ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೂ ಚುನಾವಣೆಗೆ ಬಳಸಿಕೊಂಡಿದ್ದಾರೆ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ದೇವೇಗೌಡ ಗುಡುಗು

ನಾನು ಸತ್ಯವನ್ನು ಹೇಳಿದರೆ, ನಿಮಗೆ ಅರಗಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಗುಡುಗಿದರು.
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ
Updated on

ನವದೆಹಲಿ/ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೂ ಕಾಂಗ್ರೆಸ್ ಚುನಾವಣೆಗೆ ಬಳಸಿಕೊಂಡಿದೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್'ಡಿ.ದೇವೇಗೌಡ ಅವರು ಕಿಡಿಕಾರಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಲೋಕಸಭೆಯಲ್ಲಿ ಬಿಜೆಪಿಗೆ ಸಿಕ್ಕಿರುವುದು 240 ಸ್ಥಾನಗಳಷ್ಟೇ ಎಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡುತ್ತಿದ್ದಾರೆ. ಆದರೆ, ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ 136 ಸ್ಥಾನ ಗೆದ್ದಿದೆ. ಅದರಿಂದ ಉಪಯೋಗವೇನು? ಕಾಂಗ್ರೆಸ್ ಯಾವ ರೀತಿ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಅಲ್ಲಿರುವುದು ಕಡು ಭ್ರಷ್ಟ ಸರ್ಕಾರ. ಪ್ರಗತಿಶೀಲ ರಾಜ್ಯ ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಹಾಳು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೂ ಚುನಾವಣೆಗೆ ಬಳಸಿಕೊಂಡಿದ್ದಾರೆ. ಯಾವುದೇ ಅಂಜಿಕೆ ಇಲ್ಲದೆ ಭ್ರಷ್ಟಾಚಾರದಲ್ಲಿ ತೊಡಗಿರುವ ಈ ಸರ್ಕಾರದ ಕೆಟ್ಟ ಆಡಳಿತದಿಂದ ಅನೇಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಸತ್ಯವನ್ನು ಹೇಳಿದರೆ, ನಿಮಗೆ ಅರಗಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಗುಡುಗಿದರು.

ಹೆಚ್ ಡಿ ದೇವೇಗೌಡ
ಮೋದಿ ದೇಶದ ಅತ್ಯಂತ ದೊಡ್ಡ ನಾಯಕ: ರಾಜ್ಯಸಭೆಯಲ್ಲಿ ಪ್ರಧಾನಿಯನ್ನು ಹಾಡಿ ಹೊಗಳಿದ ದೇವೇಗೌಡ

ಇದೇ ಕರ್ನಾಟಕ ಸಚಿವರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ಹೊರಹಾಕಿದ ದೇವೇಗೌಡಅವರು, ಸ್ವತಃ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತ ಪತ್ರಿಕಾ ವರದಿಗಳನ್ನು ನಾನು ಈ ಸದನದಲ್ಲಿ ಓದಲೇ? ತಮ್ಮ ಮಂತ್ರಿಗಳಿಗೆ ನೀಡಿದ ಸಲಹೆಯನ್ನು ನಾನು ಓದಿದರೆ ಖರ್ಗೆ ಅವರಿಗೆ ಬೇಸರವಾಗಬಹುದು ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಭಾಷಣಕ್ಕೆ ಅಡ್ಡಿಯುಂಟು ಮಾಡಲು ಯತ್ನಿಸಿದರು.

ಬಳಿಕ ಬೆಂಗಳೂರಿನ ಕುಡಿಯುವ ನೀರು ಬಿಕ್ಕಟ್ಟು ವಿಚಾರವನ್ನು ಪ್ರಸ್ತಾಪಿಸಿದ ದೇವೇಗೌಡ ಅವರು, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ದಿನೇ ದಿನ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ನಗರದ ಜನಸಂಖ್ಯೆ 1.45 ಕೋಟಿ ದಾಟಿದೆ. ನಗರಕ್ಕೆ ಕಾವೇರಿ ನ್ಯಾಯಮಂಡಳಿಯು 20 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದ್ದು, ಅಷ್ಟು ಪ್ರಮಾಣದ ನೀರು ಏನೇನಕ್ಕೂ ಸಾಲದು. ಕನಿಷ್ಟ 50 ಟಿಎಂಸಿ ನೀರು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.

ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿದ್ದೆ. ಆಗ ಖರ್ಗೆ ಸಚಿವರಾಗಿದ್ದರು. ಆದರೆ, ಸಿಂಗ್ ಅವರ ಕೈ ಚೆಲ್ಲಿದ್ದರು. ಆದರೆ, ಈ ನೀರಿನ ಬಿಕ್ಕಟ್ಟನ್ನು ಬಗೆಹರಿಸಲು ಮೋದಿ ಅವರಿಂದ ಸಾಧ್ಯ. ಇದು ನನ್ನ ಬಲವಾದ ನಂಬಿಕೆ ಎಂದು ಪ್ರತಿಪಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com