ಹುಬ್ಬಳ್ಳಿ: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಹೀಗಾಗಿ ಪಡಿತರ ಚೀಟಿಗಳನ್ನು ಕಡಿತ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ನಿರ್ವಹಿ,ಸು ಸಾಧ್ಯವಾಗದ ಕಾರಣ ಒಂದರ ಹಿಂದೆ ಒಂದರಂತೆ ಯೋಜನೆಗಳನ್ನು ಹಿಂಪಡೆಯುತ್ತಿದೆ. ಕಾಂಗ್ರೆಸ್ ಸರಕಾರ 10 ಕೆ.ಜಿ ಅಕ್ಕಿ ಘೋಷಣೆ ಮಾಡಿದರೂ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಪ್ರಸ್ತುತ ಕೇಂದ್ರ ನೀಡುತ್ತಿರುವ 5 ಕೆಜಿ ಅಕ್ಕಿಯನ್ನು ಮಾತ್ರ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಆಹಾರ ಭದ್ರತೆಗಾಗಿ ವಾರ್ಷಿಕ 2.11 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಶೇ.50ರಷ್ಟು ನಗರ ಮತ್ತು ಶೇ.75ರಷ್ಟು ಗ್ರಾಮೀಣ ಜನರಿಗೆ ಉಚಿತ ಆಹಾರವನ್ನು ಒದಗಿಸುತ್ತದೆ. ಪ್ರತಿಯೊಬ್ಬ ಅರ್ಹ ಪಡಿತರರಿಗೂ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಗೋಧಿ, ಭತ್ತ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲಾಗುತ್ತಿದೆ. ಇಷ್ಟಾದರೂ ದಿಢೀರನೇ ಬಿಪಿಎಲ್ ಕಾರ್ಡ್ ಏಕೆ ಕಡಿತ ಮಾಡಲಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಈ ಕುರಿತು ರಾಜ್ಯದ ಆಹಾರ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆಂದು ತಿಳಿಸಿದರು.
ಬಳಿಕ ಶಕ್ತಿ ಯೋಜನೆಯನ್ನು ಟೀಕಿಸಿದ ಅವರು, ರಾಜ್ಯದ ಹಲವಾರು ಭಾಗಗಳಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಹಲವು ಮಾರ್ಗಗಳಲ್ಲಿ ಸೇವೆ ನಿಲ್ಲಿಸಲಾಗಿದೆ ಎಂದು ಕಿಡಿಕಾರಿದರು.
ಗೃಹ ಲಕ್ಷ್ಮಿ ಯೋಜನೆ ಕುರಿತು ಮಾತನಾಡಿ, ಒಂದು ಕಡೆ ಸರ್ಕಾರ ಸಹಾಯಧನ ನೀಡುತ್ತಿದೆ. ಮತ್ತೊಂದೆಡೆ ವಿದ್ಯುತ್ ದರವನ್ನು ಹೆಚ್ಚಿಸಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಕೊಡಲೂ ಆಗದೆ, ಬಿಡಲೂ ಆಗದ ಸ್ಥಿತಿಯಲ್ಲಿದ್ದು, ಬಹುತೇಕ ಎಲ್ಲಾ ಗ್ಯಾರಂಟಿಗಳು ಅರ್ಧಕ್ಕೆ ನಿಂತಿವೆ. ಇದನ್ನೆಲ್ಲಾ ನೋಡಿದರೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯತ್ತ ಮುಖ ಮಾಡಿದೆ ಎಂಬುದು ಗೊತ್ತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Advertisement