಈ ನಡುವೆ ಸಚಿವ ಎಂಬಿ ಪಾಟೀಲ್ ಅವರು ಮಾತನಾಡಿ, ಬಿಜೆಪಿ ಮುಳುಗುತ್ತಿರೋ ಹಡಗಲ್ಲ ಈಗಾಗಲೇ ಮುಳುಗಿರುವ ಹಡಗು. ಆ ಪಕ್ಷದಲ್ಲಿ ಏನೂ ಉಳಿದಿಲ್ಲ. ಸಂಪೂರ್ಣ ನಿರ್ಣಾಮವಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಆಪರೇಷನ್ ಕಮಲ ಮಾಡಬೇಕಾದರೆ 65 ಶಾಸಕರು ಬೇಕು. ಬಿಜೆಪಿಗೆ ಅಷ್ಟು ಶಾಸಕರು ಎಲ್ಲಿ ಸಿಗುತ್ತಾರಾ? ಐದು ಶಾಸಕರು ಕೂಡ ಸಿಗಲ್ಲ. ಆಪರೇಷನ್ ಕಮಲ ನಂತರ ಬಿಜೆಪಿಯವರ ಕಥೆ ಏನಾಗಿದೆ ಎಲ್ಲರಿಗೂ ಗೊತ್ತಿದೆ. ಬಿಜೆಪಿ ಮುಳುಗುತ್ತಿರೋ ಹಡಗಲ್ಲ, ಈಗಾಗಲೇ ಮುಳುಗಿ ಹೋಗಿರುವ ಹಡಗಾಗಿದೆ. ಬಿಜೆಪಿಯಲ್ಲಿ ನಾಯಕರಿಲ್ಲ. ಬಿಜೆಪಿಯಲ್ಲಿ ಏನೂ ಉಳಿದಿಲ್ಲ, ಸಂಪೂರ್ಣ ನಿರ್ಣಾಮವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಮತ್ತು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿ ವಿಚಾರ ಕುರಿತು ಮಾತನಾಡಿ, ವೈಯಕ್ತಿಕ ಭೇಟಿಯೋ ಅಥವಾ ರಾಜಕೀಯ ಭೇಟಿನೋ ನನಗೆ ಗೊತ್ತಿಲ್ಲ. ರಮೇಶ್​ ಜಾರಕಿಹೊಳಿಗೆ ಕಾಂಗ್ರೆಸ್ ಸೇರುವ ಒಲವು ಇರಬಹುದು. ಬೇರೆ ಪಕ್ಷದ ನಾಯಕರ ಸೇರುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದರು.

ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಹಣದ ವಿಚಾರವಾಗಿ ಮಾತನಾಡಿ, ಸಿಬಿಐ ತನಿಖೆಗೆ ಕೊಡಬೇಕು ಎಂದರೆ, ಐಟಿ ಇಲಾಖೆಯವರೇ ಕೊಡುತ್ತಾರೆ. ಪಂಚರಾಜ್ಯಗಳಿಗೆ ಹಣ ಕಳಿಸುತ್ತೇವೆಂದು ಹೇಳುತ್ತಿದ್ದಾರೆ. ಅವಕಾಶ ಸಿಕ್ಕಾಗ ಬಿಜೆಪಿಯವರು ಹೀಗೆ ಹೇಳುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com