ರಾಜ್ಯದ ಜನತೆ ದಲಿತ ವಿರೋಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕು: ಸಿಎಂ ಸಿದ್ದರಾಮಯ್ಯ

ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಸ್'ಸಿ/ಎಸ್'ಟಿ ಕಲ್ಯಾಣದ ಬಗ್ಗೆ ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಬೇಕೆಂದು ಕರೆ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯದ ಜನತೆ ದಲಿತ ವಿರೋಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕೇ ಹೊರತು ದಲಿತರ ಪರವಾಗಿರುವ ರಾಜ್ಯ ಸರ್ಕಾರವನ್ನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದರು.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಕೇಂದ್ರ ಸರ್ಕಾರ ಕಿಡಿಕಾರಿರುವ ಸಿಎಂ ಸಿದ್ದರಾಮಯ್ಯ ಅವರು,

ರಾಷ್ಟ್ರಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಹಂಚಿಕೆ (ಎಸ್‌ಸಿಎಸ್‌ಪಿ/ಟಿಎಸ್‌ಪಿ) ಯೋಜನೆಯನ್ನು ಜಾರಿಗೊಳಿಸದೆ, ದಲಿತರ ಅಭಿವೃದ್ದಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾಗಿರುವ ಬಜೆಟ್ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕ ಅಧಿಕಾರ ಇದೆ? ಎಂದು ವಾಗ್ದಾಳಿ ನಡೆಸಿದ್ದಾರೆ.

ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಸ್'ಸಿ/ಎಸ್'ಟಿ ಕಲ್ಯಾಣದ ಬಗ್ಗೆ ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಬೇಕೆಂದು ಕರೆ ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಅವರೇ, ನಿಮಗೆ ದಲಿತರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯನ್ನು ಜಾರಿಗೆ ತಂದು ಕೇಂದ್ರ ಬಜೆಟ್ ನಲ್ಲಿ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಶೇಕಡಾ 25ರಷ್ಟು ಅನುದಾನವನ್ನು ಮೀಸಲಿಡಿ, ಆ ಮೇಲೆ ನಮ್ಮನ್ನು ಪ್ರಶ್ನೆ ಮಾಡಲು ಬನ್ನಿ. ಅಲ್ಲಿಯ ವರೆಗೆ ಮೌನವಾಗಿರುವುದು ನಿಮಗೆ ಕ್ಷೇಮ ಎಂದಿದ್ದಾರೆ.

ಪ್ರಸಕ್ತ ಸಾಲಿನ ನಮ್ಮ ಸರ್ಕಾರದ ಬಜೆಟ್ ಗಾತ್ರ ರೂ.3,71,383 ಕೋಟಿ, ಅದರಲ್ಲಿ ರೂ.39,121 ಕೋಟಿಯನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟಿದ್ದೇವೆ. ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ರೂ.48.21 ಲಕ್ಷ ಕೋಟಿಯಾಗಿದ್ದು ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ದಿಗಾಗಿ ನೀಡಿರುವ ಅನುದಾನ ರೂ.2,90,401 ಕೋಟಿ ಮಾತ್ರ.

ನಿರ್ಮಲಾ ಸೀತಾರಾಮನ್ ಅವರೇ, ನಿಮ್ಮ ಬಜೆಟ್ ನೋಡಿದರೆ ನೀವು ಯಾರಿಗೆ ಹಲ್ವಾ ಹಂಚಿದ್ದೀರಿ ಎನ್ನುವುದು ಸ್ಪಷ್ಟವಾಗಿ ಕಣ್ಣಿಗೆ ರಾಚುತ್ತದೆ. ಇದನ್ನೆ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಹೇಳಿದ್ದು. ಶೇಕಡಾ 75ರಷ್ಟು ಮಂದಿಯನ್ನು ಉಪವಾಸ ಬೀಳಿಸಿ ಶೇಕಡಾ 25 ಮಂದಿಗೆ ಹಲ್ವಾ ತಿನ್ನಿಸುತ್ತಿದ್ದೀರಿ. ಈ ನಿಮ್ಮ ದಲಿತ ವಿರೋಧಿ ನೀತಿ ಬಯಲಾಗುವ ಭಯದಿಂದಲೇ ನೀವು ಜಾತಿ ಗಣತಿಯನ್ನು ವಿರೋಧಿಸುತ್ತಿರುವುದು.

ಕರ್ನಾಟಕದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತರಲು ದೊಡ್ಡ ಮಟ್ಟದ ಜನಾಂದೋಲಗಳೇನು ನಡೆದಿರಲಿಲ್ಲ. ರಾಜ್ಯದ ಕಾಂಗ್ರೆಸ್ ಪಕ್ಷ, ದಲಿತ ಸಮುದಾಯದ ಮೇಲಿನ ಪ್ರಾಮಾಣಿಕ ಕಾಳಜಿಯ ಕಾರಣಕ್ಕಾಗಿ ಸ್ವಯಂ ಇಚ್ಚೆಯಿಂದ 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಅಧಿಕಾರಕ್ಕೆ ಬಂದ ನಂತರ 2014-15ರಲ್ಲಿ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದು ನಾವು ನುಡಿದಂತೆ ನಡೆದಿದ್ದೆವು.

