ಬಾಗಲಕೋಟೆ: ಯಾರೋ ಪುಣ್ಯಾತ್ಮರು ಕಟ್ಟಿದ ಶಿಕ್ಷಣ ಸಂಸ್ಥೆಯಲ್ಲಿ ಕುಳಿತುಕೊಂಡು ಗೌಡಕಿ ಮಾಡುತ್ತಿ, ತಾಕತ್ತು ಇದ್ದರೆ, ಸ್ವಂತ ಶಿಕ್ಷಣ ಸಂಸ್ಥೆ, ಕಾರ್ಖಾನೆ ಮಾಡಿ ತೋರಿಸು ಎಂದು ಸಚಿವ ಎಂಬಿ.ಪಾಟೀಲ್'ಗೆ ಮಾಜಿ ಸಚಿವ ಮುರುಗೇಶ್ ನಿರಾಣಿಯವರು ಸವಾಲು ಹಾಕಿದ್ದಾರೆ.
ಬಾಗಲಕೋಟೆ ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಎಂಬಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಂತನಾಳ ಶ್ರೀಗಳು, ದಿವಂಗತ ಹಳಕಟ್ಟಿ ಸೇರಿದಂತೆ ಹಲವು ಹಿರಿಯರು ಸೇರಿ ಬಿಎಲ್ಡಿಇ ಸಂಸ್ಥೆ ಕಟ್ಟಿದ್ದಾರೆ. ಯಾರೋ ಕಟ್ಟಿರುವ ಹುತ್ತಕ್ಕೆ ಹಾವಾಗಿ ಬಂದು ಬಿಎಲ್ಡಿಇ ಸಂಸ್ಥೆ ಅಧ್ಯಕ್ಷನಾಗಿ ಮಜಾ ಮಾಡುತ್ತಿದ್ದಿಯಾ. ಸಂಸ್ಥೆಯಿಂದ ಹೊರ ಬಂದು ಸಂಸ್ಥೆ, ಕಾರ್ಖಾನೆಯನ್ನು ಕಟ್ಟು. ಅವಾಗ ನಿನ್ನ ಯೋಗ್ಯತೆ ಏನೆಬುಂದು ಗೊತ್ತಾಗುತ್ತದೆ. ನಿನ್ನ ಗೌಡಿಕೆ, ಅಧಿಕಾರ ದರ್ಪ ನಮ್ಮ ಮುಂದೆ ತೋರಿಸಬೇಡ ಎಂದು ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಶೆಡ್ ಗಿರಾಕಿ ಮತ್ತು ನನ್ನನ್ನು ದನ ಕಾಯುವವನು ಎಂದು ಹೇಳಿಕೆ ನೀಡಿರುವ ನಿನ್ನ ಯೋಗ್ಯತೆ ಏನೆಂಬುದು ಜನರಿಗೆ ಗೊತ್ತಿದೆ. ನಾನು ಮಂತ್ರಿಯಾಗಿ, ಒಬ್ಬ ಉದ್ಯಮಿಯಾಗಿ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ನಿನ್ನ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಬಸವೇಶ್ವರ ಸಕ್ಕರೆ ಕಾರ್ಖಾನೆ ಕಟ್ಟುತ್ತೇನೆ, ಉದ್ಯೋಗ ಕೊಡುತ್ತೇನೆಂದು ಜಮೀನನ್ನು ಕಡಿಮೆ ದರದಲ್ಲಿ ಖರೀದಿಸಿ, ಈಗ ತಮಿಳುನಾಡಿನವರಿಗೆ ಮಾರಾಟ ಮಾಡಿದ್ದು ಗೊತ್ತಿದೆ. ಕೆಐಎಡಿಬಿಯಿಂದ ಬೇರೆಯವರ ಹೆಸರಿನಲ್ಲಿ ನಿವೇಶನ ಖರೀದಿಸಿ, ತಾವು ಆಸ್ತಿ ಮಾಡಿಕೊಂಡಿದ್ದು ಗೊತ್ತಿದೆ. ಕೈಗಾರಿಕೆ ಕಟ್ಟಿ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀಯಾ ಹೇಳು. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡು. ರಾಜಕೀಯಕ್ಕೆ ಬಂದ ನಂತರ ಹಾಗೂ ನೀರಾವರಿ ಸಚಿವರಾದ ಬಳಿಕ ಒಂದು ಭ್ರಷ್ಟಾಚಾರ, ಯಾರದ್ದೂ ಆಸ್ತಿ ಕಬಳಿಸಿಲ್ಲ ಎಂದು ನಿನ್ನ ತಂದೆ, ತಾಯಿ ಮೇಲೆ ಆಣೆ ಮಾಡಿ ಹೇಳು ಎಂದು ಸವಾಲು ಹಾಕಿದರು.
