'ಕುವೆಂಪು ಕಲ್ಪನೆಯ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುತ್ತಿದ್ದೀರಿ; ಜನತೆ ದಂಗೆ ಎದ್ದು ಬುದ್ಧಿ ಕಲಿಸುವ ಕಾಲ ದೂರವಿಲ್ಲ': BJP

ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಪಿಎಂ ನರೇಂದ್ರ ಮೋದಿ ಹೇಳಿದ್ದಾರೆ.
siddaramaiah and vijayendra
ಸಿದ್ದರಾಮಯ್ಯ ಹಾಗೂ ವಿಜಯೇಂದ್ರ
Updated on

ಬೆಂಗಳೂರು: ವಾಸ್ತವದಲ್ಲಿ ರಾಜ್ಯದಲ್ಲಿ ಧರ್ಮಗಳ ನಡುವೆ ಬಿರುಕು ಮೂಡಿಸಿ ದ್ವೇಷ ಬಿತ್ತುವ ಕೆಲಸಕ್ಕೆ ಮುಂದಾಗಿರುವುದು ನೀವು ರಾಷ್ಟ್ರಕವಿ ಕುವೆಂಪು ಅವರ ಕಲ್ಪನೆಯ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುತ್ತಿದ್ದೀರಿ, ಇದನ್ನೇ ಪ್ರಧಾನಮಂತ್ರಿಗಳು ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಪಿಎಂ ನರೇಂದ್ರ ಮೋದಿ ಹೇಳಿದ್ದಾರೆ. ಕರ್ನಾಟಕದಲ್ಲಿ ಮುಸ್ಲಿಂಮರ ಕಲ್ಯಾಣಕ್ಕಿಂತ ಅವರ ಮತಬ್ಯಾಂಕ್ ಕೇಂದ್ರೀಕರಿಸಿ ನೀವು ರೂಪಿಸುತ್ತಿರುವ ನಿಯಮ ಹಾಗೂ ಯೋಜನೆಗಳನ್ನು ಪ್ರಧಾನಿಗಳು ಟೀಕಿಸಿದ್ದಾರೆ ಎಂದಿದ್ದಾರೆ. ನೀವೊಬ್ಬ ವಕೀಲರೂ ಹೌದು ಸಂವಿಧಾನವನ್ನು ನೀವು ಓದಿಕೊಂಡಿರಬಹುದು ಎಂದು ನಾವು ಭಾವಿಸಿದ್ದೆವು ಆದರೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಕುರಿತು ನೀವು ಹೇಳಿರುವ ಮಾತುಗಳು ಆಶ್ಚರ್ಯವೆನಿಸಿದೆ.