ಸಿಎಂ ಸಿದ್ದರಾಮಯ್ಯ
ಸ್ವಂತ ಬುದ್ಧಿ ಬೇಕು: ಸಂಸತ್ ನಲ್ಲಿ ಅನುರಾಗ್ v/s ರಾಹುಲ್ ವಾಗ್ವಾದ!

ರಾಜ್ಯದ ರೀತಿಯಲ್ಲಿಯೇ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಬೇಕೆಂದು ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇನೆ. ಈ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಿರಸ್ಕರಿಸುತ್ತಾ ಬಂದಿದ್ದಾರೆ. ಇಂತಹವರು ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಣ್ಣೀರು ಹಾಕುತ್ತಿರುವುದು ಹಾಸ್ಯ ಪ್ರಸಂಗದಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.

ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಗಿಂತ ಮೊದಲು ರಾಜ್ಯದಲ್ಲಿ ದಲಿತ ಸಮುದಾಯದ ಕಲ್ಯಾಣಕ್ಕಾಗಿಯೇ ಜಾರಿಯಲ್ಲಿದ್ದ ವಿಶೇಷ ಘಟಕ ಯೋಜನೆಯನ್ವಯ 2013-14ರ ಸಾಲಿನಲ್ಲಿ ನೀಡಲಾಗಿದ್ದ ಅನುದಾನ ರೂ.8,616 ಕೋಟಿಯಾಗಿದ್ದರೆ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಜಾರಿಯಾದ ವರ್ಷ (2014-2015)ರ ಸಾಲಿನಲ್ಲಿ ನೀಡಲಾಗಿದ್ದ ಅನುದಾನ ರೂ.15,894 ಕೋಟಿ. ಈ ಮೊತ್ತ ಈಗ ಹೆಚ್ಚು ಕಡಿಮೆ 40,000 ಕೋಟಿ ರೂಪಾಯಿಗೆ ತಲುಪಿದೆ. ಇದು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಇರುವ ದಲಿತರ ಬಗೆಗಿನ ಕಾಳಜಿ ಎಂದು ತಿಳಿಸಿದ್ದಾರೆ.

ಇಷ್ಟು ಮಾತ್ರವಲ್ಲ, ನಮ್ಮ ಸರ್ಕಾರ ನ್ಯಾ. ಹೆಚ್. ಎನ್. ನಾಗಮೋಹನ್ ದಾಸ್ ಸಮಿತಿ ಶಿಫಾರಸಿನನ್ವಯ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇಕಡಾ 15ರಿಂದ 17ಕ್ಕೆ ಮತ್ತು ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡಾ 3ರಿಂದ 7ಕ್ಕೆ ಹೆಚ್ಚಿಸಿದೆ, ಒಂದು ಕೋಟಿ ರೂಪಾಯಿ ವರೆಗಿನ ಸರ್ಕಾರಿ ಗುತ್ತಿಗೆಗಳಲ್ಲಿ ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಗುತ್ತಿಗೆದಾರರಿಗೆ ಶೇಕಡಾ 24.1ರಷ್ಟು ಮೀಸಲಾತಿ ಕಲ್ಪಿಸಲಾಗಿದೆ, ಗುತ್ತಿಗೆ ಆಧಾರದ ನೇಮಕಾತಿಗೂ ಮೀಸಲಾತಿ ಅನ್ವಯಿಸಲು ನಿರ್ಧರಿಸಲಾಗಿದೆ. ಎಸ್'ಸಿ/ಎಸ್'ಟಿ ಕುಟುಂಬಗಳಿಗೆ ಸರ್ಕಾರ ಮಂಜೂರು ಮಾಡಿದ ಜಮೀನುಗಳ ಅನಧಿಕೃತ ಪರಭಾರೆಯನ್ನು ತಡೆಯಲು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಹಂಚಿಕೆಯಾಗುವ ಕೈಗಾರಿಕಾ ನಿವೇಶನಕ್ಕೆ ಶೇಕಡಾ 75ರಷ್ಟು ಸಹಾಯಧನ ನೀಡಲಾಗುತ್ತಿದೆ. ಇವೆಲ್ಲವೂ ಅನುಷ್ಠಾನಕ್ಕೆ ಬಂದಿರುವುದು ಕರ್ನಾಟಕದಲ್ಲಿ ಮಾತ್ರ.

ಈಗ ಹೇಳಿ ನಿರ್ಮಲಾ ಸೀತಾರಾಮನ್ ಅವರೇ, ದಲಿತರು ಮೊದಲು ಪ್ರಶ್ನೆ ಮಾಡಬೇಕಾಗಿರುವುದು ಯಾರನ್ನು? ಎಸ್ ಸಿ ಎಸ್ ಪಿ-ಟಿ ಎಸ್ ಪಿ ಕಾಯ್ದೆಯೂ ಸೇರಿದಂತೆ ದಲಿತರ ಕಲ್ಯಾಣಕ್ಕಾಗಿ ಸಾಲುಸಾಲು ಯೋಜನೆಗಳನ್ನು ಜಾರಿಗೆ ತರುತ್ತಿರುವ ನಮ್ಮ ರಾಜ್ಯ ಸರ್ಕಾರವನ್ನೇ? ಬಜೆಟ್ ನಲ್ಲಿ ದಲಿತರಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾದ ಪಾಲನ್ನೂ ನೀಡದೆ ಅನ್ಯಾಯ ಎಸಗುತ್ತಿರುವ ಕೇಂದ್ರ ಸರ್ಕಾರವನ್ನೇ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com