BJP ಆಂತರಿಕ ಕಲಹ: ರಾಜ್ಯ ಉಸ್ತುವಾರಿ ಸಭೆಯಲ್ಲೂ ಪ್ರಸ್ತಾಪ, ಮಧ್ಯಪ್ರವೇಶಿಸುವಂತೆ ವರಿಷ್ಠರಿಗೆ ನಾಯಕರ ಮನವಿ

ಮಂಗಳವಾರ ಮಧ್ಯಾಹ್ನ ದೆಹಲಿಯಿಂದ ಆಗಮಿಸಿದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರ ನೇತೃತ್ವದಲ್ಲಿ ಪಕ್ಷ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ಸಭೆ ನಡೆಯಿತು.
ಬಿಜೆಪಿ ಸಭೆ
ಬಿಜೆಪಿ ಸಭೆ
Updated on

ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಆಂತರಿಕ ಕಲಹ ಹೆಚ್ಚಾಗುತ್ತಿದ್ದು, ರಾಜ್ಯ ಉಸ್ತುವಾರಿ ಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸುವ ನಾಯಕರು ಅಸಮಾಧಾನ ಹೊರಹಾಕಿದ್ದಾರೆಂದು ತಿಳಿದುಬಂದಿದೆ.

ಮಂಗಳವಾರ ಮಧ್ಯಾಹ್ನ ದೆಹಲಿಯಿಂದ ಆಗಮಿಸಿದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರ ನೇತೃತ್ವದಲ್ಲಿ ಪಕ್ಷ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ಸಭೆ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕರು ಮತ್ತು ಸಂಸದರು ಅಸಮಾಧಾನ ವ್ಯಕ್ತಪಡಿಸಿ, ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಬಿಕ್ಕಟ್ಟು ಬಗೆಹರಿಸುವಂತೆ ಒತ್ತಾಯಿಸಿದರು ಎಂದು ತಿಳಿದುಬಂದಿದೆ.

ಒಗ್ಗಟ್ಟಿನಿಂದ ಕೆಲಸ ಮಾಡಲು ಒತ್ತು ನೀಡುತ್ತಿದ್ದರೂ, ಕೆಲ ನಾಯಕರು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ, ಇದನ್ನು ಪರಿಹರಿಸಬೇಕಾಗಿದೆ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಖಡಕ್ ಎಚ್ಚರಿಕೆ ನೀಡಿದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಬಿದ್ದಿದೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇಲ್ಲವೇ? ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ವರಿಷ್ಠರು ಯಾಕೆ ಖಡಕ್ ಎಚ್ಚರಿಕೆ ನೀಡುತ್ತಿಲ್ಲ ಎಂದೂ ಶಾಸಕರು ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆಂದು ತಿಳಿದುಬಂದಿದೆ.

ಒಟ್ಟು 48 ಮಂದಿ ವಿಧಾನಸಭಾ ಸದಸ್ಯರು ಹಾಗೂ 16 ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಬಂಡಾಯ ಸಾರಿರುವ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅವರು ಸಭೆಗೆ ಗೈರು ಹಾಜರಾಗಿದ್ದು, ಎದ್ದು ಕಾಣುತ್ತಿತ್ತು. ಯತ್ನಾಳ್‌ ಬಣದ ಬಿ.ಪಿ.ಹರೀಶ್ ಆಗಮಿಸಿದ್ದರು.

ಇನ್ನುಳಿದಂತೆ ತಟಸ್ಥ ಬಣದ ವಿ.ಸುನೀಲ್ ಕುಮಾರ್, ಸಿ.ಸಿ.ಪಾಟೀಲ್, ಮಹೇಶ್ ಟೆಂಗಿನಕಾಯಿ, ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಶಿವರಾಮ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಮೊದಲಾದವರೂ ಗೈರಾಗಿದ್ದರು.

ಬಿಜೆಪಿ ಸಭೆ
BJP ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಪ್ರತಿ ಜಿಲ್ಲೆಯಿಂದ ಮೂವರ ಹೆಸರು ಶಿಫಾರಸಿಗೆ ಕೋರ್ ಕಮಿಟಿ ನಿರ್ಧಾರ!