ಸಂವಿಧಾನದ ಆರ್ಟಿಕಲ್ 15(1) ಏನು ಹೇಳುತ್ತದೆ ಎನ್ನುವುದನ್ನು ಬಹುಶಃ ನೀವು ಓದಿಕೊಂಡಂತೆ ಕಾಣುತ್ತಿಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿ ತಾರತಮ್ಯ ಮಾಡಲು ಎಲ್ಲಿಯೂ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ, ಇದನ್ನೇ ಮಾನ್ಯ ಮೋದಿ ಜೀ ಉಲ್ಲೇಖಿಸಿದ್ದಾರೆ. ಇದರಿಂದ ವಿಚಲಿತರಾಗಿರುವ ನೀವು ಮುಸ್ಲಿಂ ಓಲೈಕೆಗಾಗಿ ಭಂಡತನದ ಸಮರ್ಥನೆಗಿಳಿದಿದ್ದೀರಿ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾಷಣವನ್ನು ನೆನಪಿಸಿಕೊಂಡಿದ್ದೀರಿ ಅಲ್ಲೆಲ್ಲೂ ಧರ್ಮಾಧಾರಿತ ಮೀಸಲಾತಿ ಬೇಡ, ಇಲ್ಲವೇ ಬೇಕು ಎನ್ನುವ ಅಭಿಪ್ರಾಯ ಅಂಬೇಡ್ಕರ್ ಅವರು ಉಲ್ಲೇಖಿಸಿರುವುದಿಲ್ಲ ಎಂದು ಜಾಣ್ಮೆ ತೋರಲು ಹೊರಟಿದ್ದೀರಿ, ಆದರೆ ಸರ್ವಶ್ರೇಷ್ಠ ಸಂವಿಧಾನದ ಆರ್ಟಿಕಲ್ 15 (1) ಏನು ಹೇಳುತ್ತದೆ ಎನ್ನುವುದನ್ನು ನೀವೇಕೆ ಓದಿಕೊಂಡಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀವು ಮೀಸಲಾತಿ ನೀಡುತ್ತಿರುವುದು ಧರ್ಮಾಧಾರಿತವಾಗಿಯೇ ಹೊರತು, ಜಾತಿ ಆಧಾರಿತವಾಗಿ ಅಲ್ಲವೇ ಅಲ್ಲ, ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಚಂದ್ರಬಾಬು ನಾಯ್ಡು ಅವರ ಸರ್ಕಾರ ಮುಸ್ಲಿಂ ಮೀಸಲಾತಿಯನ್ನು ರೂಪಿಸಿರುವುದು ಅತೀ ಹಿಂದುಳಿದ ಮುಸ್ಲಿಂ ಪಂಗಡಗಳಿಗೇ ಹೊರತು ಇಡಿಯಾಗಿ ಮುಸ್ಲಿಂ ಧರ್ಮೀಯರಿಗಲ್ಲ, ಆದಾಗ್ಯೂ ಇದನ್ನು ಅಲ್ಲಿನ ಉಚ್ಛ ನ್ಯಾಯಾಲಯ ರದ್ದುಪಡಿಸಿದೆ. ಸದ್ಯ ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಸಂವಿಧಾನದ ಆಶಯದ ಪ್ರಕಾರ ಹಿಂದೂಗಳಿಗೆ ಧರ್ಮಾಧಾರಿತವಾಗಿ ಮೀಸಲಾತಿ ಕಲ್ಪಿಸಲಾಗಿಲ್ಲ, ಹಿಂದೂ ಧರ್ಮದ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಆಧಾರಿಸಿ ಮೀಸಲಾತಿ ಕಲ್ಪಿಸಲಾಗುತ್ತಿದೆ, ಇದೇ ಮಾನದಂಡ ಮುಸ್ಲಿಂಮರಿಗೆ ನೀಡಲಾಗಿರುವ ಮೀಸಲಾತಿಗೆ ಏಕೆ ಅನ್ವಯವಾಗಿಲ್ಲ ಎನ್ನುವುದೇ ನಮ್ಮ ಪ್ರಶ್ನೆಯಾಗಿದೆ ಎಂದಿದ್ದಾರೆ.

ಸದ್ಯ ಧರ್ಮ, ಜಾತಿ, ಭಾಷೆ, ಲಿಂಗ ಸಮಾನತೆಯ ತಾರತಮ್ಯ ಮಾಡಲು ಅವಕಾಶವಿಲ್ಲ ಎನ್ನುವ ಸಂವಿಧಾನದ ಪರಿಚ್ಛೇದಗಳನ್ನು ಓದುವ ಅನಿವಾರ್ಯತೆಯ ಕಷ್ಟವನ್ನು ತೆಗೆದುಕೊಳ್ಳಬೇಕಾಗಿರುವುದು ನೀವು ಹೊರತು ಪ್ರಧಾನಿಗಳಲ್ಲ,ಮುಸ್ಲಿಮರಲ್ಲಿ ಹಿಂದುಳಿದಿರುವಿಕೆಯ ಬಗ್ಗೆ ಮಾಹಿತಿಯನ್ನು ಎಷ್ಟು ತಿಳಿದುಕೊಳ್ಳಬೇಕೋ ಅಷ್ಟನ್ನೂ ಪ್ರಧಾನ ಮಂತ್ರಿಗಳು ತಿಳಿದುಕೊಂಡಿದ್ದಾರೆ, ಈ ಹಿನ್ನೆಲೆಯಲ್ಲಿಯೇ ಮುಸ್ಲಿಂ ಸಮುದಾಯದಲ್ಲಿ ಶೋಷಣೆಗೊಳಗಾಗಿರುವ ಒಳಪಂಗಡಗಳು ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಕಾನೂನು ಹಾಗೂ ಯೋಜನೆಗಳನ್ನು ರೂಪಿಸಿದ್ದಾರೆ. ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ನಿಟ್ಟಿನಲ್ಲಿ ಸ್ವಾತಂತ್ರ್ಯಾ ನಂತರದಲ್ಲಿ ಮೊದಲ ಬಾರಿಗೆ ಚಾರಿತ್ರಿಕ ನಿರ್ಧಾರ ತೆಗೆದುಕೊಂಡಿದ್ದು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ಎನ್ನುವುದನ್ನು ನೀವು ಮರೆಯುವಂತಿಲ್ಲ. ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ತ್ರಿವಳಿ ತಲಾಕ್ ರದ್ದುಪಡಿಸಿದ್ದು, ವಕ್ಫ್ ಕಾಯ್ದೆಯ ಹೆಸರಿನಲ್ಲಿನ ಗೊಂದಲ ಹಾಗೂ ಶೋಷಣೆಯನ್ನು ತಪ್ಪಿಸುವ ತಿದ್ದುಪಡಿ ಮಸೂದೆ ಜಾರಿಗೊಳಿಸಿರುವುದು, ಸಾಮಾಜಿಕವಾಗಿ ಹಿಂದುಳಿದಿರುವ ಮುಸ್ಲಿಮರು ಹಾಗೂ ಮಹಿಳೆಯರ ಹಕ್ಕು ರಕ್ಷಿಸುವುದಕ್ಕಾಗಿಯೇ ಹೊರತು, ನಿಮ್ಮ ರೀತಿ ಮತಬ್ಯಾಂಕ್ ಕೇಂದ್ರೀಕರಿಸಿ ರಾಜಕಾರಣ ಮಾಡುವುದಕ್ಕಾಗಿ ಅಲ್ಲ ಎಂದು ಕಿಡಿ ಕಾರಿದ್ದಾರೆ.

