
ಬೆಂಗಳೂರು: ರಾಜ್ಯ ಸಚಿವ ಸಂಪುಟದಿಂದ ರಾಜಣ್ಣ ಅವರನ್ನು ವಜಾಗೊಳಿಸಿರುವುದಕ್ಕೆ ನನಗೆ ಯಾವುದೇ ವಿಷಾದವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದರು,
ರಾಜಣ್ಣ ಅವರನ್ನು ಪದಚ್ಯುತಗೊಳಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಕಾಗಿದ್ದಾರೆಂಬ ಬಿಜೆಪಿ ಸದಸ್ಯ ಸತೀಶ್ ರೆಡ್ಡಿ ಅವರ ಹೇಳಿಕೆಗೆ ವಿಧಾನಸಭೆಯಲ್ಲಿ ಸಿಎಂ ಪ್ರತಿಕ್ರಿಯಿಸಿದರು.
ವಿಧಾನಸಭೆಯಲ್ಲಿ ಆರ್'ಸಿಬಿ ಕಾಲ್ತುಳಿತ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಅವರು, RCB ತಂಡವನ್ನು ಸನ್ಮಾನಿಸುತ್ತಿದ್ದೇನೆ ಎಲ್ಲರೂ ಬನ್ನಿ ಎಂದು ಮುಖ್ಯಮಂತ್ರಿ ಆಹ್ವಾನ ನೀಡುತ್ತಾರೆ. ಡಿಪಿಆರ್ ಕಾರ್ಯದರ್ಶಿ ವಿಧಾನಸೌಧ ಹತ್ತಿರ ಬರಬೇಡಿ ಎಂದು ಹೇಳಿಕೆ ನೀಡುತ್ತಾರೆ. ರಾಜ್ಯದ ಜನರ ಯಾರ ಮಾತು ಕೇಳಬೇಕು? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಅವರು, ಮುಖ್ಯಮಂತ್ರಿಯ ಮಾತು ಜನಗಳೆ ಕೇಳುತ್ತಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್ ಅವರು, 2013 ರಿಂದ 2018ರವರೆಗೆ ಇದ್ದಂತಹ ಸಿದ್ದರಾಮಯ್ಯ ಬೇಕು ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. ಆದರೆ, ಈಗ ಪವರ್ ಸೆಂಟರ್ ಎರಡು ಕಡೆ ಇರುವುದರಿಂದ ರಾಜಣ್ಣ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಆಗಿಲ್ಲ ಎಂದು ಲೇವಡಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೂ ಅಷ್ಟೇ ವಿರೋಧ ಪಕ್ಷದ ನಾಯಕರಾಗಿ ಅಶೋಕ್ ಇರಬಾರದಾಗಿತ್ತು ಎಂದು ನಿಮ್ಮ ಪಕ್ಷದ ಶಾಸಕರೆ ಹೇಳುತ್ತಾರೆ ಎಂದರು.
ಈ ಕೆಲವು ಬಿಜೆಪಿ ಶಾಸಕರು ಎದ್ದು ನಿಂತು ನಾವು ಯಾರೂ ಆ ರೀತಿ ಹೇಳಿಲ್ಲ ಎಂದರು. ನೋಡು, ಕೆಲವು ಶಾಸಕರು ಮಾತ್ರ ನಿನ್ನ ಪರವಾಗಿ ಎದ್ದು ನಿಂತಿದ್ದಾರೆ. ಉಳಿದವರು ಕೂತಿದ್ದಾರೆ ಎಂದು ತಿರುಗೇಟು ನೀಡಿದರು.
ಬಳಿಕ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸತೀಶ್ ರೆಡ್ಡಿ, ಯಾಕೋ ನಿನ್ನೆಯಿಂದ ಮುಖ್ಯಮಂತ್ರಿ ತುಂಬಾ ಮಂಕಾಗಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹಾಗೇನಿಲ್ಲ. ರಾಜಣ್ಣ ವಜಾದಿಂದ ನನಗೆ ಯಾವುದೇ ವಿಷಾದವಿಲ್ಲ. ನಾನು ಯಾವಾಗಲೂ ಸಮಚಿತ್ತದಿಂದಲೆ ಇರುತ್ತೇನೆ ಎಂದರು.
Advertisement