ಚೀನಾ 34,000 ಚದರ ಕಿಮೀ ಭೂಮಿ ಕಬಳಿಸಿದಾಗ ಅಫೀಮು ಸೇವಿಸಿದವರು ಯಾರು: ಖರ್ಗೆಗೆ ಪ್ರಹ್ಲಾದ್ ಜೋಶಿ ಪ್ರಶ್ನೆ

1962 ರಲ್ಲಿ 34,000 ಚದರ ಕಿಲೋಮೀಟರ್ ಭೂಮಿಯನ್ನು ಚೀನಾ ಕಬಳಿಸಿದಾಗ ಅಫೀಮು ಸೇವಿಸಿದವರು ಯಾರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: 1962 ರಲ್ಲಿ 34,000 ಚದರ ಕಿಲೋಮೀಟರ್ ಭೂಮಿಯನ್ನು ಚೀನಾ ಕಬಳಿಸಿದಾಗ ಅಫೀಮು ಸೇವಿಸಿದವರು ಯಾರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ ಖರ್ಗೆ ಅವರಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಅರಿವು ಇದ್ದಂತಿಲ್ಲ. ಪ್ರಧಾನಿ ಮೋದಿ ಅವರ ಬಗ್ಗೆ ಖರ್ಗೆ ಅದ್ಯಾವ ಭಾಷೆ ಬಳಸುತ್ತಿದ್ದಾರೆ? ನಾವು ನಮ್ಮ ದೇಶದ ಗಡಿಗಳನ್ನು ಭದ್ರ ಮತ್ತು ಬಲಪಡಿಸಿದ್ದೇವೆ. ಚೀನಾ ಒಳನುಸುಳುಕೋರರನ್ನು ತಡೆದಿದ್ದೇವೆ. ಭವಿಷ್ಯದಲ್ಲಿನ ಅಕ್ರಮಣಕ್ಕೆ ಬ್ರೇಕ್ ಹಾಕಿದ್ದೇವೆ ಎಂದು ಹೇಳಿದರು.

ಅಕ್ಸಾಯ್ ಚಿನ್ ಅನ್ನು ಚೀನಾಕ್ಕೆ ಹಸ್ತಾಂತರಿಸಿದ ಸಂದರ್ಭ ಹಾಗೂ ಕಾಂಗ್ರೆಸ್ ಇತಿಹಾಸವನ್ನು ಖರ್ಗೆ ಸ್ವಲ್ಪ ನೆನಪಿಸಿಕೊಳ್ಳಬೇಕು. ನಮ್ಮ ಸರ್ಕಾರ ಚೀನಾ-ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಅನುಮತಿಸಲಿಲ್ಲ. ಆದರೆ, 1962 ರಲ್ಲಿ 34,000 ಚದರ ಕಿಲೋಮೀಟರ್ ಭೂಮಿಯನ್ನು ಚೀನಾ ಕಬಳಿಸಿದಾಗ ಅಫೀಮು ಸೇವಿಸಿದವರು ಯಾರು ಎಂದು ತಿರುಗೇಟು ನೀಡಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ
ಮುಂದಿನ 10 ವರ್ಷವೂ ಮೋದಿಯೇ ದೇಶದ ಪ್ರಧಾನಿ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬಿಜೆಪಿ ಬಗ್ಗೆ ಪಿ.ಚಿದಂಬರಂ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ನಾಶಪಡಿಸುತ್ತಿಲ್ಲ. ನಮ್ಮ ಪಕ್ಷವನ್ನು ಬಲಪಡಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ಅವರ ಜವಾಬ್ದಾರಿ, ನಮ್ಮದಲ್ಲ. ಅವರ ಪಕ್ಷವನ್ನು ಬಲಪಡಿಸಿಕೊಳ್ಳಲಿ. ಅದು ಬಿಟ್ಟು ಬಿಜೆಪಿಯನ್ನು ದೂಷಿಸಬಾರದು ಎಂದು ಸಲಹೆ ನೀಡಿದರು.

ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಕಾಂಗ್ರೆಸ್‌ ಚುನಾವಣಾ ರಾಲಿ ಉದ್ದೇಶಿಸಿ ಮಾತನಾಡಿದ ಖರ್ಗೆ ಅವರು, 'ದೇಶದ ಜನರೆದುರು 56 ಇಂಚಿನ 'ಎದೆಗಾರಿಕೆ' ಪ್ರದರ್ಶನ ಮಾಡುವ ಮೋದಿ ಅವರು, ಚೀನಿಯರು ನಮ್ಮ ಭೂಭಾಗವನ್ನು ಅತಿಕ್ರಮಿಸಿಕೊಂಡು ಮುನ್ನುಗ್ಗಿ ಬರುತ್ತಿದ್ದರೂ ರಾಜಸ್ಥಾನದ ಹೊಲಗಳಲ್ಲಿ ಬೆಳೆದ ಅಫೀಮು (ಮಾದಕ ದ್ರವ್ಯ) ಸೇವಿಸಿ ನಿದ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com