siddaramaiah and vijayendra
ಜಾತಿಗಣತಿ ವಿಚಾರವಾಗಿ ವಿರೋಧ ಪಕ್ಷಗಳಿಂದ ಗೊಂದಲ ಸೃಷ್ಟಿ, ಅದಕ್ಕೆಲ್ಲಾ ತಕ್ಕ ಉತ್ತರ: ಡಿ.ಕೆ ಶಿವಕುಮಾರ್

ಜಾತಿಗಣತಿಯ ಹೆಸರಿನಲ್ಲಿ ಗೊಂದಲಗಳನ್ನು ಸೃಷ್ಟಿಸಿ ಸಮಾಜವನ್ನು ಛಿದ್ರ ಮಾಡಲು ಹೊರಟಿರುವ ನಿಮಗೆ ಪ್ರಧಾನಿಗಳನ್ನು ಕುರಿತು ಟೀಕಿಸುವ ಯಾವುದೇ ನೈತಿಕ ಹಕ್ಕು ಇಲ್ಲ, ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿಯ ಹೆಸರಿನಲ್ಲಿ ಪರಿಶಿಷ್ಟರೂ ಸೇರಿದಂತೆ ಇತರ ಶೋಷಿತರು ಹಾಗೂ ಬಡವರ ಹಕ್ಕು ಕಸಿಯಲಾಗುತ್ತಿದೆ ಎಂದು ಪ್ರಧಾನಿಗಳು ಹೇಳಿದ್ದಾರೆ. ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟರಿಗೆ ಶೇ15 ರಿಂದ 17 ಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ3 ರಿಂದ 7 ಕ್ಕೆ ಹೆಚ್ಚಿಸಿದ್ದು ನಮ್ಮ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿಯೇ ಹೊರತು, ನಿಮ್ಮ ಆಡಳಿತ ಅವಧಿಯಲ್ಲಲ್ಲ ಎನ್ನುವುದು ನಿಮಗೆ ನೆನಪಿರಲಿ.

ಕರ್ನಾಟಕ ರಾಜ್ಯದ ಒಟ್ಟು ಜನಕಲ್ಯಾಣದ ಬಗ್ಗೆ ಚಿಂತಿಸುವ ಬದಲು ಮತ ಬ್ಯಾಂಕನ್ನು ಕೇಂದ್ರೀಕರಿಸಿ ಅಲುಗಾಡುತ್ತಿರುವ ನಿಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಜಾತಿ- ಜಾತಿಗಳ ನಡುವೆ, ಧರ್ಮ- ಧರ್ಮಗಳ ನಡುವೆ ಬಿರುಕು ಮೂಡಿಸುವ ಕೆಲಸವನ್ನು ಇನ್ನಾದರೂ ಕೈಬಿಡಿ. ಇಲ್ಲವಾದರೆ ಇಷ್ಟರಲ್ಲೇ ರಾಜ್ಯದ ಜನತೆಯೇ ದಂಗೆ ಎದ್ದು ನಿಮಗೆ ಬುದ್ಧಿ ಕಲಿಸುವ ಕಾಲ ದೂರವಿಲ್ಲ ಎಂಬುದನ್ನು ನೀವು ಮರೆಯದಿರಿ ಎಂದು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com