ಬೆಂಗಳೂರು: ನೀವು ಪ್ರಾಮಾಣಿಕರೇ ಆಗಿದ್ದರೆ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ ಜನರ ಬಳಿ ಕ್ಷಮೆಯಾಚಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಭಾಗಿಯಾಗಲು ನವದೆಹಲಿಗೆ ತೆರಳಿರುವ ವಿಜಯೇಂದ್ರ ಅವರು, ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನಗೆಳನ್ನು ಜಾರಿಗೊಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಅನರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್‌ಗಳನ್ನು ತೆಗೆದುಹಾಕುವುದಕ್ಕೆ ನಾವು ವಿರೋಧಿಸುತ್ತಿಲ್ಲ, ಆದರೆ ಸರ್ಕಾರವು ಕುಂಟು ನೆಪ ಹೇಳುತ್ತಿದೆ. ಲಕ್ಷಗಟ್ಟಲೆ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ ಎಂದು ಕಿಡಿಕಾರಿದರು.
ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ಅವೈಜ್ಞಾನಿಕವಾಗಿ ರದ್ದುಗೊಳಿಸುವ ಮೂಲಕ ರಾಜ್ಯ ಸರ್ಕಾರ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯಡಿ ನೀಡಬೇಕಿರುವ ಹಣ ಉಳಿಸಲು ಯೋಚಿಸುತ್ತಿದೆ. ಕಪಟ ನಾಟಕವಾಡುತ್ತಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸು ಕ್ರೋಡೀಕರಿಸಲಾಗದೆ ಮುಖ್ಯಮಂತ್ರಿ ಪರದಾಡುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ. ತಮ್ಮ ಹುಳುಕು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ಹೊಣೆ ಆಗಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಚಿವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಈ ಸರ್ಕಾರ ಬಂದ ಬಳಿಕ ವಾಲ್ಮೀಕಿ ನಿಗಮದ ಹಗರಣ ನಡೆದಿದೆ. ನೂರಾರು ಕೋಟಿ ಕೊಳ್ಳೆ ಹೊಡೆದು ಚುನಾವಣೆ ಎದುರಿಸಿದ್ದು, ಈಗಾಗಲೇ ತನಿಖೆ ಎದುರಿಸುತ್ತಿದ್ದಾರೆ. ಸಚಿವರು ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿ ಬಂದಿದ್ದಾರೆ. 500 - 600 ಕೋಟಿಯ ಮದ್ಯ ಹಗರಣ ಬೆಳಕಿಗೆ ಬರುತ್ತಿದೆ. ಸ್ವತಃ ಸಿಎಂ ಅವರೇ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಮೈಸೂರಿನ ಮುಡಾ ಹಗರಣ ಸಂಬಂಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದೇವೆ. ಕಾಂಗ್ರೆಸ್ಸಿಗರಿಗೆ ಅನುಕೂಲ ಆಗುವಂತೆ ತನಿಖಾ ಸಮಿತಿ, ಆಯೋಗ ನೇಮಿಸಲಾಗುತ್ತಿದೆ ಎಂದು ಟೀಕಿಸಿದರು.
ಲೋಕಾಯುಕ್ತವನ್ನು ದುರುಪಯೋಗ ಮಾಡುತ್ತಿದ್ದಾರೆ. ಸಚಿವ ಬೈರತಿ ಸುರೇಶ್ ಹೆಲಿಕಾಪ್ಟರ್ನಲ್ಲಿ ಮೈಸೂರಿಗೆ ಹೋದದ್ದು, ಅಮಾನತಾಗಬೇಕಾದ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ವೆಂಕಟಾಚಲಪತಿ ಆಯೋಗದಿಂದ ತನಿಖೆ, ದಾಖಲಾತಿ ಭಸ್ಮ ಮಾಡಿದ್ದನ್ನು ವಿಜಯೇಂದ್ರ ಅವರು ವಿವರಿಸಿದರು. ಪ್ರಾಮಾಣಿಕ ತನಿಖೆ ನಡೆದಿಲ್ಲ ಎಂದು ಆಕ್ಷೇಪಿಸಿದರು.
