
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಅಡ್ಜಸ್ಟ್ ಮೆಂಟ್ ಮತ್ತು ನೆಪೋಟಿಸಂ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದು, ಬರೆಯೋಕೆ ಹೋದ್ರೆ ಮೊದಲು BJPಯನ್ನೇ ತೊಳೆಯುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡಿದ ಪ್ರತಾಪ್ ಸಿಂಹ, ''ಸಿದ್ದರಾಮಯ್ಯ, ಯಡಿಯೂರಪ್ಪ, ಖರ್ಗೆ, ಕುಮಾರಣ್ಣ ಎಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆಯಾದರೆ.. ಕಂಡವರ ಮಕ್ಕಳನ್ನು ಬೆಳೆಸುವವರಾರು? ಎಂದು ಪ್ರಶ್ನಿಸಿದ್ದಾರೆ.
ಅಂತೆಯೇ ''ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ್ ಅರಸ್ ದೇವರಾದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಯಡಿಯೂರಪ್ಪನವರು, ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸಚಿವ ಕುಮಾರಣ್ಣ ಎಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆಯಾದರೆ ಕಂಡವರ ಮಕ್ಕಳನ್ನು ಬೆಳೆಸುವವರಾರು?.. ಸಿಎಂ ಸಿದ್ದರಾಮಯ್ಯ, ಹೆಚ್.ಡಿ ದೇವೇಗೌಡರು, ಹೆಚ್.ಸಿ ಮಹಾದೇವಪ್ಪ, ಯಡಿಯೂರಪ್ಪ ಸಾಹೇಬರು ನೆಲದಿಂದ ಬೆಳೆದು ಬಂದವರು. ಹಾಗಾಗಿ ಅವರು ನಾಯಕರಾದರು.
ಆದರೆ ಇವರು ಮುಂದಿನ ಜನರೇಷನ್ಗೆ ಏನು ಕೊಟ್ಟರು ಅನ್ನೋದು ಪ್ರಶ್ನೆ. ದೇವರಾಜ್ ಅರಸ್ ಕಂಡವರ ಮಕ್ಕಳನ್ನು ಬೆಳೆಸಿ ದೇವರಾದರು. ಆದರೆ, ಬೇರೆಯವರಿಗೆ ತಮ್ಮ ಮಕ್ಕಳನ್ನು ಬೆಳೆಸುವ ಚಿಂತೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ವಿರುದ್ಧವೂ ಆಕ್ರೋಶ
ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದೇ ಕಥೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ನಲ್ಲಿ ಮಂತ್ರಿಗಳ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಇದಕ್ಕೆ ಬಿಜೆಪಿ ಕೂಡ ಹೊರತಾಗಿಲ್ಲ. ನಮ್ಮ ಪಕ್ಷದಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಸಾಹೇಬರಿಂದ ಹಿಡಿದು ಬೇರೆಯವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ ಎಂದು ಆಕ್ರೋಶ ಹೊರಹಾಕಿದರು.
ಬರೆಯೋಕೆ ಹೋದ್ರೆ ಮೊದಲು BJPಯನ್ನೇ ತೊಳೆಯುತ್ತೇನೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಂಪಿ ಟಿಕೆಟ್ ಯಾರಿಗೆ ಕೊಟ್ಟರು..? ಎಲ್ಲಾ ಅವರವರ ಮಕ್ಕಳಿಗೇ ಕೊಟ್ಟರು. ನಮ್ಮ ಬಿಜೆಪಿ ಪಾರ್ಟಿಯಲ್ಲೂ ಆಗಿದ್ದೂ ಇದೆ. ಎಲ್ಲರಿಗೂ ಅವರವರ ಮಕ್ಕಳದ್ದೇ ಚಿಂತೆ. ಹೀಗೇ ಮುಂದುವರೆದರೆ ಕಂಡವರ ಮಕ್ಕಳು ಹೇಗೆ ಮುಂದೆ ಬರುತ್ತಾರೆ. ಸಮಾಜದ ಬಗ್ಗೆ ಕಾಳಜಿ ಹೊಂದಿರುವವರು ಹೇಗೆ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.
ಇದನ್ನು ಪತ್ರಕರ್ತರು ತಮ್ಮ ಬರವಣಿಗೆ ಮೂಲಕ ತಿದ್ದ ಬೇಕು. ನನ್ನನ್ನೂ ತುಂಬಾ ಜನ ಬರವಣಿಗೆ ಮುಂದುವರೆಸಿ ಎಂದು ಹೇಳುತ್ತಾರೆ. ಆದರೆ ನಾನು ಬರೆಯೋಕೆ ಹೋದ್ರೆ ಮೊದಲು ಬಿಜೆಪಿಯನ್ನೇ ತೊಳೆಯುತ್ತೇನೆ. ನನಗೆ ಎಲ್ಲ ಪಕ್ಷಗಳ ಬಗ್ಗೆಯೂ ಗೊತ್ತು.. ಎಲ್ಲರ ವ್ಯವಹಾರಗಳೂ ಗೊತ್ತು. ಅವರ ಜೊತೆ ಪಾರ್ಟಿಗೆ ಹೋದ್ರೆ ನಮಗೂ ಅದೇ ಬುದ್ದಿ ಬರುತ್ತದೆ.. ಹೀಗಾಗಿ ನಾನು ಅವರೊಂದಿಗೆ ಪಾರ್ಟಿಗೆ ಹೋಗಲ್ಲ ಎಂದರು.
ರಾಜ್ಯದ ರಾಜಕೀಯವನ್ನು ಐದಾರು ಕುಟುಂಬಗಳು ಮಾತ್ರ ನಿಯಂತ್ರಿಸುತ್ತಿವೆ
ರಾಜ್ಯದ ರಾಜಕೀಯವನ್ನು ಐದಾರು ಕುಟುಂಬಗಳು ಮಾತ್ರ ನಿಯಂತ್ರಿಸುತ್ತಿವೆ. ಇದರಿಂದ ಕಂಡವರ ಮಕ್ಕಳು ಬೆಳೆಯಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಹೊರತು ಪಡಿಸಿ ಸಾಹಿತ್ಯ, ನಟನೆ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರ ಮಕ್ಕಳ ಸಾಧನೆ ಅಷ್ಟಕಷ್ಟೇ.. ಆದರೆ ರಾಜಕೀಯದಲ್ಲಿ ಮಾತ್ರ ದೊಡ್ಡ ರಾಜಕಾರಣಿಗಳ ಮಕ್ಕಳೂ ಕೂಡ ದೊಡ್ಡ ರಾಜಕಾರಣಿಗಳಾಗುತ್ತಿದ್ದಾರೆ. ಅವರನ್ನು ದೊಡ್ಡ ರಾಜಕಾರಣಿಗಳಾಗಿ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.
Advertisement