
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ವಿರುದ್ಧ ಸ್ವಪಕ್ಷೀಯರೇ ಅಸಮಾಧಾನಗಳನ್ನು ಹೊರಹಾಕುತ್ತಿರುವುದು ಮುಂದುವರೆದಿದೆ. ಮೇಲ್ಮನೆ ಸದಸ್ಯರೂ ಆಗಿರುವ ಪಕ್ಷದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಕೂಡ ಗ್ಯಾರಂಟಿ ಯೋಜನೆ ಮೇಲೆ ಮಾತ್ರ ಗಮನಹರಿಸುವುದನ್ನು ಬಿಟ್ಟು, ಪ್ರಣಾಳಿಕೆಯ ಭರವಸೆಗಳನ್ನೂ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.
ದೆಹಲಿ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕರ್ನಾಟಕದಲ್ಲಿ ಗ್ಯಾರಂಟಿಯಲ್ಲಿ ಮುಳುಗಿರುವುದು ಸಾಕು. ಗ್ಯಾರಂಟಿ ಒಂದು ಕಡೆ ಇರಲಿ, ಅದು ತಪ್ಪಲ್ಲ. ಆದರೆ, ಅದರಲ್ಲೇ ಮುಳುಗಿದರೆ ಆಗುವುದಿಲ್ಲ. ಚುನಾವಣೆ ವೇಳೆ ಪ್ರಕಟಿಸಿದ ಪ್ರಣಾಳಿಕೆಯ ಭರವಸೆಗಳನ್ನೂ ಜಾರಿಗೆ ತರಬೇಕೆಂದು ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ಹಿಂಪಡೆದಿದೆ. ಆದರೆ, ನಾವಿನ್ನೂ ಹಿಂಪಡೆದಿಲ್ಲ. ಈ ಕುರಿತು ಕೂಡಲೇ ಆ ಕೆಲಸ ಮಾಡಬೇಕು. ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಕಾನೂನುಬಾಹಿರವಾಗಿ ಮಾಡಿತ್ತು. ಅದನ್ನು ನಾವು ಹಿಂಪಡೆಯಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಘ-ಪರಿವಾರದವರೇ ಇದ್ದಾರೆ. ಅದನ್ನು ಬದಲಾಯಿಸಬೇಕು. ಜಾತಿ ಗಣತಿ ವರದಿ ಜಾರಿ ಮಾಡಬೇಕು.
ಇವುಗಳನ್ನು ಅನುಷ್ಠಾನಕ್ಕೆ ತರದೇ ಇದ್ದರೆ ಮುಂದೆ ನಮಗೆ ಕಷ್ಟ ಆಗಲಿದೆ. ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳು ಇವು. ಕೃಷಿ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಆದಷ್ಟು ಬೇಗ ಈಡೇರಿಸಿದರೆ ಮಾತ್ರ ಪಕ್ಷಕ್ಕೆ ಒಳ್ಳೆಯದಾಗಲು ಸಾಧ್ಯ ಎಂದು ಎಚ್ಚರಿಸಿದರು. ಹರಿಪ್ರಸಾದ್ ಅವರ ಈ ಹೇಳಿಕೆ ಇದೀಗ ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ
Advertisement