ಗ್ಯಾರಂಟಿ ಯೋಜನೆಗಳು ಶೀಘ್ರದಲ್ಲೇ ಬಂದ್: ಛಲವಾದಿ ನಾರಾಯಣಸ್ವಾಮಿ

ಈಗಾಗಲೇ ಸರ್ಕಾರ ಮೆಟ್ರೋ ರೈಲು, ಹಾಲು, ಸ್ಟ್ಯಾಂಪ್ ಡ್ಯೂಟಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ. ಇಷ್ಟೆಲ್ಲ ಆದರೂ ಇನ್ನೂ ಬೆಲೆ ಏರಿಕೆಯಲ್ಲಿ ನಿರತವಾಗಿದೆ.
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ
Updated on

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೊನೆಗೊಳಿಸುವ ಕೆಲಸಕ್ಕೆ ಕೈ ಹಾಕಲಿದೆ ಎಂದೆನಿಸುತ್ತಿದೆ. ಈಗಾಗಲೇ ಸರ್ಕಾರ ಮೆಟ್ರೋ ರೈಲು, ಹಾಲು, ಸ್ಟ್ಯಾಂಪ್ ಡ್ಯೂಟಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ. ಇಷ್ಟೆಲ್ಲ ಆದರೂ ಇನ್ನೂ ಬೆಲೆ ಏರಿಕೆಯಲ್ಲಿ ನಿರತವಾಗಿದೆ. ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದರು.

ಕರ್ನಾಟಕದಲ್ಲಿ ಕಾಂಗ್ರಸ್ ಸರ್ಕಾರವು ಚುನಾವಣೆಗೆ ಮುನ್ನ ನೀಡಿದ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಸಹ ಸಮಾನ ತೂಕದಲ್ಲಿ ಸಾಗಿಸಬೇಕು. ಆದರೆ, ಅದೇ ಗ್ಯಾರಂಟಿಗಳ ಭರಾಟೆಯಲ್ಲಿ ಸರ್ಕಾರ ಮುಳುಗಿಹೋಗಿದ್ದು, ರಾಜ್ಯದ ಮುನ್ನಡೆಗೆ ಅಗತ್ಯವಾದ ಮೂಲಭೂತ ಸೌಕರ್ಯ, ಉದ್ಯೋಗ ಸೃಷ್ಟಿ, ಕೈಗಾರಿಕಾ ಅಭಿವೃದ್ಧಿ, ಕೃಷಿ, ಆರೋಗ್ಯ, ಕಾನೂನು ಸುವ್ಯವಸ್ಥೆ, ಶಿಕ್ಷಣ ಇನ್ನಿತರ ಮೊದಲಾದ ಕ್ಷೇತ್ರಗಳಿಗೆ ಸಾಕಷ್ಟು ಗಮನ ನೀಡಲಾಗುತ್ತಿಲ್ಲ ಎಂಬ ಅಸಮಾಧಾನ ಈಗ ಸ್ವಪಕ್ಷೀಯ ಶಾಸಕರಲ್ಲಿಯೂ ಸಹ ವ್ಯಕ್ತವಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಬಿಕೆ.ಹರಿಪ್ರಸಾದ್ ಅವರ ಟೀಕೆಯಿಂದಲೇ ರಾಜ್ಯ ಸರ್ಕಾರ ಗ್ಯಾರಂಟಿಗಳಲ್ಲೇ ಮುಳುಗಿದೆ ಎಂಬುದನ್ನು ದೃಢಪಡಿಸಬಹುದು. ಅವರೇ "ಗ್ಯಾರಂಟಿಗಳಲ್ಲೇ ಮುಳುಗಿದ್ದು ಸಾಕು, ಅಭಿವೃದ್ಧಿಗೆ ಗಮನ ಕೊಡಬೇಕು" ಎಂಬ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿರುವುದು, ಸರ್ಕಾರದ ಕಾರ್ಯಪದ್ಧತಿಯಲ್ಲಿ ದೊಡ್ಡ ದೋಷವಿದೆ ಎಂಬುದನ್ನು ಒಪ್ಪಿಕೊಳ್ಳುವಂತಾಗಿದೆ.

ಛಲವಾದಿ ನಾರಾಯಣಸ್ವಾಮಿ
ಗ್ಯಾರಂಟಿ ಯೋಜನೆಗಳು ಸಾಕು, ಪ್ರಣಾಳಿಕೆಯತ್ತ ಗಮನ ಹರಿಸಿ: ಚರ್ಚೆಗೆ ಕಾರಣವಾಯ್ತು ಬಿಕೆ.ಹರಿಪ್ರಸಾದ್ ಹೇಳಿಕೆ

ಆಡಳಿತದ ಪ್ರಥಮ ದಿನದಿಂದಲೂ ಪ್ರಚಾರದ ರಾಜಕೀಯ ಒಂದೇ ಮಾದರಿಯಾಗಿದೆ, ಆದರೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ. ರಸ್ತೆಗಳ ದುರಸ್ಥಿ, ಕೈಗಾರಿಕಾ ಹೂಡಿಕೆ, ನಿರುದ್ಯೋಗ ಸಮಸ್ಯೆ, ಕೃಷಿ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಇನ್ನಿತರ ಸಮಸ್ಯೆಗಳು–ಇವೆಲ್ಲವೂ ಹಿನ್ನಲೆಗೆ ಸರಿದು, ಜನತೆಯ ಕಣ್ಣಿಗೆ ಕೇವಲ ವಾಸ್ತವವಾಗಿ ಜಾರಿಯಾಗದ ಗ್ಯಾರಂಟಿಗಳ ಪ್ರದರ್ಶನವೇ ಕಾಣಿಸುತ್ತಿದೆ.

ಇಂತಹ ಅಸಮತೋಲಿತ ಆಡಳಿತದ ಪರಿಣಾಮವಾಗಿ, ಸ್ವತಃ ಪಕ್ಷದ ಹಿರಿಯ ನಾಯಕರು ಕೂಡಾ ಅಸಮಾಧಾನ ವ್ಯಕ್ತಪಡಿಸಬೇಕಾದ ಪರಿಸ್ಥಿತಿ ಎದುರಾಗಿರುವುದು, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಗ್ರಹಣದಿಂದ ಹೊರಬಂದು, "ಅಭಿವೃದ್ಧಿಯ ಗ್ಯಾರಂಟಿ" ನೀಡಲು ಸಿದ್ಧವಾಗದೇ, ಸರ್ಕಾರದ ಖಜಾನೆಯನ್ನು ಖಾಲಿ ಮಾಡಿಕೊಂಡು ಎಲ್ಲಾ ವಲಯಗಳಲ್ಲಿ ದರ ಏರಿಕೆ ಮಾಡುತ್ತಾ ಜನಸಾಮಾನ್ಯರ ನಿತ್ಯ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com