ಬೆಂಗಳೂರು: ಆಂತರಿಕ ಕಚ್ಚಾಟದಿಂದ ಪಕ್ಷಕ್ಕೆ ಹಾನಿಯಾಗುತ್ತಿದ್ದು, ಕೇಂದ್ರ ನಾಯಕರು ಇದಕ್ಕೆ ಕಡಿವಾಣ ಹಾಕಬೇಕೆಂದು ಬಿಜೆಪಿ ನಾಯಕರುಕೇಂದ್ರ ನಾಯಕತ್ವಕ್ಕೆ ಒತ್ತಾಯಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ಮಂಗಳವಾರ ಸಭೆ ನಡೆಸಿದ್ದು, ಸಭೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಇತರ ಹಿರಿಯ ನಾಯಕರು ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆಂದು ತಿಳಿದುಬಂದಿದೆ.
ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಹಲವರು ಒತ್ತಾಯಿಸಿದ್ದಾರೆಂದು ವರದಿಗಳು ತಿಳಿಸಿವೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕರ ಆರಗ ಜ್ಞಾನೇಂದ್ರ ಅವರು ಮಾತನಾಡಿ, ನಾನೂ ಸೇರಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ಕಟ್ಟಿದ್ದಾರೆ. ಇದೀಗ ಪಕ್ಷವನ್ನು ದುರ್ಬಲಗೊಳಿಸಲು ಯಾರಿಗೂ ಅವಕಾಶ ನೀಡಬಾರದು. ಯತ್ನಾಳ್ ಅವರು ಹಿರಿಯ ನಾಯಕರನ್ನು ಟೀಕಿಸುವ ಮೂಲಕ ಪಕ್ಷಕ್ಕೆ ಹಾನಿಯುಂಟು ಮಾಡಿದ್ದಾರೆಂದು ಹೇಳಿದರು.
ಬಿಜೆಪಿ ಕೇಂದ್ರ ನಾಯಕತ್ವವು ಬಂಡಾಯ ನಾಯಕರೊಂದಿಗೆ ಮಾತುಕತೆ ನಡೆಸಬೇಕು. ಸೂಚನೆಗಳ ಪಾಲನೆ ಮಾಡದೇ ಹೋದಲ್ಲಿ ಪಕ್ಷದ ಮಾರ್ಗಸೂಚಿಯಂತೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಹೈಕಮಾಂಡ್ ಸದೃಢವಾಗಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಿದ್ದಾರೆಂಬ ವಿಶ್ವಾಸವಿದೆ. ಕಳೆದ ಕೆಲವು ದಿನಗಳ ಬೆಳವಣಿಗೆಗಳಿಂದ ಪಕ್ಷದ ಹಲವರಿಗೆ ನೋವಾಗಿದೆ ಮತ್ತು ಇದನ್ನು ತಡೆಯಬೇಕಾಗಿದೆ ೆಂದು ಹೇಳಿದರು.
ಕೋರ್ ಕಮಿಟಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಯತ್ನಾಳ್ ಅವರ ಬಗ್ಗೆ ಪಕ್ಷದ ಕೇಂದ್ರ ನಾಯಕರು ನಿರ್ಧರಿಸಲಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕೇಂದ್ರ ನಾಯಕರು ಗಮನಿಸುತ್ತಿದ್ದು, ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಅವರು ನಿರ್ಧರಿಸಲಿದ್ದಾರೆಂದು ಹೇಳಿದರು.
ತರುಣ್ ಚುಗ್ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಮುಂದುವರೆಸುವುದು ಮತ್ತು ಬೂತ್ ಮಟ್ಟದ ಸಮಿತಿಗಳನ್ನು ರಚಿಸುವುದು ಸೇರಿದಂತೆ ಪಕ್ಷವನ್ನು ಬಲಪಡಿಸುವ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
Advertisement