

ಬೆಂಗಳೂರು: ಸಿಎಂ ಹಾಗೂ ಡಿಸಿಎಂ ಬಣದಿಂದ ಡಿನ್ನರ್ ಮೀಟಿಂಗ್ ವಿಚಾರ ರಾಜ್ಯ ರಾಜಕೀಯದಲ್ಲಿ ಜೋರಾಗಿ ಸದ್ದು ಮಾಡುತ್ತಿರುವಂತೆಯೇ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್. ಸಿ. ಬಾಲಕೃಷ್ಣ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಊಟಕ್ಕೆ ಸೇರುವುದಕ್ಕೆ ಯಾವುದೇ ಬಣ ಇಲ್ಲ. ಸಿಎಂ ಕರೆದಿದ್ದ ಔತಣಕೂಟಕ್ಕೆ ನಮಗೂ ಆಹ್ವಾನ ಇತ್ತು. ಸಮಾನ ಮನಸ್ಕರು ಕೂತು ಊಟ ಮಾಡಿದ್ರೆ ಅದರಲ್ಲಿ ಬಣ ಹುಡುಕುವ ಅಗತ್ಯ ಇಲ್ಲ. ಅಧಿವೇಶನಕ್ಕೆ ಹೋದಾಗ ಊಟಕ್ಕೆ ಸೇರೋದು ಸಾಮಾನ್ಯ, ಅದು ಮಾಧ್ಯಮದವರಿಗೆ ಗೊತ್ತಾದ್ರೆ ಡಿನ್ನರ್ ಮೀಟಿಂಗ್ ಎಂಬ ಹೆಸರು ಅಷ್ಟೇ ಎಂದರು.
ನಾಯಕತ್ವ ಬದಲಾವಣೆ ಬಗ್ಗೆ ನಮ್ಮ ಹೈಕಮಾಂಡ್ ಪರಿಹಾರ ಕಂಡುಹಿಡಿಯಲಿದೆ. ಶೀಘ್ರದಲ್ಲೇ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಲಿದೆ. ಜ. 6ಕ್ಕೆ ಪಟ್ಟಾಭಿಷೇಕ ಎಂಬುದು ಇಕ್ಬಾಲ್ ಹುಸೇನ್ ಅಭಿಪ್ರಾಯ ಅದನ್ನ ಅವರು ಹೇಳಿದ್ದಾರೆ.
ಹೈಕಮಾಂಡ್ ಟೈಂ ಕೂಡಾ ಚೆನ್ನಾಗಿರಬೇಕು: ಕೇವಲ ಇಕ್ಬಾಲ್ ಹುಸೇನ್ ಟೈಂ ಚೆನ್ನಾಗಿದ್ರೆ ಸಾಲಲ್ಲ, ಹೈಕಮಾಂಡ್ ಟೈಂ ಕೂಡಾ ಚೆನ್ನಾಗಿರಬೇಕು. ಅದೃಷ್ಟ ಹುಡುಕಿಕೊಂಡು ಬಂದಾಗ ಯಾವ ಲಕ್ಕಿ ನಂಬರೂ ಬೇಕಾಗಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೈಕಮಾಂಡ್ ಗೆ ವಾರ್ನಿಂಗ್ ನೀಡಿದರು.
