ಮಂಡ್ಯದಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಜೆಡಿಎಸ್'ಗೆ ಗೆಲುವು: ಹೆಚ್.ಡಿ. ಕುಮಾರಸ್ವಾಮಿ

ಮಂಡ್ಯದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಹೇಳಿದರು.
ಹೆಚ್.ಡಿ ಕುಮಾರಸ್ವಾಮಿ
ಹೆಚ್.ಡಿ ಕುಮಾರಸ್ವಾಮಿ

ಚಿಕ್ಕಮಗಳೂರು: ಮಂಡ್ಯದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಹೇಳಿದರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಒಂದಲ್ಲ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಲಾಗಿದ್ದು, ನಮ್ಮ ಅಭ್ಯರ್ಥಿಗಳನ್ನು ಯಾವ ರೀತಿ ವಿಶ್ವಾಸ ತೆಗೆದುಕೊಳ್ಳಬೇಕು ಎಂಬ ಚರ್ಚೆ ನಡೆದಿದೆ. ರಾಮ ಮಂದಿರ ಉದ್ಘಾಟನೆ ಚುನಾವಣೆಯ ಮುಂಚೂಣಿಗೆ ಬರುತ್ತದೆ. ಈ ಹಿಂದೆ ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆಗೂ, ಈಗಿನ ಹೊಂದಾಣಿಕೆಗೂ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿ - ಜೆಡಿಎಸ್ ಸ್ವಾಭಾವಿಕ ಮೈತ್ರಿ ಆಗಿದೆ. ಇದು ಎಲ್ಲ ಕಾರ್ಯಕರ್ತರಲ್ಲಿ ಖುಷಿ ತಂದಿದೆ'' ಎಂದು ಹೇಳಿದರು.

ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಹೋಗ್ತಿಲ್ಲ. ಅದು ಯಾವ ಕಾರಣಕ್ಕೆ ಹೋಗ್ತಿಲ್ಲ ಎಂಬುದನ್ನು ಸಾರ್ವಜನಿಕರಿಗೆ ಅವರೇ ಹೇಳ್ತಾರೆ. ಅದು ನನಗೆ ಸಂಬಂಧವಿಲ್ಲ. ಇದು ನಾಡ ಹಬ್ಬ, ದೇಶದ ಹಬ್ಬ, ಉತ್ಸಾಹ ಹೇಗಿದೆ ಎಂದರೆ ರಾಮ ರಾಜ್ಯವಾಗಬೇಕು ಎಂಬ ಜನಾಭಿಪ್ರಾಯವಿದೆ. ಅದಕ್ಕೆ ನಾನು ಕೈಜೋಡಿಸುತ್ತೇನೆ.

ಮಂಡ್ಯದಲ್ಲಿ ಕುಮಾರಸ್ವಾಮಿ ನಿಲ್ಲಬೇಕು ಎಂಬ ಕಾರ್ಯಕರ್ತರ ಒತ್ತಡವಿದ್ದು, ಕಳೆದ ಬಾರಿಯ ಲೋಕಸಭೆ ಎಲೆಕ್ಷನ್ ಬೇರೆ, ಈ ಚುನಾವಣೆಯೇ ಬೇರೆ, ಇದೀಗ ಮಂಡ್ಯದಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತ ಗೆಲ್ಲುವ ವಾತಾವರಣ ಇದೆ. ಕಳೆದ ಬಾರಿ ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದಾರೆ. ಜೆಡಿಎಸ್ ಬಿಟ್ಟು 2 ರಿಂದ 3 ಪರ್ಸೆಂಟ್ ಮತದಾರರು ಮಾತ್ರ ನಮ್ಮ ಪರ ಇದ್ದರು. ಈಗ ಮಂಡ್ಯದಲ್ಲಿ ಆ ವಾತಾವರಣ ಇಲ್ಲ. ಓರ್ವ ಸಾಮಾನ್ಯ ಕಾರ್ಯಕರ್ತ ಕೂಡ ಸ್ಪರ್ಧಿಸಿದರೂ ಕೂಡ ಗೆಲ್ಲುತ್ತಾನೆ. ಹೊಂದಾಣಿಕೆಯ ಮಾತುಕತೆಯ ಬಳಿಕ ಎಲ್ಲಿ ಮತ್ತು ಯಾರು ಸ್ಪರ್ಧೆ ಮಾಡಬೇಕು ಎನ್ನುವ ತೀರ್ಮಾನ ಮಾಡುತ್ತೇವೆ'' ಎಂದು ತಿಳಿಸಿದರು.

ನಾನು ರೆಸಾರ್ಟ್​ನಲ್ಲಿ  ಉಳಿದ ಸಮಯದಲ್ಲಿ ಮಂಡ್ಯ ಅಷ್ಟೆ ಅಲ್ಲ, ರಾಜ್ಯ ರಾಜಕೀಯ ಹಾಗೂ ಎಲ್ಲ ಜಿಲ್ಲೆಗಳ ಬಗ್ಗೆಯೂ ಚರ್ಚೆ ಆಗಿದೆ. ಎರಡು ರಾಜಕೀಯ ಪಕ್ಷಗಳ ಬಿರುಸಿನ ರಾಜಕೀಯ ಬೆಂಗಳೂರಿನಿಂದ ದೆಹಲಿ ತಲುಪಿದೆ. ಮಂಡ್ಯ, ಮೈಸೂರು ಹಾಗೂ ಹಾಸನದ ಬಗ್ಗೆಯೂ ಚರ್ಚೆ ಆಗಿದೆ. ಮೈತ್ರಿಗೆ ಇಮೇಜ್ ಇದೆ ಹಾಗೂ ಮೋದಿ ಇಮೇಜ್ ಇದೆ. ದೇಶದ ಜನರಿಗೆ ಸ್ಥಿರ ಸರಕಾರ ಬರಬೇಕೆಂಬ ಆಶಯವಿದೆ. ಆದರೆ, ಕಾಂಗ್ರೆಸ್ಸಿನವರು ಕಾಂಗ್ರೆಸ್ ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡ್ತಿದೆ. ಕಾಂಗ್ರೆಸ್​ನಲ್ಲಿ ಜಾತಿಗೊಂದು ಡಿಸಿಎಂ ಸ್ಥಾನ ನೀಡಿ. ಇದರಿಂದ 30ರಿಂದ 35 ಜನಕ್ಕೂ ಡಿಸಿಎಂ ಸ್ಥಾನ ಲಭಿಸುತ್ತೆ. ಆಗ ನಿತ್ಯ ಈ ರೀತಿಯ ಗೊಂದಲ ಇರಲ್ಲ'' ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಯೋಜನೆ ನೋಡಿ ಕೊಳ್ಳಲು ಒಬ್ಬ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆಯಂತೆ. ಅದಕ್ಕೆ ವಾರ್ಷಿಕ 16 ಕೋಟಿ ಖರ್ಚಂತೆ. ಐವರು ಉಪಾಧ್ಯಕ್ಷರಂತೆ ಏನಕ್ಕೆ? ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಇದು ಕಾಂಗ್ರೆಸ್ಸಿನ ಸದ್ಯದ ಪರಿಸ್ಥಿತಿ ನನಗೆ ಅರ್ಥವಾಗಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲವೂ ನಿಜ ಬಣ್ಣ ಬಯಲಾಗುತ್ತದೆ'' ಎಂದು ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com