ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪದ ಮೇಲೆ ಮೂವರನ್ನು ಸೋಮವಾರ ಬಂಧನಕ್ಕೊಳಪಡಿಸಲಾಗಿದ್ದು, ಇದರ ಬೆನ್ನಲ್ಲೇ, ರಾಜ್ಯಸಭಾ ಸಂಸದ ಸೈಯದ್ ನಾಸೀರ್ ಹುಸೇನ್ ರಾಜೀನಾಮೆ ನೀಡುವಂತೆ ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ್ ತೋಡೋ ಯಾತ್ರೆಯಲ್ಲಿ ಬಿಝಿಯಾಗಿರುವ ನಡುವಲ್ಲೇ ಬೆಂಗಳೂರಿನ ವಿಧಾನಸೌಧದ ಒಳಗೆ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಕೂಗಿದ್ದಕ್ಕಾಗಿ ರಾಹುಲ್ ಅವರ ಆಪ್ತರನ್ನು ಬೆಂಗಳೂರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಈ ರಾಷ್ಟ್ರ ವಿರೋಧಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು. UAPA ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಹೇಳಿದೆ.
ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಸಂಸದ ನಸೀರ್ ಅವರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದೆ. ಪಾಕಿಸ್ತಾನದ ಡಿಎನ್‌ಎಯನ್ನು ಹಂಚಿಕೊಳ್ಳುವ ಕಾಂಗ್ರೆಸ್, ತನ್ನ ನಿಷ್ಠೆ ಎಲ್ಲಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿದೆ ಎಂದು ವ್ಯಂಗ್ಯವಾಡಿದೆ.
ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಅಯೋಗ್ಯ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮದು ನಾಲಿಗೆಯೋ ಅಥವಾ ಬೇರೆ ಎನಾದರುನಾ!? ಖಾಸಗಿಯಾಗಿ ಮಿನಿಸ್ಟರ್ ಎರಡೆರಡು ಬಾರಿ ತನಿಖೆ ಮಾಡಿಸಿ ವರದಿ ತರಿಸಿಕೊಳ್ಳಬಹುದು. FSL ವರದಿಗೂ ಮುನ್ನವೇ ಕ್ಲೀನ್ ಚಿಟ್ ಕೊಡಬಹುದು. 'ನಾನು ಹೇಳಿದಂಗೆ FSL ವರದಿ ಬರುತ್ತೆ' ಅಂತಾನೂ ಖರ್ಗೆ ಅವರು ಒದರಬಹುದು. ಆದರೆ, ಖಾಸಗಿಯಾಗಿ ಯಾರೂ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬಾರದು, ಹೇಳಬಾರದು ಎಂಬುದು ಇದು ಯಾವ ತುಘಲಕ್ ಧೋರಣೆ?
ಈ ಅಯೋಗ್ಯ ಐಟಿ ಸಚಿವರಾಗಿರುವುದಕ್ಕೆ, ಕಾಂಗ್ರೆಸ್'ನ ಐಟಿ ಸೆಲ್ ಸುಳ್ಳು ಸುದ್ದಿಗಳನ್ನು ರಾಜ್ಯದಲ್ಲಿ ಹರಡುತ್ತಿದೆ. ಅಲ್ಲದೆ ಘಟನೆ ನಡೆದು ವಾರ ಕಳೆದರೂ ನಿಜ ತಿಳಿಸದೆ ಸತ್ಯ ಮರೆಮಾಚಲು ಯತ್ನಿಸುತ್ತಿದೆ ಎಂಬುದನ್ನು "ಪ್ರಿಯಾಂಕ್ ಖರ್ಗೆಯವರ ನಡುಗುವ ಕೈಗಳೇ" ತಿಳಿಸುತ್ತಿವೆ. ಖರ್ಗೆಯವರೇ, ನೀವು ಹೇಳಿದ್ದೇ ಸತ್ಯ ಎಂದು ಕಿವಿ ಮೇಲೆ ಹೂ ಇಟ್ಟುಕೊಳ್ಳಲು ನಿಮ್ಮಷ್ಟು ಶತಮೂರ್ಖರು ಯಾರೂ ಇಲ್ಲ ಎಂದು ಹೇಳಿದೆ.
