
ಬೆಂಗಳೂರು: ಛಲವಾದಿ ನಾರಾಯಣಸ್ವಾಮಿ 'ಹರಿಶ್ಚಂದ್ರ' ಅಲ್ಲ, ಒಬ್ಬ ಶೆಡ್ ಗಿರಾಕಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆ ಸಿ.ಎ. ನಿವೇಶನ ಕೊಟ್ಟಿದ್ದಕ್ಕೆ ಎಗರಾಡುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸತ್ಯ ಹರಿಶ್ಚಂದ್ರರೇನಲ್ಲ.
2006ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡಿರುವ ಅವರು 18 ವರ್ಷಗಳಾದರೂ ಅಲ್ಲಿ ಏನೂ ಮಾಡದೆ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ. ಅವರೊಬ್ಬ ಶೆಡ್ ಗಿರಾಕಿಯೇ ವಿನಾ ರಾಹುಲ್ ಖರ್ಗೆ ಅವರಂತೆ ಉದ್ಯಮಶೀಲರಲ್ಲ. ಇಂಥವರು ನಮಗೆ ಪಾಠ ಮಾಡಲು ಬರುತ್ತಾರೆ ಎಂದು ಕಿಡಿಕಾರಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಎರಡು ಗಂಟೆ ಕಾಲ ದಾಖಲೆ ಸಮೇತ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, `ರಾಹುಲ್ ಖರ್ಗೆ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ. ಎಂಜಿನಿಯರಿಂಗ್ ಪದವೀಧರರು. ಡಿಆರ್ ಡಿಓ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಇಂಥಹ ಅರ್ಹರಿಗೆ ಸಿ.ಎ. ನಿವೇಶನ ಕೊಡದೆ ಬಿಜೆಪಿಯವರಂತೆ ನಿಯಮಗಳನ್ನು ಗಾಳಿಗೆ ತೂರಿ ಯಾರಿಗೆ ಬೇಕೋ ಅವರಿಗೆ ಕೊಡಬೇಕಾಗಿತ್ತೇನು? ಛಲವಾದಿ ನಾರಾಯಣಸ್ವಾಮಿ ಈಗ ತಮಗೆ ಮಂಜೂರಾಗಿರುವ ಕೈಗಾರಿಕಾ ನಿವೇಶನದ ಸಮರ್ಪಕ ಬಳಕೆಗೆ ಮತ್ತೊಮ್ಮೆ 6 ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ಇಲ್ಲೂ ಅವರು ವಿಫಲರಾದರೆ, ನಿಯಮಗಳ ಪ್ರಕಾರ ಆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಖರ್ಗೆ ಕುಟುಂಬದ ವಿರುದ್ಧ ವಿನಾ ಕಾರಣ ಆರೋಪ
ಇದೇ ವೇಳೆ ದಲಿತರಾದ ನಾರಾಯಣಸ್ವಾಮಿ ಸ್ವತಃ ತಮ್ಮ ಸಮುದಾಯದ ಹಿರಿಯರೂ ಮುತ್ಸದ್ದಿಗಳೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಎಂಬಿ ಪಾಟೀಲ್, 'ಇದು ಬಿಜೆಪಿಯ ಕುತಂತ್ರ. ದಲಿತರು ಪರಸ್ಪರ ಹೊಡೆದಾಡುತ್ತಿದ್ದರೆ ಅವರಿಗೆ ಲಾಭವಿದೆ. ತಮಗೆ ನೀಡಿರುವ ಕೈಗಾರಿಕಾ ನಿವೇಶನದಲ್ಲಿ ನಾರಾಯಣಸ್ವಾಮಿ ಇಷ್ಟು ಹೊತ್ತಿಗೆ ಶೇ.51ರಷ್ಟು ಭೂಮಿಯ ಬಳಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಕೇವಲ ಶೇ. 5ರಷ್ಟು ಭೂಮಿಯಲ್ಲಿ ಕಾಟಾಚಾರಕ್ಕೆ ಶೆಡ್ ಹಾಕಿ, `ಬಾಡಿಗೆಗೆ ಇದೆ’ ಎಂದು ಬೋರ್ಡ್ ನೇತು ಹಾಕಿದ್ದಾರೆ.