ಡಿಕೆಶಿ ಶ್ರಮದಿಂದ ಮಾಗಡಿಗೆ ಹೇಮಾವತಿ: ಇನ್ನೂ ಮಾಗಡಿಗೆ ಶ್ರೀರಂಗ ಏತ ನೀರಾವರಿ ಯೋಜನೆ ಕುರಿತು ಮಾತನಾಡಿದ ಬಾಲಕೃಷ್ಣ, ಡಿಕೆ ಶಿವಕುಮಾರ್ ಶ್ರಮದಿಂದ ಮಾಗಡಿಗೆ ಹೇಮಾವತಿ ಬಂದಿದ್ದಾಳೆ. ಇದರಿಂದ 63ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗುತ್ತೆ. ಶೀಘ್ರದಲ್ಲೇ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕೂಡಾ ಆರಂಭ ಆಗುತ್ತೆ. ಕುಮಾರಸ್ವಾಮಿ ಮಾಗಡಿಗೆ ಹೇಮಾವತಿ ನೀರು ಬರಲ್ಲ ಅಂದಿದ್ರು. ಅದೊಂದು ಬೋಗಸ್ ಸ್ಕೀಂ ಅಂತ ಹೇಳಿದ್ರು. ದೇವೇಗೌಡರು ಕೂಡಾ ಹೇಮಾವತಿ ಮಾಗಡಿಗೆ ಬರಲ್ಲ ಅಂದಿದ್ರು. ಈಗ ಡಿಕೆಶಿ ಇಚ್ಛಾಶಕ್ತಿಯಿಂದ ಮಾಗಡಿಗೆ ನೀರು ಬಂದಿದೆ. ಜನ ಇನ್ನೂ ದೇವೇಗೌಡರು, ಕುಮಾರಸ್ವಾಮಿ ನಂಬಿಕೊಂಡು ಕೂತ್ರೆ ಆಗಲ್ಲ ಎಂದರು.
ಕುಮಾರಸ್ವಾಮಿ ಡವ್ ರಾಜಕಾರಣ ಬಿಡಬೇಕು: ಮೊನ್ನೆ ಮಂಡ್ಯದಲ್ಲಿ 100 ಎಕರೆ ಜಾಗ ಕೊಡಿ ಕೈಗಾರಿಕೆ ತರ್ತೀವಿ ಅಂತಾರೆ. ಕುಮಾರಸ್ವಾಮಿ ಮನಸ್ಸು ಮಾಡಿದ್ರೆ ಅವರ ಸ್ವಂತ ದುಡ್ಡಲ್ಲೇ 100 ಎಕರೆ ಜಾಗ ಖರೀದಿ ಮಾಡಬಹುದು. ಮಂಡ್ಯದ ಜನರ ಖುಣ ತೀರಿಸಬೇಕು ಅಂದ್ರೆ ಸ್ವಂತ ಹಣದಲ್ಲೇ ಜಮೀನು ಖರೀದಿ ಮಾಡಲಿ, ಇಲ್ಲ ನಾವು ರೈತರ ಬಳಿ ಬಿಕ್ಷೆ ಬೇಡಿ ಹಣ ಕೊಡ್ತೀವಿ. ಕುಮಾರಸ್ವಾಮಿ ಡವ್ ರಾಜಕಾರಣ, ಸುಳ್ಳು ರಾಜಕಾರಣ ಬಿಡಬೇಕು ಎಂದು ಹೇಳಿದರು.
HDK ರಾಮನಗರದಲ್ಲಿ ಏನೂ ಕೆಲಸ ಮಾಡಿಲ್ಲ: ಕುಮಾರಸ್ವಾಮಿ ರಾಮನಗರದಲ್ಲಿ ಇಷ್ಟು ವರ್ಷ ಇದ್ರೂ ಏನೂ ಕೆಲಸ ಮಾಡಿಲ್ಲ. ಈ ಬಗ್ಗೆ ಜೆಡಿಎಸ್ ನವರು ಚರ್ಚೆಗೆ ಬರಬಹುದು. ಕುಮಾರಸ್ವಾಮಿ ಬೋಗಸ್ ಅಂದಿದ್ದ ಯೋಜನೆಯಿಂದ ಈಗ ಮಾಗಡಿಗೆ ನೀರು ಬರ್ತಿದೆ. ಕುಮಾರಸ್ವಾಮಿಗೆ ಕೆಲಸ ಮಾಡಲು ಇಚ್ಛಾಶಕ್ತಿ ಇರಲಿಲ್ಲ. ಕೇವಲ ಬುರುಡೆ ಹೊಡೆಯುವವರು, ಕಣ್ಣೀರು ಸುರಿಸುವವರಿಂದ ಅಭಿವೃದ್ಧಿ ಆಗಲ್ಲ. ನಮ್ಮ ಜಿಲ್ಲೆ ಅದೋಗತಿಗೆ ಹೋಗಲು ಕುಮಾರಸ್ವಾಮಿ ಕಾರಣ. ಜನ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದರು.
Advertisement