ರಾಜ್ಯ ಸರ್ಕಾರ ಜನರಿಗೆ ಗುಳೆ ಗ್ಯಾರಂಟಿ ಕೊಟ್ಟಿದೆ: ಆರ್. ಅಶೋಕ್ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು

ರಾಜ್ಯ ಸರ್ಕಾರ ಜನರಿಗೆ ಗುಳೆ ಗ್ಯಾರಂಟಿ ಕೊಟ್ಟಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ದಿನೇಶ್ ಗುಂಡೂರಾವ್, ಅಶೋಕ್
ದಿನೇಶ್ ಗುಂಡೂರಾವ್, ಅಶೋಕ್
Updated on

ಬೆಂಗಳೂರು: ರಾಜ್ಯ ಸರ್ಕಾರ ಜನರಿಗೆ ಗುಳೆ ಗ್ಯಾರಂಟಿ ಕೊಟ್ಟಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಸರಣಿ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರ ಜನರಿಗೆ ಗುಳೆ ಗ್ಯಾರಂಟಿ ಕೊಟ್ಟಿದೆ ಎಂದು ಹೇಳಿರುವುದಕ್ಕೆ ನಾಚಿಕೆಪಡಬೇಕು. ಇಂತಹ ಭೀಕರ ಬರದ ನಡುವೆಯೂ ರಾಜ್ಯದ ಜನ ಮೂರೊತ್ತಿನ ಊಟ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನಮ್ಮ ಸರ್ಕಾರದ ಯೋಜನೆಗಳೇ ಕಾರಣ ಹೊರತು, ಇವರು ಕುರುಡಾಗಿ ಆರಾಧಿಸುವ ಮೋದಿಯವರಲ್ಲ ಎಂದು ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಬರದಿಂದ ತತ್ತರಿಸುವ ರೈತರಿಗೆ 2 ಸಾವಿರ ಪರಿಹಾರ ನೀಡುವ ಕೆಲಸ ಮಾಡುತ್ತಿದೆ. ರೈತರ ನೆರವಿಗಾಗಿ ಕೃಷಿ ಭಾಗ್ಯ ಜಾರಿಗೆ ತಂದಿದೆ. ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಏನು ನೆರವು ಸಿಕ್ಕಿದೆ ಎಂದು ಹೇಳುವ ಧಮ್ ಅಶೋಕ್‌ರವರಿಗಿದೆಯೇ? ಎಂದು ತಿರುಗೇಟು ನೀಡಿದ್ದಾರೆ.

ಅಶೋಕ್‌ರವರೆ, ನಾವು ಕೇಂದ್ರದ ಬಳಿ ಬಿಟ್ಟಿ ಕೊಡಿ ಎಂದು ಅಂಗಲಾಚುತ್ತಿಲ್ಲ. ನಮಗೆ ಬರಬೇಕಾದ ತೆರಿಗೆ ಅನುದಾನದ ಪಾಲು, ಬರ ಪರಿಹಾರದ ಪಾಲನ್ನು ಅಧಿಕಾರಯುತವಾಗಿ ಕೇಳುತ್ತಿದ್ದೇವೆ. ಅದು ನಮ್ಮ ನ್ಯಾಯಯುತವಾದ ಬೇಡಿಕೆ ಕೂಡ ಹೌದು. ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ಕಳೆದ‌ ಒಂದು ವಾರದಿಂದ ಅನೇಕ ದಿನಪತ್ರಿಕೆಗಳಲ್ಲಿ ಸರಣಿ ವರದಿ ಪ್ರಕಟವಾಗಿದೆ. ಒಂದು ವೇಳೆ ಆ ವರದಿಗಳನ್ನು ನೀವು ಓದಿಲ್ಲವಾದರೆ, ಸಮಯಾವಕಾಶ ಮಾಡಿಕೊಂಡು ಓದಿ. ಆಗ 'ಗುಳೆ ಭಾಗ್ಯ'ದ ಕೊಡುಗೆ ಯಾರದ್ದೆಂದು ತಿಳಿಯಲಿದೆ ಎಂದಿದ್ದಾರೆ.

ರೈತರ ಬಗ್ಗೆ ಈಗ ಮೊಸಳೆ ಕಣ್ಣೀರು ಸುರಿಸುತ್ತಾ ಸಿದ್ದರಾಮಯ್ಯರ ಮಾನವೀಯತೆಯನ್ನು ಪ್ರಶ್ನಿಸುವ ಅಶೋಕ್‌ರವರಿಗೆ ಇದೇ ಪ್ರಶ್ನೆಯನ್ನು ಮೋದಿಯವರಿಗೆ ಕೇಳಲು ಸಾಧ್ಯವಿದೆಯೇ.? ವಾರ್ಷಿಕವಾಗಿ ರೈತರಿಗೆ 6 ಸಾವಿರ ಕೊಡುವುದನ್ನೇ ದೊಡ್ಡ ಸಾಧನೆ ಎಂದು TVಗಳಲ್ಲಿ 24 ಗಂಟೆ ಜಾಹಿರಾತು ಕೊಡುವ ಮೋದಿಯವರು, ಅದೇ ಜಾಹಿರಾತಿಗೆ ಕೊಟ್ಟ ಹಣವನ್ನು ಬರ ಪರಿಹಾರದ ರೂಪದಲ್ಲಿ ಕೊಟ್ಟಿದ್ದರೆ, ರಾಜ್ಯದ ರೈತರು ಇಷ್ಟು ಕಷ್ಟ ಎದುರಿಸಬೇಕಾದ‌ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂಬಂತೆ ನಮ್ಮ ಮುಂದೆ ನಿಮ್ಮ ಪೌರುಷ ತೋರಿಸಬೇಡಿ. ವಿಪಕ್ಷ ನಾಯಕನಂತಹ‌ ಜವಾಬ್ಧಾರಿ ಸ್ಥಾನದಲ್ಲಿದ್ದೀರಿ. ನಿಮಗೇನಾದರೂ ರಾಜ್ಯದ ರೈತರ ಬಗ್ಗೆ ಅನುಕಂಪ, ಕರುಣೆ, ಕಾಳಜಿಯಿದ್ದರೆ ಕೇಂದ್ರದಿಂದ ನಿಯಮಾನುಸಾರ ನಮಗೆ ಬರಬೇಕಾದ ಬರಪರಿಹಾರ ಕೊಡಲು ಮೋದಿಯವರಿಗೆ ಹೇಳಿ. ಇಲ್ಲವಾದರೆ ಮೋದಿಯವರ ಎದುರು ಮಾತಾಡಲು ನಿಮಗೆ ಧೈರ್ಯವಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ ಎಂದು ಟೀಕಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com