ಸಿಎಂ ಬಾಮೈದ, ಲೋಕಾಯುಕ್ತ ಅಧಿಕಾರಿಗಳನ್ನು ರಾತ್ರೋರಾತ್ರಿ ಭೇಟಿ ಮಾಡಿದ್ದಾರೆ. ಆರೋಪಿ ನಂ 1 ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಜವಾಗಿ ಪ್ರಾಮಾಣಿಕರೇ ಆಗಿದ್ದರೆ, ಸಿಎಂ ಸ್ಥಾನದ ಘನತೆ, ಗೌರವ ಉಳಿಸುವ ಕಾಳಜಿ ಕಿಂಚಿತ್ತಾದರೂ ಇದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಅದನ್ನು ಬಿಟ್ಟು ಅಧಿಕಾರ ದುರುಪಯೋಗ ಪಡಿಸಿಕೊಂಡು ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರಿ, ಅವರಿಗೆ ಬೇಕಾದಂತ ವರದಿ, ಕ್ಲೀನ್ ಚಿಟ್ ಪಡೆಯುವ ಪ್ರಯತ್ನವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಅತಿ ಶೀಘ್ರವೇ ಇವರಿಗೆ ಕ್ಲೀನ್ ಚಿಟ್ ಸಿಗಲಿದೆ ಎಂದು ಹೇಳಿದರು.
ಭರವಸೆ ಈಡೇರಿಸಲು ಸಾಧ್ಯವಾಗದೇ, ಹಣ ಕ್ರೋಡೀಕರಣ ಮಾಡಲಾಗದೆ ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರೆ. ಭಾಗ್ಯಲಕ್ಷ್ಮಿ ಯೋಜನೆಗೆ ಕತ್ತರಿ ಹಾಕಿದ್ದಾರೆ. ಹಾಲಿನ ಪ್ರೋತ್ಸಾಹಧನ ಸುಮಾರು 1 ಸಾವಿರ ಕೋಟಿಗೂ ಹೆಚ್ಚು ಬಾಕಿ ಇದೆ. ಯಡಿಯೂರಪ್ಪ ಅವರು ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯ 4 ಸಾವಿರವನ್ನೂ ನಿಲ್ಲಿಸಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ತಮ್ಮ ಹುಳುಕು ಮುಚ್ಚಿ ಹಾಕಲು ಕೇಂದ್ರ ಸರ್ಕಾರವನ್ನು ದೂರುತ್ತಾರೆ. ಎಲ್ಲ ವಿಚಾರದಲ್ಲೂ ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಲಾಗುತ್ತಿದೆ ಎಂಬ ಆರೋಪ ಕುರಿತು ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಸರ್ಕಾರ ಉರುಳಿಸಲು ಆಸಕ್ತಿ ಹೊಂದಿಲ್ಲ. ನಿಮ್ಮ ನಡವಳಿಕೆಯಿಂದ ಕಾಂಗ್ರೆಸ್ ಶಾಸಕರೇ ನಿಮ್ಮ ಪಕ್ಷದ ಸರ್ಕಾರದ ವಿರುದ್ಧ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಅಭಿವೃದ್ಧಿ ಇಲ್ಲದ ಆಡಳಿತ ವೈಖರಿಯೇ ಇದಕ್ಕೆ ಕಾರಣ ಎಂದು ಟೀಕಿಸಿದರು.
ಆಡಳಿತ ಪಕ್ಷದ ಸಚಿವರು, ಶಾಸಕರಲ್ಲಿ ಮುಖ್ಯಮಂತ್ರಿಗಳ ಬಗ್ಗೆ ಭರವಸೆ ಕುಸಿದು ಬಿದ್ದಿದೆ. ಶಾಸಕರ ಅಸಮಾಧಾನ ಭುಗಿಲೆದ್ದಿರುವ ಸಂದರ್ಭದಲ್ಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೂ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಅನಿಸಿದೆ. ಹೀಗಾಗಿಯೇ ಮೈಸೂರಿನಲ್ಲಿ ಗೃಹ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
Advertisement