ಇಂಥ ಲಜ್ಜೆಗೆಟ್ಟ ವ್ಯಕ್ತಿ ದೇಶದ ನೇತಾರರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾತನಾಡುವ ದುಸ್ಸಾಹಸ ಮಾಡುತ್ತಿದ್ದಾರೆ. ನಾರಾಯಣಸ್ವಾಮಿ 2006ರಲ್ಲಿ `ಬೃಂದಾವನ್ ಸಾಫ್ಟ್ವೇರ್’ ಎನ್ನುವ ಕಂಪನಿ ಶುರು ಮಾಡುವುದಾಗಿ ಭೂಮಿ ಪಡೆದುಕೊಂಡರು. ಆ ಮೇಲೆ ಅಲ್ಲಿ ಅದೇ ಹೆಸರಿನ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸುತ್ತೇನೆ ಎಂದರು. ಬಳಿಕ ಗೋದಾಮು ಮಾಡುತ್ತೇನೆಂದರು. ಅವರು ಕಾಲಕಾಲಕ್ಕೆ ಬೇರೆಬೇರೆ ಉದ್ದೇಶಕ್ಕೆ ಬದಲಿಸಿಕೊಂಡರೇ ವಿನಾ ಏನನ್ನೂ ದಡ ಮುಟ್ಟಿಸಲಿಲ್ಲ. ಇದಾದ ಮೇಲೆ ಸರ್ಕಾರವು ನಿಯಮದಂತೆ 2016ರ ನ.11ರಂದು ಜಮೀನನ್ನು ವಾಪಸ್ ಪಡೆಯಲು ಆದೇಶಿಸಿತು. ಇದರ ವಿರುದ್ಧ ಹೈಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದ ಈ ವ್ಯಕ್ತಿ ಈಗ ಪುಕ್ಕಟೆ ಪ್ರಚಾರಕ್ಕೆ ಇಳಿದಿದ್ದಾರೆ.
ನಾರಾಯಣಸ್ವಾಮಿ ರಾಜಕೀಯದಲ್ಲಿ ಮೇಲಕ್ಕೆ ಬರಲು ಖರ್ಗೆಯವರೇ ಕಾರಣ. ಅವರು ರೈಲ್ವೆ ಸಚಿವರಾಗಿದ್ದಾಗ ಈ ವ್ಯಕ್ತಿಯನ್ನು ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ರೈಲ್ವೆ ಭವನದಲ್ಲಿ ಕಚೇರಿ ಕೂಡ ಕೊಟ್ಟಿದ್ದರು. ಆದರೂ ನಾರಾಯಣಸ್ವಾಮಿ ಉಂಡ ಮನೆಗೆ ಎರಡು ಬಗೆಯುತ್ತಿದ್ದಾರೆ. ಹೀಗೆ ಮಾತನಾಡಿದರೆ ಬಿಜೆಪಿಯಲ್ಲಿ ಇನ್ನೂ ಮೇಲೇರಬಹುದು ಎನ್ನುವ ಭ್ರಮೆಯಲ್ಲಿ ಅವರಿರಬಹುದು. ಇವರು ಹೇಳುವ ಹಾಗೆ ಈ ನಿವೇಶಕ್ಕೆ 72 ಅರ್ಜಿ ಬಂದಿರಲಿಲ್ಲ. ಬಂದಿದ್ದು ಕೇವಲ 6 ಅರ್ಜಿ. ಅದರಲ್ಲಿ ಮೂರು ವಸತಿ ಉದ್ದೇಶದ್ದು. ಅಲ್ಲಿ ಈಗಾಗಲೇ ಅಂತಹ ಉದ್ದೇಶಕ್ಕೆ ಕೊಟ್ಟಿದ್ದರಿಂದ ಅವುಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಅರ್ಜಿ ಬಂದಿದ್ದರೂ ಸಮಪರ್ಕ ದಾಖಲೆ ಸಲ್ಲಿಸಿರಲಿಲ್ಲ. ಇನ್ನು ಉಳಿದಿದ್ದು ರಾಹುಲ್ ಮಾತ್ರ. ಇವರು ಎಲ್ಲ ರೀತಿಯಲ್ಲೂ ಸಮರ್ಥರಿದ್ದು, ಸಾಮಾನ್ಯ ವರ್ಗದ ಕೋಟಾದಲ್ಲೂ ಅವರು ಅರ್ಹರಾಗಿದ್ದರು ಎಂದು ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ತಿಗೆ ಕೊಟ್ಟ ಭೂಮಿ ಸದ್ಭಳಕೆಯಾಗಿಲ್ಲ