ಮತ್ತೊಂದು ಪೋಸ್ಟ್ ನಲ್ಲಿ FSL ವರದಿಯ ಅಸಲಿಯತ್ತು ಪಾ'ಕೈ'ಸ್ತಾನ್ ಜಿಂದಾಬಾದ್ ಎಂದವರು ಅರೆಸ್ಟ್. ಪೊಲೀಸರು ಪಾಕಿಸ್ತಾನ್ ಜಿಂದಾಬಾದ್ ಎಂದಿರುವುದು ದೃಢವಾಗುತ್ತಿದ್ದಂತೆ ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಆದರೆ, ಅಯೋಗ್ಯ ಕಾಂಗ್ರೆಸ್ ಮಾತ್ರ ನಾಸೀರ್ ಸಾಬ್ ಜಿಂದಾಬಾದ್ ಎನ್ನುತ್ತಿದೆ. ಮಜಾವಾದಿ ಸಿದ್ಧರಾಮಯ್ಯ ಸರ್ಕಾರ ಪಾಕೈಸ್ತಾನ್ ಎಂದ ಬ್ರದರ್ಸ್‌ಗಳ ಬೆನ್ನಿಗೆ ನಿಂತು ದೇಶ ದ್ರೋಹಿ ಕೃತ್ಯ ಎಸಗುತ್ತಿದೆ. ಸಿದ್ದರಾಮಯ್ಯನವರೇ ನೀವು ನಮ್ಮ ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ? ಎಂದು ಪ್ರಶ್ನಿಸಿದೆ.
ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಲು ವಿಧಾನಸೌಧದ ಒಳಗೆ ಪಾಸ್ ಕೊಟ್ಟು ಕಳಿಸಿದ್ದು ಯಾರು?ಕೂಡಲೇ ಪಾಸ್ ಕೊಟ್ಟ ದೇಶ ದ್ರೋಹಿಗಳು ರಾಜೀನಾಮೆ ಕೊಡಬೇಕು ಹಾಗೂ ಎನ್ಐಎ ತನಿಖೆ ಆಗಬೇಕು ಎಂದು ಆಗ್ರಹಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪೋಸ್ಟ್ ಮಾಡಿ, ಮುಖ್ಯಮಂತ್ರಿಗಳೇ ರಾಜ್ಯ ಹಾಗೂ ಜನರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ, ದೇಶ ದ್ರೋಹಿ ಉಗ್ರರು ಹಾಗೂ ಪಾತಕಿಗಳಿಗೆ ಕರ್ನಾಟಕ ನೆಲೆಯಾಗಬಾರದೆಂಬುದಷ್ಟೇ ನಮ್ಮ ಪ್ರಾಮಾಣಿಕ ಕಾಳಜಿ, ಪ್ರಜಾಪ್ರಭುತ್ವದ ಹೃದಯ ಮಂದಿರ ವಿಧಾನಸೌಧಕ್ಕೆ ಧಾವಿಸಿ ಬಂದು ಪೋಲಿಸರ ಎದುರೇ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವಷ್ಟರ ಮಟ್ಟಿಗೆ ವಿದ್ರೋಹಿಗಳು ಧೈರ್ಯತೋರುತ್ತಾರೆ, ಇದರ ಬೆನ್ನಲೇ ರಾಜಧಾನಿಯಲ್ಲಿ ಬಾಂಬ್ ಸ್ಫೋಟವಾಗುತ್ತದೆ ಎಂದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿ ಅಡಗಿ ಕುಳಿತಿದೆ? ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ರಾಜ್ಯದ ಜನರನ್ನು ಕಾಡುತ್ತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂಗತ ಶಕ್ತಿಗಳಿಗೆ ಸ್ವತಂತ್ರ್ಯ ದೊರೆತ ವಾತಾವರಣ ನಿರ್ಮಾಣವಾಗಿದೆ, ಜನರು ಆತಂಕದ ನೆರಳಿನಲ್ಲಿ ಬದುಕುವ ಸ್ಥಿತಿ ಬಂದೊದಗಿದೆ. ‘ಬೆಂದ ಮನೆಯಲ್ಲಿ ಗಳ ಇರಿಯುವ’ ರಾಜಕಾರಣ ಮಾಡುವ ದುರ್ಗತಿ ಬಿಜೆಪಿಗೆ ಬಂದಿಲ್ಲ ವಿಧಾನ ಸೌಧದಲ್ಲೇ ‘ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೇಳಿಬಂದರೆ ನಾವು ಕೈಕಟ್ಟಿ ಕೂರಬೇಕೇ ? ಈ ಸಂಬಂಧ ಮಾಧ್ಯಮಗಳ ವರದಿ ನೀವು ನಂಬಲ್ಲಿಲ್ಲ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಲಿಸಲಿಲ್ಲ, ರಾಷ್ಟ್ರ ಹಿತಾಸಕ್ತಿಯ ಈ ಗಂಭೀರ ಪ್ರಕರಣದ ಬಗ್ಗೆ ತಾತ್ಸಾರ ತೋರುತ್ತಿರುವುದರ ನಿಮ್ಮ ವರ್ತನೆ ರಾಷ್ಟ್ರ ದ್ರೋಹಿಗಳನ್ನು ರಕ್ಷಿಸಲು ಆದ್ಯತೆ ನೀಡುತ್ತಿರುವಂತಿದೆ. ಖಾಸಗಿ FSL ವರದಿ ಈಗಾಗಲೇ ಈ ಕುರಿತು ಧೃಡೀಕರಣ ನೀಡಿಯಾಗಿದೆ, ಸರ್ಕಾರಿ ವರದಿ ಕೂಡ ನಿಮ್ಮ ಕೈ ಸೇರಿದೆ ಆದಾಗ್ಯೂ ವರದಿ ಇನ್ನೂ ತಲುಪಿಲ್ಲ ಎಂಬ ಹಸೀ ಸುಳ್ಳು ಹೇಳುತ್ತಿರುವ ನಿಮ್ಮ ನಡೆ, ನಿಮ್ಮ ರಾಷ್ಟ್ರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪೋಸ್ಟ್ ಮಾಡಿ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವರದಿ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಡೆಗೂ ಜನಾಕ್ರೋಶಕ್ಕೆ ಮಣಿದು ಮೂರು ಆರೋಪಿಗಳನ್ನು ಬಂಧಿಸಿದೆ.
FSL ವರದಿಯಲ್ಲಿ ಘೋಷಣೆ ಕೂಗಿದ್ದು ಧೃಢಪಟ್ಟ ನಂತರವೇ ಈ ಮೂವರು ಆರೋಪಿಗಳ ಬಂಧನವಾಗಿರುವುದು ಸ್ಪಷ್ಟಾಗಿದ್ದರೂ, ಸರ್ಕಾರ ಇನ್ನೂ FSL ವರದಿ ಬಹಿರಂಗ ಮಾಡದಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ, ಯಾರನ್ನೂ ರಕ್ಷಿಸುತ್ತಿಲ್ಲ ಎನ್ನುವುದಾದರೆ ವರದಿ ಬಹಿರಂಗ ಮಾಡಲು ಹಿಂಜರಿಕೆ ಏಕೆ?
ಸರ್ಕಾರ ಈ ಮೂವರು ಆರೋಪಿಗಳನ್ನು ಬಂಧಿಸಿದರೆ ಸಾಲದು, ಇವರ ಮೇಲೆ IPC ಯ ಸೆಕ್ಷನ್ 124A ಅಡಿ ದೇಶದ್ರೋಹ ಪ್ರಕರಣ ದಾಖಲಿಸಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರನ್ನೂ ಸಹ ಈ ಪ್ರಕರಣದಲ್ಲಿ ಶಾಮೀಲು ಮಾಡಬೇಕು. ಇದರ ಜೊತೆಗೆ 25 ಜನರಿಗೆ ಪಾಸ್ ನೀಡಿ ಸುಮಾರು ನೂರು ಜನ ಬೆಂಬಲಿಗರಿಗೆ ವಿಧಾನಸೌಧದ ಒಳಗೆ ಪ್ರವೇಶ ನೀಡಿ ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ವಿಚಾರಣೆ ನಡೆಸಬೇಕು.
ಈ ಇಡೀ ಪ್ರಕರಣ ಕಾಂಗ್ರೆಸ್ ಪಕ್ಷದ ದೇಶಪ್ರೇಮಕ್ಕೆ, ರಾಷ್ಟ್ರ ನಿಷ್ಠೆಗೆ ಒಂದು ಅಗ್ನಿ ಪರೀಕ್ಷೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ನಡೆಯನ್ನ ಬರೀ ಕರ್ನಾಟಕ ಅಲ್ಲ, ಇಡೀ ದೇಶದ ಜನತೆ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement