
ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಗೆಲುವು ಸಾಧಿಸಿದ್ದಾರೆ. ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಈ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ,
ಈ ಬಾರಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಕೊನೆ ಹಂತದ ಮತ ಎಣಿಕೆಯವರೆಗೂ ತೀವ್ರ ಕುತೂಹಲತೆಯನ್ನು ಕಾಯ್ದುಕೊಂಡಿತ್ತು. ಪಿಸಿ ಮೋಹನ್ ಈಗಾಗಲೇ ಎರಡು ಬಾರಿ ಸಂಸದರಾಗಿದ್ದು ಮೂರನೆಯ ಬಾರಿ ಕಣದಲ್ಲಿದ್ದರು. ಕಾಂಗ್ರೆಸ್ ನಿಂದ ಮನ್ಸೂರ್ ಅಲಿ ಖಾನ್ ತೀವ್ರ ಪೈಪೋಟಿಯೊಡ್ಡಿದ್ದರು.
ಮತ ಎಣಿಕೆಯ ಆರಂಭದಿಂದಲೂ ಮನ್ಸೂರ್ ಅಲಿ ಖಾನ್ ಸತತವಾಗಿ ಮುನ್ನಡೆ ಸಾಧಿಸುತ್ತಾ ಬಂದಿದ್ದರು. ಮನ್ಸೂರ್ ಅಲಿ ಖಾನ್ 83,381 ಮತಗಳ ಲೀಡ್ ಪಡೆದಿದ್ದರು. ಉತ್ತಮ ಲೀಡ್ ಹಿನ್ನೆಲೆಯಲ್ಲಿ ಗೆಲುವು ನಿಶ್ಚಿತ ಎಂದು ಭಾವಿಸಿದ ಕಾಂಗ್ರೆಸ್ ಬೆಂಬಲಿಕರು ಮತ ಎಣಿಕೆ ಕೇಂದ್ರದ ಎದುರು ಸಂಭ್ರಮಾಚರಣೆ ಆರಂಬಿಸಿದ್ದರು. ಘೋಷಣೆ ಕೂಗಿ ಗೆಲುವಿನ ಚಿಹ್ನೆ ತೋರಿಸಿದ್ದರು. ಈ ವೇಳೆ ಬಿಜೆಪಿ ಬೆಂಬಲಿಗರು ಆತಂಕಕ್ಕೆ ಒಳಗಾಗಿದ್ದರು, ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ಫಲಿತಾಂಶದ ಕನಸು ಕಂಡಿತ್ತು.
ಮಧ್ಯಾಹ್ನ 2 ಗಂಟೆಯ ನಂತರ ಮತಎಣಿಕೆ ರೋಚಕ ತಿರುವು ಪಡೆದುಕೊಂಡಿತು. ಸಿವಿ ರಾಮನ್ ನಗರ, ಗಾಂಧಿನಗರ ಮತ್ತು ಮಹದೇವಪುರದಲ್ಲಿ ಮತದಾನವಾದ ಮತಗಳ ಎಣಿಕೆ ಪ್ರಾರಂಭವಾದಾಗ ಮನ್ಸೂರ್ ಅವರು ಹಿನ್ನಡೆ ಅನುಭವಿಸಿದರು. ಕೊನೆ ಸುತ್ತಿನ ಮತ ಎಣಿಕೆಯಲ್ಲಿ 35,000-40,000 ಮತಗಳ ಅಂತರದಿಂದ ರೋಚಕ ತಿರುವು ಎಂಬಂತೆ ಪಿ ಸಿ ಮೋಹನ್ ಗೆದ್ದು ಬೀಗಿದರು.
ಪಿ ಸಿ ಮೋಹನ್ ಗೆಲುವು ರಾಜ್ಯ ಬಿಜೆಪಿ ಪಾಳ್ಯಕ್ಕೆ ಸಂತಸವನ್ನುಂಟು ಮಾಡಿದೆ. ಕಾರಣ ಅದಾಗಲೇ ರಾಜ್ಯದಲ್ಲಿ 10 ಸ್ಥಾನಗಳನ್ನು ಗೆದ್ದ ವಿಶ್ವಾಸದಲ್ಲಿದ್ದ ಕಾಂಗ್ರೆಸ್,ಮನ್ಸೂರ್ ಅಲಿ ಖಾನ್ ಸೋಲಿನ ಮೂಲಕ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಹೀಗಾಗಿ, ಪಿಸಿ ಮೋಹನ್ ಗೆಲುವು ಕಾಂಗ್ರೆಸ್ ಎರಡಂಕಿ ಫಲಿತಾಂಶದ ನಿರೀಕ್ಷೆಗೆ ಬ್ರೇಕ್ ಹಾಕಿದಂತಾಯಿತು.
ಮತ ಎಣಿಕೆ ಫಲಿತಾಂಶಗಳು ಇಸಿಐ ವೆಬ್‌ಸೈಟ್‌ನಲ್ಲಿ ತಡವಾಗಿ ಅಪ್‌ಲೋಡ್ ಆಗುತ್ತಿತ್ತು. ಚಾಮರಾಜಪೇಟೆ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತಎಣಿಕೆಯಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಮಹದೇವಪುರ, ಸಿವಿ ರಾಮನ್ ನಗರ ಮತ್ತು ಗಾಂಧಿನಗರ ಸೇರಿ ಕ್ಷೇತ್ರದ ಎಲ್ಲರೂ ನನ್ನ ಗೆಲುವಿಗೆ ಸಹಕಾರ ನೀಡಿದ್ದಾರೆಂದು ಪಿಸಿ ಮೋಹನ್ ಅವರು ಹೇಳಿದ್ದಾರೆ.
ಮೋಹನ್ 6,58,915 ಮತಗಳನ್ನು ಪಡೆದರೆ, ಮನ್ಸೂರ್ 6,26,208 ಮತಗಳನ್ನು ಪಡೆದಿದ್ದಾರೆ. 12,126 ರಷ್ಟು ಜನರು ನೋಟಾಗೆ ಮತ ಹಾಕಿದ್ದಾರೆ.
Advertisement