
ಬೆಂಗಳೂರು: 8 ಸಾವಿರ ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಹಗರಣ ಪ್ರಕರಣದಲ್ಲಿ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದೀಗ ವಿತ್ತ ಸಚಿವೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಮುಡಾ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಬೆನ್ನಲ್ಲೇ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಹೀಗಾಗಿ ಕಾಂಗ್ರೆಸ್ ಕೂಡ ರಾಜೀನಾಮೆ ನೀಡುವಂತೆ ನಿರ್ಮಲಾ ರಾಜೀನಾಮೆ ಅವರಿಗೆ ಒತ್ತಾಯಿಸುತ್ತಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಚುನಾವಣಾ ಬಾಂಡ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು.
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಚುನಾವಣಾ ಬಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ಆದೇಶ ನೀಡಿದೆ. ಬಿಜೆಪಿ ನಾಯಕರ ವಾದದ ಪ್ರಕಾರ ಈಗ ನಿರ್ಮಲಾ ಸೀತಾರಾಮನ್ ಅವರು ರಾಜೀನಾಮೆ ನೀಡಬೇಕು ಅಲ್ಲವೇ? ಇವರ ರಾಜೀನಾಮೆಗೆ ಬಿಜೆಪಿ ನಾಯಕರು ಯಾವಾಗ ಪ್ರತಿಭಟನೆ, ಪಾದಯಾತ್ರೆ ಮಾಡುತ್ತಾರೆ? ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆದರೆ ಪ್ರಧಾನಿ ಮೋದಿ ಅವರೂ ರಾಜೀನಾಮೆ ನೀಡಬೇಕಾಗುತ್ತದೆ. ಜಾಮೀನಿನ ಮೇಲಿರುವ ಕುಮಾರಸ್ವಾಮಿಯವರು ರಾಜೀನಾಮೆ ನೀಡಲಿ. ಬಿಜೆಪಿ ನಾಯಕರ ತರ್ಕದ ಪ್ರಕಾರ ನಿರ್ಮಲಾ ಸೀತಾರಾಮನ್ ಈಗಲೇ ರಾಜೀನಾಮೆ ನೀಡಬೇಕು, ಅಲ್ಲವೇ? ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ ಅಜಯ್ ಧರಂ ಸಿಂಗ್ ಅವರು ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಈ ನಡುವೆ ನಿರ್ಮಲಾ ಸೀತಾರಾಮನ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಬಗ್ಗೆ ಪ್ರತಿಕ್ರಿಯಿಸಲು ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ನಿರಾಕರಿಸಿದ್ದು, ಪ್ರಕರಣದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧದ ಎಫ್‌ಐಆರ್ ಕುರಿತು ಪ್ರತಿಕ್ರಿಯಿಸಿ, ನಾನು ಈಗಾಗಲೇ ಅದರ ಬಗ್ಗೆ ಸಾಕಷ್ಟು ಮಾತನಾಡಿದ್ದೇನೆ. ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಾನು ಮತ್ತೆ ಇದರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ದೆಹಲಿಗೆ ವಾಪಸ್ಸಾದ ಬಳಿಕ ವಿವರಗಳನ್ನು ಪರಿಶೀಲಿಸಿದ ಪ್ರತಿಕ್ರಿಯಿಸುವುದಾಗಿ ಹೇಳಿದರು.
Advertisement