ಪಕ್ಷಕ್ಕೆ ಯಾರನ್ನೇ ಕರೆತರುವಾಗ ಯೋಚಿಸಿ, ಯೋಗ್ಯವಾದವರನ್ನು ಕರೆತರಬೇಕು: ನಾಯಕರಿಗೆ ಖರ್ಗೆ ಸೂಚನೆ

ಪಕ್ಷಕ್ಕೆ ಯಾರನ್ನೇ ಕರೆತರುವಾಗ ಅವರ ಪೂರ್ವಾಪರ ವಿಚಾರಿಸಿ ಅವರು ನಮ್ಮ ಪಕ್ಷಕ್ಕೆ ಯೋಗ್ಯರೇ ಎಂಬುದನ್ನು ಯೋಚಿಸಿ ಕರೆತರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಶುಕ್ರವಾರ ಕರೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಮಲ್ಲಿಕಾರ್ಜುನ ಖರ್ಗೆ.
ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಮಲ್ಲಿಕಾರ್ಜುನ ಖರ್ಗೆ.
Updated on

ಬೆಂಗಳೂರು: ಪಕ್ಷಕ್ಕೆ ಯಾರನ್ನೇ ಕರೆತರುವಾಗ ಅವರ ಪೂರ್ವಾಪರ ವಿಚಾರಿಸಿ ಅವರು ನಮ್ಮ ಪಕ್ಷಕ್ಕೆ ಯೋಗ್ಯರೇ ಎಂಬುದನ್ನು ಯೋಚಿಸಿ ಕರೆತರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಶುಕ್ರವಾರ ಕರೆ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿರುವ ಖರ್ಗೆ ಅವರು, ಹೀಗೆ ಬಂದ್ರು ಹಾಗೆ ಹೋದ್ರು ಅಂತಾಗಬಾರದು. ಯಾರನ್ನೇ ಪಕ್ಷಕ್ಕೆ ಕರೆತರುವಾಗ ಯೋಚಿಸಿ, ಯೋಗ್ಯವಾದವರನ್ನು ಕರೆತರಬೇಕು ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಯಾವೊಂದು ಸಣ್ಣ ವಸ್ತು ಖರೀದಿಸುವಾಗಲೂ ಅದರ ಗುಣಮಟ್ಟ ಎಂತಹದ್ದು ಎನ್ನುವುದು ಸೇರಿದಂತೆ ಅಳೆದು-ತೂಗಿ ಖರೀದಿಸುತ್ತೇವೆ. ಅದೇ ರೀತಿ, ಪಕ್ಷಕ್ಕೆ ಯಾರನ್ನಾದರೂ ಕರೆತರುವಾಗ, ಅವರ ಹಿನ್ನೆಲೆ, ನಂಬಿರುವ ಸಿದ್ಧಾಂತಗಳನ್ನು ನೋಡಿಕೊಂಡು ಕರೆತರಬೇಕು. ಸುಮ್ನೆ ಹಾಗೆ ಬಂದ್ರು, ಹೀಗೆ ಹೋದ್ರು ಅಂತ ಆಗಬಾರದು ಎಂದು ಜಗದೀಶ ಶೆಟ್ಟರ್ ಹೆಸರು ಪ್ರಸ್ತಾಪಿಸದೆ ತೀಕ್ಷ್ಣವಾಗಿ ಹೇಳಿದರು.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನವರಿ 26 ಭಾರತದ ಇತಿಹಾಸದಲ್ಲಿ ವಿಶೇಷ ದಿನ. ಸಂವಿಧಾನ ಇಲ್ಲದಿದ್ರೆ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ. ಸಂವಿಧಾನ ತಿರುಚುವ ಕುತಂತ್ರವನ್ನು ಆರ್​ಎಸ್​ಎಸ್, ಬಿಜೆಪಿ ಮಾಡುತ್ತಿವೆ. ಸ್ವಾಯತ್ತ ಸಂಸ್ಥೆಗಳನ್ನ ನಾಶ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಪ್ರಧಾನಿ ಮೋದಿ ಆರ್​ಎಸ್​ಎಸ್ ಕೈಗೊಂಬೆಯಾಗಿ ನಡೆದುಕೊಂಡಿದ್ದಾರೆ. ಇದರಿಂದ ನ್ಯಾಯಾಂಗ, ಜಾತ್ಯತೀತ ತತ್ವಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದರು.

ಇವತ್ತು ಸಂವಿಧಾನವನ್ನು ಮುನ್ನಡೆಸುತ್ತಿರುವ ಜನ ಸರಿ ಇಲ್ಲ. ದೇಶದಲ್ಲಿ ಸ್ವಾತಂತ್ರ್ಯ ಬಂದ ದಿನದಿಂದ 2014ರವರೆಗೆ 55 ಲಕ್ಷ ಕೋಟಿ ರೂಪಾಯಿ ಸಾಲ ಇತ್ತು. ಒಂದು ಕೋಟಿ ಐವತ್ತು ಲಕ್ಷದಷ್ಟು ಸಾಲ ಇವತ್ತು ಹೆಚ್ಚಾಗಿದೆ. ಅನುಭವದಿಂದ ದೇಶಕ್ಕೆ ಒಳ್ಳೆಯ ಕೆಲಸವನ್ನು ನಮ್ಮ ನಾಯಕರು ಮಾಡಿಕೊಟ್ಟಿದ್ದಾರೆ. ನಮ್ಮ ಯುವಕರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಷ್ಟ ಇದೆ ಎಂದು ಹೇಳಿದರು.

ಎಲ್ಲರ ಓಟಿಗೂ ಒಂದೇ ಬೆಲೆ. ನನ್ನ ಓಟಿಗೂ ಒಂದೇ ಬೆಲೆ ಟಾಟಾ ಬಿರ್ಲಾ ಓಟಿಗೂ ಒಂದೇ ಬೆಲೆ. ಆದರೆ ಕೆಲವರು ತಾವೇ ಎಲ್ಲ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಕಾಪಾಡಲು ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com