NDA ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ ಯತ್ನ, ಮೋದಿ ಬಲಪಡಿಸಲು ನಿಖಿಲ್ ಕಣಕ್ಕೆ: HD ಕುಮಾರಸ್ವಾಮಿ
ಬೆಂಗಳೂರು: ಕೇಂದ್ರದ ಆಡಳಿತಾರೂಢ ಎನ್‌ಡಿಎ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪ್ರಯತ್ನಿಸುತ್ತಿದ್ದು, ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲ ಹೆಚ್ಚಿಸಲು ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲಾಗಿದೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದರು.
ಚನ್ನಪಟ್ಟಣ ಉಪಚುನಾವಣೆಗೆ ಶುಕ್ರವಾರ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಜೆಡಿಎಸ್ ಟಿಕೆಟ್‌ನಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕಣಕ್ಕಿಳಿದಿದ್ದಾರೆಂದು ಹೇಳಿದರು.
ನಿಖಿಲ್ ಅಭ್ಯರ್ಥಿಯಾಗಿರುವುದು ಪೂರ್ವ ಯೋಜಿತ ನಡೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ನಾವು ಸರಣಿ ಸಭೆಗಳನ್ನು ನಡೆಸಿದ್ದೇವೆ. ಕೇಂದ್ರದ ಎನ್‌ಡಿಎ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂಚು ರೂಪಿಸಿವೆ ಎಂದು ಆರೋಪಿಸಿದರು.
ಇದೇ ವೇಳೆ ಕ್ಷೇತ್ರದಲ್ಲಿ ಶಾಸಕಾರಿ ಮಾಡಿರುವ ಕಾಮಗಾರಿ ವಿವರ ಕೇಳಿದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿಯವರು ತಿರುಗೇಟು ನೀಡಿದರು. ತಾವು ನೀಡಿದ ಕೊಡುಗೆಗಳನ್ನು ಪಟ್ಟಿ ಮಾಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ವಿಧಾನಸಭೆಯ ಎಲ್.ಪಿ ಆರ್.ಅಶೋಕ, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್.ಮಂಜುನಾಥ್, ಮಾಜಿ ಡಿಸಿಎಂ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗವಹಿಸಿದ್ದ ಸಾರ್ವಜನಿಕ ರ್ಯಾಲಿ ನಡೆಸಿದರು. ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ ಅವರು, 2023ರಲ್ಲಿ ತಮ್ಮನ್ನು ಬೆಂಬಲಿಸಿದಂತೆ ಪುತ್ರನಿಗೂ ಬೆಂಬಲ ನೀಡುವಂತೆಗೆ ಮನವಿ ಮಾಡಿಕೊಂಡರು.
ಕಾಂಗ್ರೆಸ್‌ನಿಂದ ದಾರಿ ತಪ್ಪಬೇಡಿ... ಜೆಡಿಎಸ್ ಸದಾ ನಿಮ್ಮ ಹಿತಾಸಕ್ತಿ ಕಾಪಾಡಿದೆ’ ಎಂದು ಮುಸ್ಲಿಮರಲ್ಲಿ ಮನವಿ ಮಾಡಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, 2023ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಿಂದ ನಿಖಿಲ್ ಅವರನ್ನು ಕಣಕ್ಕಿಳಿಸಿದಾಗ ಕಾಂಗ್ರೆಸ್ ಷಡ್ಯಂತ್ರ ರೂಪಿಸಿ ಸೋಲು ಕಾಣುವಂತೆ ಮಾಡಿತು ಎಂದು ಕಿಡಿಕಾರಿದರು.
ಇದೇ ವೇಳೆ ಭಾವುಕರಾದ ಕುಮಾರಸ್ವಾಮಿಯವರು, ನಮ್ಮಿಂದ ಅನ್ಯಾಯ ಆಗಿದ್ದರೆ ಶಿಕ್ಷೆ ಕೊಡಿ. ಎಲ್ಲವನ್ನೂ ನಿಮ್ಮ ತೀರ್ಮಾನಕ್ಕೆ ಬಿಡುತ್ತೇನೆ. ಮಂಡ್ಯದಲ್ಲಿ ನಿಖಿಲ್‌ನನ್ನು ಕುತಂತ್ರ ಮಾಡಿ ಸೋಲಿಸಿದರು. ರಾಮನಗರದಲ್ಲೂ ಬಂದು ಬಿಲ ತೋಡಿ ಸೋಲುಣಿಸಿದರು. ಈಗ ಇಲ್ಲಿಗೆ ಬಂದಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ನನಗೆ ಅಮೃತ ಕೊಟ್ಟಿರುವವರು ನೀವು, ಇದೀಗ ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರನ್ನು ಆಶೀರ್ವದಿಸಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಆರ್.ಅಶೋಕ್, ಉಪಚುನಾವಣೆಯಲ್ಲಿ ನಿಖಿಲ್ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ಇದೇ ವೇಳೆ ಡಿಕೆ ಬ್ರದರ್ಸ್ ಸಿಪಿ ಯೋಗೇಶ್ವರ್ ಅವರನ್ನು ಬಲಿಪಶು ಮಾಡಿದೆ ಎಂದು ಕಿಡಿಕಾರಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ನಿಖಿಲ್ ಅವರು ತಮ್ಮ ಪತ್ನಿ ರೇವತಿ ಅವರೊಂದಿಗೆ ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು, ಈ ವೇಳೆ ಅಜ್ಜ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು, ಪಕ್ಷದ 'ಬಿ' ಫಾರಂ ನೀಡಿ ಆಶೀರ್ವಾದ ಮಾಡಿದರು.
ಬಳಿಕ ಚನ್ನಪಟ್ಟಣ ಸಮೀಪದ ಕೆಂಗಲ್‌ನ ಆಂಜನೇಯ ದೇವಸ್ಥಾನದಲ್ಲೂ ಕುಟುಂಬ ಸಮೇತರಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹಾಗೂ ನಿಖಿಲ್ ಅವರ ಚಿಕ್ಕಪ್ಪ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಗೈರು ಹಾಜರು ಎದ್ದು ಕಾಣುತ್ತಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