ಆರೆಸ್ಸೆಸ್ ಅಂಗವಾಗಿರುವ ರಾಷ್ಟ್ರೋತ್ಥಾನ ಪರಿಷತ್ತಿಗೆ ಹೈಟೆಕ್ ಡಿಫೆನ್ಸ್ ಪಾರ್ಕಿನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು 2013ರಲ್ಲಿ 5 ಎಕರೆ ಕೊಡಲಾಗಿದೆ. ಇದುವರೆಗೂ ಅವರು ಅಲ್ಲಿ ಏನೂ ಮಾಡಿಲ್ಲ. ಕೋವಿಡ್ ನೆವ ಹೇಳಿಕೊಂಡು ಮತ್ತೆ ಮತ್ತೆ ಕಾಲಾವಕಾಶ ಕೇಳಿಕೊಂಡು ಬಂದಿದ್ದಾರೆ. ಇತ್ತೀಚೆಗೆ 2023ರ ಡಿ.26ರಂದು ಪುನಃ ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಈ ಜಮೀನನ್ನು ವಾಪಸ್ ಪಡೆಯಬೇಕೋ ಬೇಡವೋ ಎನ್ನುವುದನ್ನು ಲೆಹರ್ ಸಿಂಗ್ ಮತ್ತು ನಾರಾಯಣಸ್ವಾಮಿ ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುರುಗೇಶ ನಿರಾಣಿ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡು, ಅಲ್ಲಿ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ. ಅದು ಆಗ್ರೋ ಟೆಕ್ ಪಾರ್ಕ್ ಗೆ ಮೀಸಲಾಗಿದ್ದ ಜಾಗ. ಆಮೇಲೆ ಪುನಃ ಕೈಗಾರಿಕಾ ಸಚಿವರಾದಾಗ ಕೂಡ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡು, ತಮಗೆ ತಾವೇ ಅಭಿನಂದನಾ ಪತ್ರ ಬರೆದುಕೊಂಡಿದ್ದಾರೆ.
ಇಂಟರ್ನೆಟ್ ಜಾಲಾಡಿದರೆ ಇವರೆಲ್ಲರ ಜಾತಕ ಬಯಲಾಗುತ್ತದೆ. ಚಾಣಕ್ಯ ವಿ.ವಿ.ಯದೂ ಇದೇ ಕತೆಯಾಗಿದೆ. 2025ರ ಜೂನ್ ಒಳಗೆ ಅವರು 116 ಎಕರೆಯಲ್ಲಿ ಕನಿಷ್ಠ ಶೇ.51ರಷ್ಟು ಜಾಗವನ್ನು ಬಳಕೆ ಮಾಡದಿದ್ದರೆ ಉಳಿದ ಜಾಗವನ್ನು ವಾಪಸ್ ತೆಗೆದುಕೊಳ್ಳಲಾಗುವುದು.ಚಾಣಕ್ಯ ವಿವಿ ಗೂ ಕೇವಲ 50 ಕೋಟಿಗೆ ಈ ಜಮೀನು ನೀಡಿದ್ದು, ಇದರಿಂದ ಕೆಐಎಡಿಬಿಗೆ 137 ಕೋಟಿ ರೂಪಾಯಿ ನಷ್ಟ ಆಗಿದೆ. ಇದರ ವಿರುದ್ಧ ಏಕೆ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿಲ್ಲ ಎಂದು ಸಚಿವರು ಅಂಕಿಅಂಶಗಳ ಸಹಿತ ಪ್ರಶ್ನಿಸಿದರು.
Advertisement