ಶಾಸಕರಾದ ಸುರೇಶ್‌ಗೌಡ, ಆರಗ ಜ್ಞಾನೇಂದ್ರ, ಸಿದ್ದು ಸವದಿ, ಬಸವರಾಜ ಮತ್ತಿಮೂಡ, ಶೈಲೇಂದ್ರ ಬೆಲ್ದಾಳೆ, ಡಿ.ಎಸ್‌.ಅರುಣ್, ಪಿ.ಎಚ್‌.ಪೂಜಾರ್ ಸೇರಿ ಹಲವರು ಸಭೆಯಲ್ಲಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಇನ್ನು ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿರುವ ಯತ್ನಾಳ್‌, ರಮೇಶ್ ಜಾರಕಿಹೊಳಿ ಮತ್ತಿತರರ ಜತೆ ಮಾತುಕತೆ ನಡೆಸಿ ಭಿನ್ನಮತ ಬಗೆಹರಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿದರು ಎಂದು ವರದಿಗಳು ತಿಳಿಸಿವೆ.

ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯಗಳಿಂದ ಅನೇಕ ಅಸ್ತ್ರಗಳನ್ನು ನಮಗೆ ನೀಡುತ್ತಿದೆ. ಆದರೆ, ಅವುಗಳನ್ನು ಬಳಸಿಕೊಳ್ಳುವುದಕ್ಕೆ ಪ್ರಮುಖ ಪ್ರತಿಪಕ್ಷವಾಗಿ ಬಿಜೆಪಿಯಿಂದ ಸಾಧ್ಯವಾಗುತ್ತಿಲ್ಲ. ಬಣ ರಾಜಕೀಯವೇ ಹೈಲೈಟ್ ಆಗುತ್ತಿದೆ. ಪಕ್ಷದ ನಾಯಕರ ವಿರುದ್ಧ ನಮ್ಮವರೇ ಬಹಿರಂಗ ಹೇಳಿಕೆ ನೀಡಿದರೆ ನಾವು ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ಏನು ಉತ್ತರಿಸಬೇಕು ಎಂದು ಖಾರವಾಗಿ ಪ್ರಶ್ನಿಸಿದರು ಎನ್ನಲಾಗಿದೆ.

ಈ ವೇಳೆ ನಾಯಕರ ಮಾತಿಗೆ ಗರಂ ಆದ ಉಸ್ತುವಾರಿ ರಾಧಾ ಮೋಹನ್‌ ಅವರಿ, ಅವರಿವರ ಬಗ್ಗೆ ದೂರು ಹೇಳುವುದು ಬಿಟ್ಟು, ಮೊದಲು ಗುಂಪುಗಾರಿಕೆ ಬಿಡಿ. ರಾಜ್ಯದ ಎಲ್ಲಾ ಬೆಳವಣಿಗೆ ಬಗ್ಗೆ ಹೈಕಮಾಂಡ್‌ ಗಮನಿಸುತ್ತಿದೆ ಎಂದು ಚಾಟಿ ಬೀಸಿದರು ಎನ್ನಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಗುಲ್ಬರ್ಗ ಗ್ರಾಮಾಂತರ ಶಾಸಕ ಬಸವರಾಜ ಮಟ್ಟಿಮೂಡ ಅವರು, ವಿಜಯೇಂದ್ರ ಅವರ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ, ಪಕ್ಷದ ವಿರುದ್ಧ ಕೆಲಸ ಮಾಡುತ್ತಿರುವ ಬಿಜೆಪಿಯ ಕೆಲ ಮುಖಂಡರು ಹೈಕಮಾಂಡ್‌ನ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಗರವಾಲ್‌ಗೆ ಹೇಳಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆಂದು ಹೇಳಿದರು.

ಪಕ್ಷದ ಬಹುತೇಕ ಶಾಸಕರು ಮತ್ತು ಸಂಸದರು ಒಗ್ಗಟ್ಟಾಗಿದ್ದಾರೆ. ಅದೇ ಸಂದೇಶವನ್ನು ಪಕ್ಷದ ನಾಯಕರಿಗೆ ರವಾನಿಸಲಾಗಿದೆ. ಹಗರಣಗಳು ಸೇರಿದಂತೆ ರಾಜ್ಯ ಸರ್ಕಾರದ ಹಲವು ಸಮಸ್ಯೆಗಳತ್ತ ಧ್ವನಿ ಎತ್ತಲಾಗುತ್ತಿದೆ. ಆದರೆ ನಮ್ಮಲ್ಲಿನ ಸಹಕಾರದ ಕೊರತೆಯು ತಮ್ಮ ಉದ್ದೇಶವನ್ನು ತಡವಾಗುವಂತೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಪಕ್ಷ ಸಂಘಟನೆ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾಹಿತಿ ನೀಡಿದ್ದಾರೆ.

ಬಿಜೆಪಿ ಪಕ್ಷದ ನಿಯಮಗಳ ಪ್ರಕಾರ, ರಾಜ್ಯಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬಹುದು ಅಥವಾ ಅವಿರೋಧವಾಗಿ ಆಯ್ಕೆ ಮಾಡಬಹುದು. ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆಂದೂ ಇದೇ ವೇಳೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com