ರಾಹುಲ್ ಭೇಟಿಯಾದ ಸಿದ್ದರಾಮಯ್ಯ: KPCC ಅಧ್ಯಕ್ಷ ಸ್ಥಾನ ಬದಲಾವಣೆ, ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್ ಕೊಟ್ಟ ಸಂದೇಶವೇನು?

3 ದಿನಗಳ ಭೇಟಿಯ ಭಾಗವಾಗಿ ದೆಹಲಿಯಲ್ಲಿ ಉಳಿದಿರುವ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಮಧ್ಯಾಹ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದರು.
Chief Minister Siddaramaiah presents a memento to LoP in Lok Sabha Rahul Gandhi in New Delhi on Thursday.
ರಾಹುಲ್ ಗಾಂಧಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಣಿಕೆ ಪ್ರದಾನ ಮಾಡಿದರು.
Updated on

ಬೆಂಗಳೂರು: ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಗುರುವಾರ ಭೇಟಿ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಪರಿಷತ್ ನೇಮಕ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಹಾಗೂ ಹನಿಟ್ರ್ಯಾಪ್ ಪ್ರಕರಣ ಹಾಗೂ ಮೇ 20 ರಂದು ಕಾಂಗ್ರೆಸ್ ಸರ್ಕಾರ 2 ವರ್ಷಗಳನ್ನು ಪೂರೈಸುತ್ತಿರುವುದು ಸೇರಿದಂತೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

3 ದಿನಗಳ ಭೇಟಿಯ ಭಾಗವಾಗಿ ದೆಹಲಿಯಲ್ಲಿ ಉಳಿದಿರುವ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಮಧ್ಯಾಹ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದರು.

ಮಾತುಕತೆ ವೇಳೆ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಕುರಿತು ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದ್ದಾರೆಂದು ಹೇಳಲಾಗುತ್ತಿದ್ದು, ಹೈಕಮಾಂಡ್ ಈ ಬಗ್ಗೆ ಚರ್ಚಿಸುವ ಮನಸ್ಥಿತಿಯಲ್ಲಿಲ್ಲದ ಕಾರಣ ಯಥಾಸ್ಥಿತಿಗೆ ಸೂಚಿಸಿದೆ ಎಂದು ಮೂಲವೊಂದು ಮಾಹಿತಿ ನೀಡಿದೆ.

ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಅವರನ್ನು ಮಾತ್ರ ಭೇಟಿಯಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ರಾಹುಲ್ ಗಾಂಧಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕ. ಪಕ್ಷದ ನಾಯಕರನ್ನು ಭೇಟಿ ಮಾಡುವುದು ಸಹಜ. ದೆಹಲಿಯಲ್ಲಿದ್ದಾಗ ನಾವು ಅನೇಕ ನಾಯಕರನ್ನು ಭೇಟಿಯಾಗುತ್ತೇವೆ. ಖಾಲಿ ಇರುವ ಎಂಎಲ್‌ಸಿ ಸ್ಥಾನಗಳ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ಸರಿಯಾದ ಸಮಯದಲ್ಲಿ ನಾವು ಅದರ ಬಗ್ಗೆ ಚರ್ಚಿಸುತ್ತೇವೆಂದು ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತು ರಾಹುಲ್ ನಡುವೆ ಯಾವೆಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಯಿತು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲವಾದರೂ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ನಡೆದಿರುವ ಹನಿಟ್ರ್ಯಾಪ್ ಪ್ರಯತ್ನ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಸಿದ್ದರಾಮಯ್ಯ ಅವರು ಗಮನಕ್ಕೆ ತಂದಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Chief Minister Siddaramaiah presents a memento to LoP in Lok Sabha Rahul Gandhi in New Delhi on Thursday.
ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದು

