
ಸೇಡಂ (ಕಲಬುರಗಿ): ಗಂಗೆಯಂತೆಯೇ ರಾಜ್ಯ ಬಿಜೆಪಿ ಕೂಡ ಶುದ್ಧವಾಗಬೇಕು. ಹೀಗಾಗಿಯೇ ವಿಜಯೇಂದ್ರ ವಿರುದ್ಧ ಹೋರಾಟ ಮಾಡುತ್ತಿದ್ದೇವೆಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಂಗಳವಾರ ಹೇಳಿದರು.
ಇಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣರಾದವರಿಗೆ ವಿವಿಧ ಜಿಲ್ಲೆಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಕೊನೆಗೊಳ್ಳಬೇಕು. ನಮ್ಮ ಪಕ್ಷ ಗಂಗಾ ನದಿಯಂತೆ ಸ್ವಚ್ಛವಾಗಿರಬೇಕು ಎನ್ನುವುದು ನಮ್ಮ ಹೋರಾಟದ ಉದ್ದೇಶ ಎಂದು ಹೇಳಿದರು.
ಪಕ್ಷ ಮತ್ತು ದೇಶದ ಹಿತದೃಷ್ಟಿಯಿಂದ ನಮ್ಮ ಹೋರಾಟ ಆರಂಭವಾಗಿದೆ. ಭ್ರಷ್ಟಾಚಾರ ಮತ್ತು ಹಿಂದೂತ್ವ ವಿರೋಧಿ ಹಿನ್ನೆಲೆ ಹೊಂದಿರುವವರನ್ನು ಅಧಿಕಾರದಿಂದ ದೂರವಿಡಬೇಕು. ಈ ಅಂಶಗಳಲ್ಲಿ ಪಾಸ್ ಆದವರು ಯಾರೇ ಅಧ್ಯಕ್ಷರಾದರೂ ಒಪ್ಪುತ್ತೇವೆ. ರಾಮುಲು ಅಧ್ಯಕ್ಷರಾದರೆ ಸ್ವಾಗತಿಸುತ್ತೇವೆ’ ಎಂದು ತಿಳಿಸಿದರು.
4-5 ದಿನದಲ್ಲಿ ಸರಿಹೋಗುತ್ತೆ ಮತ್ತೆ ಮುಂದುವರಿಯುವ ವಿಜಯೇಂದ್ರ ವಿಶ್ವಾಸ ಹೇಳಿಕೆಗೆ ಪ್ರತಿಕ್ರಿಯಿಸಿ. ಮೊದಲು ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿ. ವಿಜಯೇಂದ್ರ ಹೋದರೆ ಮುಂದಿನ ನಾಲ್ಕೈದು ದಿನದಲ್ಲಿ ಪಕ್ಷದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.
ಹಾಗೆ ನೋಡಿದರೆ ನಮ್ಮ ಪಕ್ಷಕ್ಕೆ ನಾವೇ ಆಶಾ ಕಿರಣ. ಚುನಾವಣೆ ನಡೆದು ವಿಜಯೇಂದ್ರ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷರಾದರೆ ಆಗಲಿ. ಯತ್ನಾಳ್ ರಾಜ್ಯಾಧ್ಯಕ್ಷರಾಗಲಿ ಎನ್ನುವವರು ಅನೇಕರು ಪಕ್ಷದಲ್ಲಿ ಇದ್ದಾರೆ. ನಾನೂ ದಶಕಗಳಿಂದ ರಾಜಕೀಯದಲ್ಲಿದ್ದೇನೆ. ಯಡಿಯೂರಪ್ಪ ಸಮಕಾಲೀನ ಒಂದು ವೇಳೆ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ನಮ್ಮ ಬಣದ ನಿರ್ಣಯ ಆಗ ತಿಳಿಸುತ್ತೇನೆ. ಹೋರಾಟವಂತೂ ಮುಂದುವರೆಯು್ತದೆ ಎಂದು ತಿಳಿಸಿದರು.
ಈ ಹಿಂದೆ ನನ್ನನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಎನ್.ರವಿಕುಮಾರ್ ಬಂದಿದ್ದರು. ಆದರೆ, ನನಗೆ ಕನ್ನಡ, ಹಿಂದಿ ಮಾತ್ರ ಬರುತ್ತದೆ. ಹೀಗಾಗಿ ವಿಜಯೇಂದ್ರ ರಾಷ್ಟ್ರ ರಾಜಕಾರಣಕ್ಕೆ ಹೋಗಲಿ ಎಂದು ಹೇಳಿದ್ದೆ. 'ಕುಟುಂಬ ರಾಜಕಾರಣ ಮಾಡಿದರೆ ನಾಳೆ ನಾನು ನನ್ನ ಮಗನಿಗೆ ಟಿಕೆಟ್ ಕೇಳುತ್ತಿದ್ದೆ. ಪಕ್ಷ ಗಂಗೆಯಂತೆ ಪವಿತ್ರವಾಗಬೇಕು ಎಂದು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್ ಅವರು, ಪ್ರದೇಶದ ಅಭಿವೃದ್ಧಿಗಾಗಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿದ್ದೇನೆ. ಆದರೆ ಅದನ್ನು ಸಹಿಸಲಾಗದ ಕೆಲವರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಕ ಅಡ್ಡಿಯುಂಟು ಮಾಡಿದ್ದಾರೆ. ನ್ಯಾಯಾಲಯ ಇದೀಗ ನನ್ನ ಪರವಾಗಿ ತೀರ್ಪು ನೀಡಿದ್ದು, ಶೀಘ್ರದಲ್ಲೇ ಕಾರ್ಖಾನೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಕಲಬುರಗಿ ಜಿಲ್ಲೆಯ 370 ಹಳ್ಳಿಗಳು ನನ್ನ ಕಾರ್ಖಾನೆಯ ವ್ಯಾಪ್ತಿಗೆ ಬರಲಿವೆ. ವಿಜಯಪುರದಲ್ಲಿ ಮಾಡಿದಂತೆ ಶಾಲಾ ವಿದ್ಯಾರ್ಥಿಗಳಿಗೆ ವಿಮೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
Advertisement