
ಬೆಳಗಾವಿ: ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಪಕ್ಷ ತೊರೆಯುವ ಕುರಿತು ಸುಳಿವು ನೀಡಿದ್ದು, 'ಮನಸ್ಸೆಲ್ಲಾ ಕಾಂಗ್ರೆಸ್ ಕಡೆಗಿದೆ, ಯಾವುದೇ ಕ್ರಮ ಕೈಗೊಂಡರೂ ಸ್ವಾಗತ' ಎಂದು ಹೇಳಿದ್ದಾರೆ.
ಸೋಮವಾರ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬೆಂಗಳೂರಿನ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್, 'ನಾನು ಮಾನಸಿಕವಾಗಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿದ್ದೇನೆ. ಆದರೆ, ಇದೀಗ ನನ್ನ ಮನಸ್ಸೆಲ್ಲಾ ಕಾಂಗ್ರೆಸ್ ಪಕ್ಷದ ಕಡೆಗೆ ಇದೆ ಎಂದು ಹೇಳಿದ್ದಾರೆ.
'ನಾನು ಬಿಜೆಪಿ ಶಾಸಕಾಂಗ ಸಭೆಗೂ ಹೋಗಿದ್ದೆ. ಕಳೆದ ಬಾರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಔತಣಕೂಟದಲ್ಲಿಯೂ ಪಾಲ್ಗೊಂಡಿದ್ದೆ. ಈ ಬಾರಿ ಯಾರು ಕರೆದರೂ ಹೋಗ್ತೇನೆ. ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದ್ದು, ಕರೆದರೆ ಅಲ್ಲಿಗೂ ಹೋಗುತ್ತೇನೆ. ನಾನು ಇಂದು ನಮ್ಮ ಪಕ್ಷದ ಅಧ್ಯಕ್ಷರ ಜತೆ ಮಾತನಾಡಿದ್ದೇನೆ.
ಆದರೆ, ವರಿಷ್ಠರ ಜತೆ ಒಂದು ರೀತಿ, ಮಾಧ್ಯಮಗಳೊಂದಿಗೆ ಮತ್ತೊಂದು ರೀತಿಯಲ್ಲಿ ಮಾತನಾಡುತ್ತಾರೆ. ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುವವರ ಮೇಲೆ ಯಾವುದೇ ಕ್ರಮ ಇಲ್ಲ. ಮೊದಲು ಅವರ ಮೇಲೆ ಕ್ರಮ ಜರುಗಿಸಲಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವುದಕ್ಕೆ ಹೋಗಬೇಡಿ. ಪಕ್ಷಕ್ಕೆ ಡ್ಯಾಮೇಜ್ ಮಾಡುವವರನ್ನು ತಡೆಯಲಿ ಎಂದು ಅವರು ಸವಾಲು ಹಾಕಿದರು.
ಯಾವುದೇ ಕ್ರಮ ಕೈಗೊಂಡರೂ ಸ್ವಾಗತ
ಇತ್ತೀಚೆಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಉಚ್ಚಾಟನೆ ಮಾಡಬೇಕೆಂದು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಸೋಮಶೇಖರ್, 'ನಾನು ಹಾಗೂ ಶಿವರಾಂ ಹೆಬ್ಬಾರ್ ಇಬ್ಬರೂ ಒಂದೊಂದು ಕ್ಷೇತ್ರದ ಶಾಸಕರು. ಇವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ಹೊರಟಿದ್ದಾರೆ. ಕೆಲ ಬಿಜೆಪಿ ಮುಖಂಡರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ರಾತ್ರಿ ವೇಳೆಯಲ್ಲಿ ಭೇಟಿ ಮಾಡುತ್ತಾರೆ. ಆದರೆ, ನಾನು ಹಗಲು ಹೊತ್ತಿನಲ್ಲೇ ಅವರನ್ನು ಭೇಟಿ ಮಾಡಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ನೇರವಾಗಿ ಹೇಳಲಾಗದೆ ನನ್ನ ಹೆಸರು ಹೇಳ್ತಿದ್ದಾರೆ. ಕ್ಷೇತ್ರ ಕೆಲಸದ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಭೇಟಿ ಮಾಡಿದ್ದೀನಿ. ನನ್ನ ವಿರುದ್ದ ಯಾವುದೇ ಕ್ರಮ ಕೈಗೊಂಡರೂ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಪಕ್ಷದ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ಯಾರು ಡ್ಯಾಮೇಜ್ ಮಾಡುತ್ತಿದ್ದಾರೆ ಅನ್ನೋದು ಗೊತ್ತಿದೆ. ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಡ್ಯಾಮೇಜ್ ಮಾಡಲು ನಾವ್ಯಾರು ಹೋಗಿಲ್ಲ. ಅವರು ಉಚ್ಚಾಟನೆ ಆದ್ರೂ ಮಾಡಲಿ, ನಾನು ಯಾವುದೇ ಆರೋಪಗಳನ್ನು ಮಾಡಲು ಹೋಗಲ್ಲ. ನನ್ನನ್ನು ಪಕ್ಷದಲ್ಲಿ ಉಳಿಸಿಕೊಂಡರೂ ಹೊರಗೆ ಕಳಿಸಿದರೂ ಎಲ್ಲವನ್ನೂ ಸ್ವಾಗತಿಸುತ್ತೇನೆ. ನಾನು ಯಾವತ್ತಾದ್ರೂ ವಿಜಯೇಂದ್ರ ವಿರುದ್ಧ ಒಂದೇ ಒಂದು ಮಾತು ಆಡಿದ್ದೀನಾ? ಎಂದು ಸೋಮಶೇಖರ್ ಕೇಳಿದ್ದಾರೆ.
ನಾನೊಬ್ಬ ಶಾಸಕ, ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕು. ಹಾಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುತ್ತೇನೆ ಎಂದು ಆರೋಪಗಳಿಗೆ ಕೌಂಟರ್ ನೀಡಿದ್ದಾರೆ. ಕ್ಷೇತ್ರಕ್ಕೆ ಅನುದಾನ ಬೇಕಿರುವುದರಿಂದ ಅವರ ಬಳಿಗೆ ಹೋಗಲೇಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.
Advertisement