ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ಸೈಟ್‌ಗಳನ್ನು ವಾಪಸ್ ಮಾಡುವುದಾಗಿ ಮುಡಾಗೆ ಪತ್ರ ಬರೆದಿದ್ದು, ಈ ಪತ್ರದಿಂದ ಬಿಜೆಪಿಗೆ ಮತ್ತೊಂದು ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ.
ತಪ್ಪೇ ಮಾಡುತ್ತಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪು ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ. ಆದರೆ, ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ? ಕದ್ದ ಮಾಲನ್ನು ವಾಪಸ್ಸು ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಮುಡಾ ಸೈಟ್ ವಾಪಸ್ ಕೊಟ್ಟಿರುವುದು ರಾಜಕೀಯ ಡ್ರಾಮಾ. ಸಿದ್ದರಾಮಯ್ಯ ಅವರು ಇನ್ನು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮೂಡಾ ನಿವೇಶನಗಳ ವಾಪಸ್ ನೀಡುವ ನಿರ್ಧಾರವು ಹಗರಣದಲ್ಲಿ ತಪ್ಪನ್ನು ಅಧಿಕೃತವಾಗಿ ಒಪ್ಪಿಕೊಂಡಂತೆ. ಹೀಗಾಗಿ ಸಿದ್ದರಾಮಯ್ಯ ಅವರು ತಕ್ಷಣವೇ ರಾಜೀನಾಮೆ ನೀಡಬೇಕು, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.
ಪಾರ್ವತಿ ಅವರು ಅವರಾಗಿಯೇ ಪತ್ರ ಬರೆದಿದ್ದಾರೋ ಅಥವಾ ಬಲವಂತವಾಗಿ ಬರೆದಿದ್ದಾರೋ ಗೊತ್ತಿಲ್ಲ. ನಾನು ಜಗ್ಗಲ್ಲ, ಬಗ್ಗಲ್ಲ ಎಂದು ಸಿದ್ದರಾಮಯ್ಯ ಆರ್ಭಟ ಮಾಡುತ್ತಿದ್ದರು. ನಾನು ಯಾಕೆ ಸೈಟ್ ವಾಪಸ್ ಕೊಡಬೇಕು, ನನಗೆ 62 ಕೋಟಿ ಕೊಡುತ್ತಾರಾ ಎಂದು ಸಿದ್ದರಾಮಯ್ಯ ಹೇಳಿದ್ದರು. ಸಾಮಾಜಿಕ ಕಾರ್ಯಕರ್ತರು ಕೊಟ್ಟ ದೂರು, ಅದರ ಆಧಾರದಲ್ಲಿ ರಾಜ್ಯಪಾಲರು ಕೊಟ್ಟ ಅನುಮತಿ, ಕೋರ್ಟ್ ಆದೇಶ ಎಲ್ಲವೂ ಆಗಿದೆ. ಇದೀಗ ಸಿದ್ದರಾಮಯ್ಯ ಸೈಟ್ ವಾಪಸ್ ಕೊಡುವ ನಿರ್ಧಾರ ಕೈಗೊಂಡಿದ್ದಾರೆ ಎಂದರೆ ಕಾನೂನಿನ ಕುಣಿಕೆಯಿಂದ ಪಾರಾಗಬೇಕು, ರಾಜಕೀಯ ಅನುಕಂಪ ಪಡೆಯಬೇಕು, ಸ್ವಪಕ್ಷದಲ್ಲೇ ತೊಡೆ ತಟ್ಟುವವರನ್ನು ಎದುರಿಸಬೇಕು ಎಂದಷ್ಟೇ. ಸೈಟ್ ವಾಪಸ್ ಕೊಟ್ಟಿರುವುದು ರಾಜಕೀಯ ಡ್ರಾಮಾ ಎಂದರು.
ಮುಡಾ ಪ್ರಕರಣದ ವಿಚಾರವಾಗಿ ನಾವು ಹೋರಾಟ ಮಾಡಿದ್ದೆವು. ಸಿಎಂ ನಮ್ಮ ಹೋರಾಟಕ್ಕೆ ಕಿಂಚಿತ್ತೂ ಬೆಲೆ ಕೊಡಲಿಲ್ಲ. ಹಿಂದೆ ಭ್ರಷ್ಟಾಚಾರ ಆರೋಪ ಬಂದಾಗ ಎಸಿಬಿ ರಚನೆ ಮಾಡಿದ್ದರು. ಲೋಕಾಯುಕ್ತ ಸಂಸ್ಥೆ ಮುಚ್ಚಿ ಹಾಕಿ ಎಸಿಬಿ ರಚನೆ ಮಾಡಿದ್ದರು. ಎಸಿಬಿ ರಚಿಸಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಮುಡಾ ಸೈಟ್ ಹಂಚಿಕೆ ಕೇಸ್ನಲ್ಲಿ ಎರಡು ವಿಚಾರ ಗಮನಿಸಬೇಕು. ಸಿಎಂ ಪತ್ನಿಗೆ 14 ನಿವೇಶನ ಹಂಚಿಕೆ ಮಾಡಿದ್ದು ಒಂದು ಕಡೆಯಾದರೆ. ಸಿಎಂ ಹಿಂಬಾಲಕರು, ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೂ ಸೈಟ್ ಹಂಚಿಕೆ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಮುನ್ನ ಸಿದ್ದರಾಮಯ್ಯ ರಾಜ್ಯಪಾಲರನ್ನು ಕೇಂದ್ರದ ಕೈಗೊಂಬೆ ಎಂದು ಆರೋಪಿಸಿದಕ್ಕೆ ಕ್ಷಮೆಯಾಚಿಸಬೇಕು ಎಂದ ಆಗ್ರಹಿಸಿದರು.
ಅಲ್ಲದೆ, ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.
Advertisement