ಹುಬ್ಬಳ್ಳಿ: ಕೊರೋನಾ ಸಾವಿನಲ್ಲೂ ಮಾನವೀಯತೆ ಮರೆತು ಲೂಟಿ ಮಾಡಿದ ಬಸವರಾಜ ಬೊಮ್ಮಾಯಿ ಅವರ ಮಗ ಗೆಲ್ಲಬೇಕಾ? ಎಂದು ಮತದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಪ್ರಶ್ನಿಸಿದರು.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಹಾವನೂರು ಗ್ರಾಮದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಂದರೆ ಭ್ರಷ್ಟಾಚಾರ ಜನತಾ ಪಾರ್ಟಿ. ಕೋವಿಡ್ ವೇಳೆ ಹೆಣಗಳಿಂದಲೂ ಹಣ ಲೂಟಿ ಮಾಡಿದ್ದಾರೆ. ಕರ್ನಾಟಕ ಇತಿಹಾಸದಲ್ಲಿ ಇದೆ ಮೊದಲು. ಹೆಣಗಳ ಮೇಲೆ ಹಣ ಮಾಡಿರುವ ಸಿಎಂ ಇದ್ದರೆ ಅದು ಬಸವರಾಜ ಬೊಮ್ಮಾಯಿ ಎಂದು ವಾಗ್ದಾಳಿ ನಡೆಸಿದರು.
ಹೆಣಗಳ ಮೇಲೂ ಹಣ ಮಾಡಿದವರ ಮಗ ಗೆಲ್ಲಬೇಕಾ? ಕೊರೋನಾ ಸಂದರ್ಭದಲ್ಲಿ ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದು ದಾಖಲೆ ಮಾಡಿದವರು ಬೊಮ್ಮಾಯಿ. ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದ ಏಕೈಕ ಸರ್ಕಾರ ಬೊಮ್ಮಾಯಿ ಅವರದ್ದಾಗಿತ್ತು. ಕೋವಿಡ್ ಸಂದರ್ಭದಲ್ಲೂ, ಸಂಕಷ್ಟದಲ್ಲಿ ನರಳುವಾಗಲೂ ಲಂಚ ಪಡೆದವರ ಪುತ್ರನನ್ನು ಸೋಲಿಸಿ ಎಂದು ಹೇಳಿದರು.
ಬೊಮ್ಮಾಯಿ ಪುತ್ರ ಗೆಲ್ಲಬೇಕಾ? ಯಾಸಿರ್ ಪಠಾಣ್ ಗೆಲ್ಲಬೇಕಾ? ನೀವೇ ನಿರ್ಧಾರ ಮಾಡಿ. 160 ಭರವಸೆಗಳ ಪೈಕಿ 158 ಭರವಸೆ ಈಡೇರಿಸಿದ್ದೇವೆ. 5 ಗ್ಯಾರಂಟಿ ಯೋಜನೆಗಳನ್ನು ಸಹ ಜಾರಿ ಮಾಡಿದ್ದೇವೆ. ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು. ಗ್ಯಾರಂಟಿ ಜಾರಿಯಾದರೆ ರಾಜ್ಯ ದಿವಾಳಿ ಆಗುತ್ತೆ ಎಂದು ಹೇಳಿದ್ದರು. ಅಧಿಕಾರ ವಹಿಸಿಕೊಂಡ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ.
ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ವಿರುದ್ಧ ಸಾಮಾನ್ಯ ಕುಟುಂಬದ ಪಠಾಣ್ ಅವರನ್ನು ಗೆಲ್ಲಿಸಿ ಎಂದರು. ಅಜ್ಜಂಪೀರ್ ಖಾದ್ರಿ ನನಗೆ ತುಂಬಾ ಬೇಕಾದವರು. ನನಗಾಗಿ ಖಾದ್ರಿ ಶಾಸಕ ಸ್ಥಾನ ತ್ಯಜಿಸಲು ಸಿದ್ದರಾಗಿದ್ದರು. ನಾನು ಸೋತು, ಖಾದ್ರಿ ಗೆದ್ದಿದ್ದಾಗ ಸ್ವತಃ ಖಾದ್ರಿಯವರೇ ಬಂದು ಅವರು ಶಾಸಕ ಸ್ಥಾನವನ್ನು ನನಗಾಗಿ ಬಿಟ್ಟು ಕೊಡಲು ಸಿದ್ದರಾಗಿದ್ದರು. ನಮ್ಮಿಬ್ಬರ ನಡುವೆ ಅಷ್ಟು ಆತ್ಮೀಯತೆ. ಹೀಗಾಗಿ ನಮ್ಮ ಮಾತಿಗೆ ಬೆಲೆ ನೀಡಿ ನಾಮಪತ್ರ ವಾಪಾಸ್ ಪಡೆದು ಪಠಾಣ್ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದರೆ, ರೈತರ ಸಾಲ ಮನ್ನಾ ಮಾಡಲು ನಮ್ಮ ಬಳಿ ಪ್ರಿಂಟಿಂಗ್ ಮೆಷಿನ್ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಹೋಗಲಿ ಬಸವರಾಜ ಬೊಮ್ಮಾಯಿ ಅವರೂ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡಲಿಲ್ಲ. ಇವರು ಯಾವ ಮುಖ ಇಟ್ಟುಕೊಂಡು ರೈತರ ಮತ ಕೇಳುತ್ತಿದ್ದಾರೆಂದು ಹೇಳಿದರು.
ವಕ್ಫ್ ಆಸ್ತಿ ಈಗ ಆಗಿರೋದಾ? ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನೋಟಿಸ್ ಕೊಟ್ಟಿದಾರೆ. ಸದಾನಂದಗೌಡ, ಶೆಟ್ಟರ್, ಬೊಮ್ಮಾಯಿ ಇದ್ದಾಗಲೂ ನೋಟಿಸ್ ಕೊಟ್ಟಿದ್ದಾರೆ. ಉಪ ಚುನಾವಣೆಗೋಸ್ಕರ ರಾಜಕೀಯ ಮಾಡುತ್ತಿದ್ದಾರೆ. ಯಾವ ಕಾರಣಕ್ಕೂ ಕೂಡಾ ರೈತರನ್ನು ಒಕ್ಕಲೆಬ್ಬಿಸಲ್ಲ. ವಕ್ಫ್ ಬೋರ್ಡ್ನವರು ಯಾವ ಕಾರಣಕ್ಕೂ ಖಾಲಿ ಮಾಡಿಸಂಗಿಲ್ಲ. ಕಂದಾಯ ದಾಖಲೆಗಳಲ್ಲಿ ವಕ್ಫ್ ಅಂತ ಇದ್ದರೂ ರದ್ದು ಮಾಡಲು ಹೇಳಿದಿನಿ. ಆದರೂ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂದು ದೂರಿದರು.
ನನ್ನ ಮೇಲೆ ಸುಳ್ಳು ಆರೋಪ ಮಾಡಿ ಕಳಂಕ ತರುವ ಕೆಲಸ ಮಾಡ್ತಿದ್ದಾರಲ್ವಾ? ಈ ಬಿಜೆಪಿಯವರನ್ನು ನಂಬುತ್ತೀರಾ? ಸಿದ್ದರಾಮಯ್ಯನನ್ನು ಕಂಡರೆ ಅವರಿಗೆ ಹೊಟ್ಟೆ ಉರಿ, ನನ್ನ ಜೀವನ ತೆರೆದಿಟ್ಟ ಪುಸ್ತಕ. ಪಠಾಣ್ ಅವರನ್ನು ಗೆಲ್ಲಿಸಿದರೆ ಬಿಜೆಪಿಯವರಿಗೆ ಉತ್ತರ ಕೊಟ್ಟ ಹಾಗೆ ಆಗುತ್ತೆ. ಪಠಾಣ್ ಗೆದ್ದರೆ ನಾನು ಗೆದ್ದಂತೆ. ಶಿಗ್ಗಾಂವಿ, ಸವಣೂರು ಏತ ನೀರಾವರಿ ಯೋಜನೆಗಳಿಗೆ ಮತ್ತು ಬಾಡ ಕನಕ ಅರಮನೆಗೆ ಅನುದಾನ ಬಿಡುಗಡೆ ಮಾಡಿದ್ದೇ ನಾನು ಎಂದು ಸಿಎಂ ತಿಳಿಸಿದರು.
Advertisement