ಮಾತುಕತೆ ವೇಳೆ ರಾಜಣ್ಣ ಅವರು ಹನಿಟ್ರ್ಯಾಪ್ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿರುವುದಕ್ಕೆ ರಾಹುಲ್ ಗಾಂಧಿಯವರು ಅಸಮಾಧಾನ ವ್ಯಕ್ತಪಡಿಸಲಿದ್ದಾರೆಂದು ತಿಳಿದುಬಂದಿದೆ. ಪಕ್ಷದ ನಾಲ್ಕು ಗೋಡೆಗಳ ಒಳಗೆ ಈ ವಿಷಯವನ್ನು ಇತ್ಯರ್ಥಪಡಿಸಬೇಕಿತ್ತು ಎಂದು ರಾಹುಲ್ ಅವರು ತಿಳಿಸಿದ್ದು, ಈ ವೇಳೆ ಸಿದ್ದರಾಮಯ್ಯ ಅವರು ಪಕ್ಷಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ನಿಭಾಯಿಸುವುದಾಗಿ ಭರವಸೆ ನೀಡಿದದಾರೆಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ಲೋಕೋಪಯೋಗಿ ಸಚಿವ ಜಾರಕಿಹೊಳಿಯವರು ದೆಹಲಿಗೆ ಭೇಟಿ ನೀಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ. ವೇಣುಗೋಪಾಲ್ ಅವರಿಗೆ ಹನಿಟ್ರ್ಯಾಪ್ ವಿಚಾರದ ಕುರಿತು ಮಾಹಿತಿ ನೀಡಿದ್ದರು. ವೇಣುಗೋಪಾಲ್ ಅವರು ರಾಹುಲ್ ಅವರಿಗೆ ಅದಾಗಲೇ ಹನಿಟ್ರ್ಯಾಪ್ ವಿಚಾರದ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಇನ್ನು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಸಚಿವ ಸಂಪುಟ ಪುನಾರಚನೆ ವಿಷಯದಲ್ಲಿ, ಸರ್ಕಾರ ತನ್ನ ಎರಡನೇ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿದ ನಂತರ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾರಕಿಹೊಳಿ ಪ್ರಬಲ ಸ್ಪರ್ಧಿಯಾಗಿದ್ದರೂ ಗುರುವಾರ ರಾಹುಲ್ ಗಾಂಧಿಯವರೊಂದಿಗೆ ಸಿದ್ದರಾಮಯ್ಯ ಅವರು ನಡೆಸಿದ ಮಾತುಕತೆ ವೇಳೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಹೆಸರು ಕೇಳಿಬಂದಿತ್ತು ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅಹಿಂದ ಸಮುದಾಯಗಳನ್ನು ಪ್ರತಿನಿಧಿಸುತ್ತಿರುವುದರಿಂದ, ಶಿವಕುಮಾರ್ ಒಕ್ಕಲಿಗರಾಗಿರುವುದರಿಂದ, ವೀರಶೈವ-ಲಿಂಗಾಯತರಾಗಿರುವ ಖಂಡ್ರೆ ಅವರು ಸೂಕ್ತ ಆಯ್ಕೆಯಾಗುತ್ತಾರೆ" ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಈ ನಡುವೆ ಖಂಡ್ರೆ ಅವರೂ ಕೂಡ ದೆಹಲಿ ಭೇಟಿ ನೀಡಿರುವುದು ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

Chief Minister Siddaramaiah presents a memento to LoP in Lok Sabha Rahul Gandhi in New Delhi on Thursday.
ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು, ಶಿರಾಡಿ ಘಾಟ್ ಸೇರಿ 12 ಯೋಜನೆಗಳ ಮಂಜೂರಾತಿಗೆ ಮನವಿ

ಎಂಎಲ್‌ಸಿ ಹುದ್ದೆ ಭರ್ತಿಗೆ ಅಂತಿಮ ನಿರ್ಧಾರ?

ಏತನ್ಮಧ್ಯೆ ಖಾಲಿ ಇರುವ ನಾಲ್ಕು ಎಂಎಲ್‌ಸಿ ಹುದ್ದೆಗಳ ಭರ್ತಿ ಕುರಿತು, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೈಕಮಾಂಡ್ ಹೊಸ ಮುಖಗಳನ್ನು ಆಯ್ಕೆ ಮಾಡುವುದರಿಂದ ಕೆಲವು ಅಚ್ಚರಿಗಳು ಎದುರಾಗಬಹುದು. ಈ ವಿಷಯವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸುವಂತೆ ರಾಹುಲ್ ಅವರು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ಇನ್ನು ರಾಜ್ಯಸಭೆಯ ಚರ್ಚೆಯಲ್ಲಿ ಖರ್ಗೆಯವರು ಕಾರ್ಯನಿರತರಾಗಿದ್ದರಿಂದ ಗುರುವಾರ ಸಿದ್ದರಾಮಯ್ಯ ಅವರು ಖರ್ಗೆಯವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದ್ದು, ಇಂದು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರು ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದರು ಮತ್ತು ರಾಹುಲ್ ಅವರನ್ನು ಗುರುವಾರ ಭೇಟಿಯಾದ ಬಳಿಕ ಕೆ ಸಿ ವೇಣುಗೋಪಾಲ್ ಅವರನ್ನೂ ಭೇಟಿ ಮಾಡಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಾಲ್ಕು ವಿಭಿನ್ನ ವಿಭಾಗಗಳಲ್ಲಿ ಆಚರಣೆ ಮಾಡುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಮೂಲವೊಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com