ಇದೇ ವೇಳೆ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತಂತೆಯೂ ಸ್ಪಷ್ಟನೆ ನೀಡಿದ ಅವರು. 2022 ರಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆಗ ಕೈಗಾರಿಕೆ ಇಲಾಖೆ ಅಧಿಕಾರಿಗಳು ಐದು ನಿಮಿಷದ ತ್ರಿಡಿ ಪ್ರೊಮೊ ವಿಡಿಯೋ ಮಾಡೋದಕ್ಕೆ ಒಂದು ಕಂಪನಿಗೆ ಗುತ್ತಿಗೆ ನೀಡಿದ್ದರು. ಅದರ ಬಜೆಟ್ ನಾಲ್ಕುವರೆ ಕೋಟಿ ರೂ. ಆಗಿತ್ತು. ಇದು ನನ್ನ ಗಮನಕ್ಕೆ ಬಂದಿದ್ದೇ ತಡ ನಾನೆ ಅದನ್ನು ತಡೆದೆ. ಐದು ನಿಮಿಷದ ವಿಡಿಯೋ ಮಾಡೋದಕ್ಕಾಗಿ ನಾಲ್ಕುವರೆ ಕೋಟಿ ರೂ. ಇದು ಬಹಳ ಹೆಚ್ಚಾಯಿತು. ಕೂಡಲೆ ರದ್ದು ಮಾಡಿ ಎಂದು ಕೈಗಾರಿಕೆ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಅಪರ ಕಾರ್ಯದರ್ಶಿಗೆ ಪತ್ರ ಬರೆದು ಸೂಚನೆ ನೀಡಿದ್ದೆ.
ಅಲ್ಲಿಗೆ ಅದನ್ನು ಕೈ ಬಿಡಲಾಗಿದೆ. ಆದರೆ ಅದನ್ನೇ ಇಟ್ಕೊಂಡು ಕಾಂಗ್ರೆಸ್ನವರು ತಮ್ಮ ಮೇಲಿನ ಕೇಸ್ ವಿಷಯಾಂತರ ಮಾಡೋದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇವರು ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್ಗೆ ಕೊಡಿ ಅಂತಿದ್ದಾರೆ ಹೊರತು, ಇವರು ಯಾವ ಆರೋಪ ಮಾಡಿರುವ ತಪ್ಪು ಏನು ಅಂತಾನೆ ಹೇಳ್ತಿಲ್ಲ. ಇವರ ಆರೋಪದಲ್ಲಿ ಹುರುಳಿಲ್ಲ.
ಅಂದು ನಾನು ಟೆಂಡರ್ ರದ್ದು ಮಾಡಿದ್ದಕ್ಕೆ ಜಾಹೀರಾತು ಕಂಪನಿಯವರು ಕೋರ್ಟ್ ಮೊರೆ ಹೋದರು. ಕೋರ್ಟ್ ಏಕ ಸದಸ್ಯ ಪೀಠ ಅವರು ಈಗಾಗಲೇ ನಿಮ್ಮ ಆದೇಶದ ಪ್ರಕಾರ ವಿಡಿಯೋ ತಯಾರಿಸಿದ್ದಾರೆ. ಅದಕ್ಕಾಗಿ ಹಣ ಪಾವಿತಿಸಿ ಅಂತ ಹೇಳಿತ್ತು. ನಾವು ಮತ್ತೆ ಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆವು. ಆಗ ದ್ವಿಸದಸ್ಯ ಪೀಠ ಸಚಿವರು ಹೇಳಿದ್ದು ಸರಿ ಇದೆ. ಐದು ನಿಮಿಷದ ವಿಡಿಯೋ ಚಿತ್ರೀಕರಣಕ್ಕೆ ನಾಲ್ಕುವರೆ ಕೋಟಿ ರೂ. ತೀರಾ ಹೆಚ್ಚಾಯಿತು ಎಂದು ನನ್ನ ಪತ್ರ ಉಲ್ಲೇಖ ಮಾಡಿ ಆದೇಶ ನೀಡಿದೆ.
ಹೀಗಿರುವಾಗ ಸಿಎಂ, ಡಿಸಿಎಂ, ಸಚಿವರು ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ನನಗೆ ಇದುವರೆಗೂ ರಾಜಭವನದಿಂದ ಆಗಲಿ, ಯಾವುದೇ ತನಿಖಾ ಸಂಸ್ಥೆಗಳಿಂದಾಗಲಿ ಒಂದೇ ಒಂದು ನೊಟೀಸ್ ಬಂದಿಲ್ಲ. ಯಾರು ವಿಚಾರಣೆಗೆ ಕರೆದಿಲ್ಲ. ನಾನು ಎಲ್ಲ ತನಿಖೆಗೂ ಸಿದ್ದನಿದ್ದೇನೆ. ಸಿಬಿಐ ತನಿಖೆಗೂ ಬೇಕಿದ್ದರೆ ಕೊಡಲಿ ಎಂದು ಹೇಳಿದರು.
Advertisement