ಸಾಮರ್ಥ್ಯವಿದ್ದರೂ ದಲಿತ ನಾಯಕರಿಗೆ ಸಿಎಂ ಹುದ್ದೆ ಕೈತಪ್ಪಿದೆ: ಡಾ. ಜಿ.ಪರಮೇಶ್ವರ್

ನಾಗಮಂಗಲ ಗಲಭೆ ಕುರಿತು ತನಿಖೆ ನಡೆಯುತ್ತಿದ್ದು, ಗಣೇಶ ಮೂರ್ತಿ ಮೆರವಣಿಗೆ ಮಾರ್ಗ ಬದಲಿಸಿದ್ದು ಏಕೆ ಎಂಬ ಸತ್ಯಾಂಶ ಶೀಘ್ರದಲ್ಲೇ ಹೊರಬೀಳಲಿದೆ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್
ಗೃಹ ಸಚಿವ ಡಾ.ಜಿ.ಪರಮೇಶ್ವರ್
Updated on

ತುಮಕೂರು: ಸಾಮರ್ಥ್ಯವಿದ್ದರೂ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿ ಹೋಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ಹೇಳಿದರು.

ಶ್ರೀ ಹರ್ತಿ ಪತ್ತಿನ ಸಹಕಾರ ಸಂಘದ ನಿಯಮಿತ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಸಚಿವರು, ಬಿ.ಬಸವಲಿಂಗಪ್ಪ, ಮಲ್ಲಿಕಾರ್ಜುನ್ ಸ್ವಾಮಿ, ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಮುದಾಯದ ಹಲವು ಮುಖಂಡರಿಗೆ ಸಿಎಂ ಹುದ್ದೆ ಕೈತಪ್ಪಿದೆ ಎಂದು ಹೇಳಿದರು.

ಈ ನಡುವೆ ತುಮಕೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪರಮೇಶ್ವರ್ ಅವರು ಸಂವಿಧಾನದ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆದು ಕೆಲ ಕಾಲ ಭಾವುಕರಾದ ಬೆಳವಣಿಗೆ ಕಂಡು ಬಂದಿತು.

ಅಂಬೇಡ್ಕರ್ ಅವರ ಶಕ್ತಿಯಿಂದಾಗಿ ಇಂದು ಪ್ರತಿಯೊಬ್ಬರು ಪ್ರಗತಿಯ ಬಾಗಿಲು ತೆರೆಯುವಂತಾಗಿದೆ. ಇದೀಗ ಆಡಳಿತ ದಕ್ಷತೆಯನ್ನು ಸುಧಾರಿಸಲು ದಲಿತ ಸಮುದಾಯಕ್ಕೆ ಸೇರಿದ ಹೆಚ್ಚಿಚ್ಚು ಜನರು ರಾಜಕೀಯಕ್ಕೆ ಬರಬೇಕು. ನಾನು ನನಗೆ ನೀಡಿದ ಎಲ್ಲಾ ಖಾತೆಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿತ್ತು. ನನ್ನ ಸಮಗ್ರತೆಯನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ ಎಂದು ತಿಳಿಸಿದರು

ಬಳಿಕ ಶಿರಾ ತಾಲೂಕಿನ ಉಜ್ಜನಕುಂಟೆಯಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಮಾನವ ಸರಪಳಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಸೆಪ್ಟೆಂಬರ್ ಅಂತ್ಯದೊಳಗೆ ಮಂಡಳಿ ಮತ್ತು ನಿಗಮಗಳಿಗೆ ನಿರ್ದೇಶಕರು ಮತ್ತು ಉಪಾಧ್ಯಕ್ಷರನ್ನು ನೇಮಿಸಲಾಗುವುದು ಎಂದು ಹೇಳಿದರು.

11 ಸದಸ್ಯರ ಸಮಿತಿಯ ಅಧ್ಯಕ್ಷನಾಗಿ ನಾನು 1,216 ಹುದ್ದೆಗಳಿಗೆ 15,000 ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲನೆ ಮಾಡಲಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್
ಪ್ರಮೋಷನ್ ಸಿಕ್ಕರೆ ಖುಷಿಯಾಗುತ್ತೆ: ನಾಯಕತ್ವ ಬದಲಾವಣೆ ಬಗ್ಗೆ ಪರಮೇಶ್ವರ ಪ್ರತಿಕ್ರಿಯೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರ್ಕಾರ ಕಾಪಾಡಿದೆ. ವಿಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲದಕ್ಕೂ ಅವಕಾಶವಿದೆ. ನಮ್ಮ ಆಡಳಿತಾವಧಿಯಲ್ಲಿಯೂ ತಪ್ಪು ನಡೆದಿದ್ದರೆ ತನಿಖೆ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಆ ದೃಷ್ಟಿಯಲ್ಲಿ ಯಾರು ಎಷ್ಟೇ ಪ್ರಭಾವಿಗಳಾಗಿರಲಿ, ಜನಪ್ರತಿನಿಧಿಗಳಾಗಿರಲಿ ಅಥವಾ ಅಧಿಕಾರಿಗಳಾಗಿದ್ದರೂ ಕೂಡ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದ್ದೇನೆ. ಅಲ್ಲಲ್ಲಿ ಆದ ಘಟನೆಗಳನ್ನು ನಿಯಂತ್ರಿಸಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಕೋಮು ಗಲಭೆ, ರಾಜಕೀಯ ಗಲಾಟೆಗಳು ನಡೆದಿಲ್ಲ ಎಂಬುದ್ನು ಸ್ಪಷ್ಟವಾಗಿ ಹೇಳುತ್ತೇನೆ. ರಾಜ್ಯದ ಶಾಂತಿಯನ್ನು ಹಾಳು ಮಾಡಲು ಪ್ರಯತ್ನಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆಂದು ಎಚ್ಚರಿಸಿದರು.

ನಾಗಮಂಗಲ ಗಲಭೆ ಕುರಿತು ತನಿಖೆ ನಡೆಯುತ್ತಿದ್ದು, ಗಣೇಶ ಮೂರ್ತಿ ಮೆರವಣಿಗೆ ಮಾರ್ಗ ಬದಲಿಸಿದ್ದು ಏಕೆ ಎಂಬ ಸತ್ಯಾಂಶ ಶೀಘ್ರದಲ್ಲೇ ಹೊರಬೀಳಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com