ಕೇಂದ್ರ ಬಜೆಟ್ ಅಲ್ಲ, ಬಿಹಾರಿ ಬಜೆಟ್; ಬಿಹಾರಕ್ಕೆ ಬೆಣ್ಣೆ, ಕರ್ನಾಟಕಕ್ಕೆ ಸೊನ್ನೆ: ಕಾಂಗ್ರೆಸ್ ವ್ಯಂಗ್ಯ

ಕರ್ನಾಟಕಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ಕರ್ನಾಟಕ ತೆರಿಗೆ ಬೇರೆ ರಾಜ್ಯದ ಪಾಲಾಗ್ತಿದೆ. ಬಿಹಾರ ರಾಜ್ಯಕ್ಕೆ ಐದಾರು ಯೋಜನೆ ಕೊಟ್ಟಿದ್ದಾರೆ. ಕರ್ನಾಟಕದವರು ಕಡ್ಲೆ ಬೀಜ ತಿನ್ನೋಕೆ ಇರೋದಾ?
ಕಾಂಗ್ರೆಸ್ ಟ್ವೀಟ್
ಕಾಂಗ್ರೆಸ್ ಟ್ವೀಟ್
Updated on

ಬೆಂಗಳೂರು: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗ ಅನ್ಯಾಯ ಮಾಡಿದ್ದು, ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಿರು ರಾಜ್ಯಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, ನಮ್ಮ ರಾಜ್ಯದ ಶಾಸಕರಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್‌ ಇಷ್ಟೊಂದು ನಿರಾಸೆ ಉಂಟು ಮಾಡುತ್ತಾರೆ ಎಂದು ಭಾವಿಸಿರಲಿಲ್ಲ. ಇಡೀ ದೇಶದಲ್ಲಿಯೇ ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಐಟಿ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ರಾಜ್ಯದ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿಲ್ಲ. ಯಾವುದೇ ಚುನಾವಣೆಗಳು ಹತ್ತಿರವಿಲ್ಲದ ಕಾರಣಕ್ಕೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ ಅನ್ನಿಸುತ್ತದೆ. ರಾಜ್ಯಕ್ಕೆ ಏನಾದರೂ ಲಾಭ ಆಗಿದೆಯೇ ಎಂದು ರಾಜ್ಯವನ್ನು ಪ್ರತಿನಿಧಿಸುವವರು ಹೇಳಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರವು ಲಕ್ಷಾಂತರ ಕನ್ನಡಿಗರ ಮನವಿಗಳಿಗೆ ಗಮನ ಕೊಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಚುನಾವಣೆಗಳು ಬಂದಾಗಲೆಲ್ಲಾ ಅಧಿಕಾರ ಪಡೆಯುವ ಮಾರ್ಗಗಳ ಬಗ್ಗೆ ಮಾತ್ರ ಆ ಪಕ್ಷ ಕಾಳಜಿ ತೋರಿಸುತ್ತದೆ. ಈ ಬಜೆಟ್ ಕರ್ನಾಟಕದ ಆಕಾಂಕ್ಷೆಗಳಿಗೆ ಮಾತ್ರವಲ್ಲ, ಪ್ರಜಾಪ್ರಭುತ್ವದ ಅಡಿಪಾಯಕ್ಕೂ ದೊಡ್ಡ ಹೊಡೆತವಾಗಿದೆ, ಈ ಬಜೆಟ್ ಕೇಂದ್ರ ಸರ್ಕಾರ ಪಕ್ಷಪಾತವನ್ನು ಬಹಿರಂಗವಾಗಿ ತೋರಿಸುತ್ತಿದೆ, ಸಮೃದ್ಧಿ, ಸಮಾನತೆ ಮತ್ತು ಅಭಿವೃದ್ಧಿಯ ಹಕ್ಕನ್ನು ಕಸಿದುಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮಾತನಾಡಿ, ಬಂಡವಾಳ ವೆಚ್ಚವನ್ನು ಬದಲಾವಣೆ ಮಾಡದಿರುವುದು ಆರ್ಥಿಕ ಬೆಳವಣಿಗೆಗೆ ಒಳ್ಳೆಯದಲ್ಲ. ಇದು ಅಭಿವೃದ್ಧಿಯ ವೇಗವನ್ನು ನಿಧಾನಗೊಳಿಸುತ್ತದೆ. ನೆರೆಯ ಚೀನಾದಿಂದ ಉಂಟಾಗುವ ಸ್ಪರ್ಧೆಯನ್ನು ಎದುರಿಸಲು, ನಾವು ಬಂಡವಾಳ ವೆಚ್ಚವನ್ನು ಹೆಚ್ಚಿಸಬೇಕಾಗಿದೆ. ಆದರೆ ಬಜೆಟ್‌ನಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲದಿರುವುದು ದುರದೃಷ್ಟಕರ ಎಂದು ಹೇಳಿದರು.

ದೇಶದ ಐಟಿ, ಬಿಟಿ ಮತ್ತು ಸ್ಟಾರ್ಟ್ಅಪ್ ರಾಜಧಾನಿ ಕರ್ನಾಟಕಕ್ಕೆ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಮೋದಿ ಸರ್ಕಾರ ಘೋಷಿಸಿಲ್ಲ. ದೇಶದ ಒಟ್ಟಾರೆ ರಫ್ತು ವಹಿವಾಟಿನಲ್ಲಿ ರಾಜ್ಯದ ಪಾಲು ಹೆಚ್ಚಾಗಿದೆ. ಆದ್ದರಿಂದ, ನಮಗೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕಾಗಿತ್ತು. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಹಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಟ್ವೀಟ್
Budget 2025: ಅಭಿವೃದ್ಧಿ ಆಧಾರಿತ, ಸಮತೋಲಿತ ಬಜೆಟ್ ಎಂದ BJP

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮಾತನಾಡಿ, ಬಜೆಟ್‌ನಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದರು.

ದೇಶದಲ್ಲೇ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ 2 ನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಅಭಿವೃದ್ಧಿಯಿಂದ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ದೇಶದ ದಕ್ಷಿಣ ಭಾಗದ ರಾಜ್ಯಗಳ ಜನರ ತೆರಿಗೆಯ ಸಂಪತ್ತನ್ನು ಉತ್ತರ ಭಾರತ ರಾಜ್ಯಗಳ ಅಭಿವೃದ್ಧಿಗೆ ಸುರಿಯಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ನೀರಾವರಿ ಯೋಜನೆಗಳನ್ನು, ರೈತರ ಆದಾಯ ಹೆಚ್ಚಿಸುವಂಥ ಬಲಿಷ್ಟವಾದ ಯೋಜನೆಗಳನ್ನು ರೂಪಿಸಿಲ್ಲ. ಯುವಕರ ನಿರುದ್ಯೋಗ ಸಮಸ್ಯೆಗೆ ಪರಿಹಾರಗಳಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ಮೂವರು ಸಚಿವರಿದ್ದರು, ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿನ ಮಹಾನಗರಗಳ ಸುರಕ್ಷತೆಗೆ ಮತ್ತು ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ನೀಡುವ ನಿರೀಕ್ಷೆಯು ಹುಸಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕದ ಜನತೆಗೆ ಬಜೆಟ್‌ನಲ್ಲಿ ಮತ್ತೊಮ್ಮೆ ಮೋಸ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಟ್ವೀಟ್
ಕೇಂದ್ರ ಬಜೆಟ್ ರಾಜ್ಯಕ್ಕೆ ನಿರಾಶೆ ಮೂಡಿಸಿದೆ, ಕರ್ನಾಟಕಕ್ಕೆ ಖಾಲಿ ಚೊಂಬು: ಸಿಎಂ ಸಿದ್ದರಾಮಯ್ಯ ಕಿಡಿ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಕೇಂದ್ರ ಬಜೆಟ್ ಕರ್ನಾಟಕದ ಪಾಲಿಗೆ ಕರಾಳ ದಿನವಾಗಿದೆ. ರಾಜ್ಯದ ಯಾವ ಬೇಡಿಕೆಯೂ ಬಜೆಟ್‌ನಲ್ಲಿ ಈಡೇರಿಲ್ಲ ಎಂದು ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಕರ್ನಾಟಕದ ಯಾವ ಬೇಡಿಕೆಯೂ ಈಡೇರಿಲ್ಲ. ಕರ್ನಾಟಕಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ಕರ್ನಾಟಕ ತೆರಿಗೆ ಬೇರೆ ರಾಜ್ಯದ ಪಾಲಾಗ್ತಿದೆ. ಬಿಹಾರ ರಾಜ್ಯದ ಐದಾರು ಯೋಜನೆ ಕೊಟ್ಟಿದ್ದಾರೆ. ಹಾಗಾದ್ರೆ ಕರ್ನಾಟಕದವರು ಕಡ್ಲೆ ಬೀಜ ತಿನ್ನೋಕೆ ಇರೋದಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಯುಪಿ, ಬಿಹಾರ ಮಾತ್ರ ಕೇಂದ್ರಕ್ಕೆ ಕಾಣುತ್ತಿದೆ, ಕರ್ನಾಟಕ ಕಾಣ್ತಿಲ್ಲ. ತೆರಿಗೆ ಕಟ್ಟಿದ ಕನ್ನಡಿಗರು ಕಾಣ್ತಿಲ್ಲ. ನಮ್ಮ ರಾಜ್ಯ ಕೇವಲ ದುಡಿಯವ ಆಳಿನ ರೀತಿ ಕಾಣುತ್ತಿದೆ. ಜನರ ಹಾಗೇ ಸರ್ಕಾರದ ಪರವಾಗಿ ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದಾಗಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಜ್ವಲಂತ ಆರ್ಥಿಕ ಸಮಸ್ಯೆಗಳಿದ್ದು, ಇವುಗಳ ಮೇಲೆ ಬಜೆಟ್'ನಲ್ಲಿ ಯಾವುದ ಪ್ರಸ್ತಾಪವಿಲ್ಲ. ಇದೇನೇ ಕೇಂದ್ರ ಬಜೆಟ್'ಯೇ ಅಥವಾ ಬಿಹಾರ ಚುನಾವಣಾ ಪ್ರಣಾಳಿಕೆಯೇ? ಎಂದು ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com