
ಬಳ್ಳಾರಿ: ಭಿನ್ನಾಭಿಪ್ರಾಯಗಳ ಬದಿಗೊತ್ತುವಂತೆ ಬಿಜೆಪಿ ವರಿಷ್ಠರು ಸೂಚನೆ ನೀಡಿದ ನಂತರವೂ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ನಡುವಿವ ಜಟಾಪಟಿ ಇನ್ನೂ ಮುಗಿದಿಲ್ಲ.
ಶ್ರೀರಾಮುಲು ಹಾಗೂ ಅವರ ಸಮುದಾಯಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಶ್ರೀರಾಮುಲು ಅವರ ಅಭಿಮಾನಿಗಳು ದೂರು ಗಾಲಿ ಜನಾರ್ಧನ ರೆಡ್ಡಿಯವರ ವಿರುದ್ಧ ದೂರು ದಾಖಲಿಸಿದ್ದಾರೆ.
ಎಸ್‌ಟಿ ಸಮುದಾಯದ ಮುಖಂಡ ವೆಂಕಟರಾಜ್ ಬಿ ಮಾತನಾಡಿ, 'ಶ್ರೀರಾಮುಲು ತಮ್ಮ ಮನೆಗೆ ಶಸ್ತ್ರಾಸ್ತ್ರಗಳೊಂದಿಗೆ ಬಂದು ತಮ್ಮನ್ನು ರಕ್ಷಿಸುವಂತೆ ಬೇಡಿಕೊಂಡರು ಎಂದು ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಶ್ರೀರಾಮುಲು ಅವರನ್ನು ಮನುಷ್ಯರನ್ನಾಗಿ ಮಾಡಿದ್ದು ಅವರೇ ಎಂದು ಹೇಳಿಕೊಂಡಿದ್ದಾರೆ, ಇದು ಎಸ್ಟಿ ಸಮುದಾಯದ ನಾಯಕನನ್ನು ರೆಡ್ಡಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ. ಶ್ರೀರಾಮುಲು ಅವರಿಗೆ ಜನಾರ್ಧನ ರೆಡ್ಡಿಯವರು ಅವಮಾನ ಮಾಡಿದ್ದು, ಈ ಸಂಬಂಧ ದೌರ್ಜನ್ಯ ಪ್ರಕರಣ ದಾಖಲಿಸಬೇಕೆಂದು ಬಳ್ಳಾರಿ ಎಸ್ಪಿಗೆ ಮನವಿ ಸಲ್ಲಿಸಿದ್ದೇವೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೇಳಿದರು.
ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಶ್ರೀರಾಮುಲು ಕೆಲಸ ಮಾಡಿಲ್ಲ ಎಂದು ಆರೋಪ ಮಾಡಲಾಗಿದೆ. ಅವರು ಬಿಜೆಪಿ ಅಭ್ಯರ್ಥಿಗಾಗಿ ಕೆಲಸ ಮಾಡಿದ್ದರು. ಆದರೆ, ಅಂತಿಮವಾಗಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದರು. ನಾವು ಶ್ರೀರಾಮುಲು ಜೊತೆ ನಿಲ್ಲುತ್ತೇವೆ. ಶ್ರೀರಾಮುಲು ಅವರಿಗೆ ಕಾರ್ಯಕರ್ತರು ಮತ್ತು ನಾಯಕರ ದೊಡ್ಡ ಬೆಂಬಲವಿದ್ದು. ಇದನ್ನು ಪರಿಗಣಿಸಿ ಬಿಜೆಪಿ ಅವರಿಗೆ ಉತ್ತಮ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಡುವೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಜನಾರ್ಧನ ರೆಡ್ಡಿಯವರು, ಸಿಬಿಐ ತನಿಖೆಯನ್ನೇ ಎದುರಿಸಿದ್ದೇನೆ. ಇನ್ನು ಶ್ರೀರಾಮುಲು ಬೆಂಬಲಿಗರು ನನ್ನ ವಿರುದ್ಧ ನೀಡಿರುವ ದೂರು ಯಾವ ಲೆಕ್ಕ. ನಾನು ಯಾವುದೋ ದೂರಿಗೆ ಜಗ್ಗುವವನಲ್ಲ, ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ.
ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಅವರ ನಡುವಿನ ಜಗಳ ಬಳ್ಳಾರಿ ಬಿಜೆಪಿಯನ್ನು ಒಡೆದ ಮನೆಯಾಗಿಸಿದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಹೀನಾಯ ಸೋಲುಗಳಿಂದಾಗಿ ಬಳ್ಳಾರಿ ಜಿಲ್ಲಾ ಬಿಜೆಪಿ ಸೊರಗಿತ್ತು. ಹೀಗಿರುವಾಗಲೇ ಅಕ್ಟೋಬರ್ 3ರಂದು ಜನಾರ್ದನ ರೆಡ್ಡಿ ಹಲವು ವರ್ಷಗಳ ಬಳಿಕ ಬಳ್ಳಾರಿ ಪ್ರವೇಶ ಮಾಡಿದ್ದರು. ರೆಡ್ಡಿ ಮತ್ತು ರಾಮುಲು ಅವರು ಒಂದಾಗಲಿದ್ದಾರೆ, ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ಅರಳಲಿದೆ ಎಂಬ ಆಶಾ ಭಾವ ಪಕ್ಷದಲ್ಲಿ ಮನೆ ಮಾಡಿತ್ತು. ವಿರೋಧ ಪಕ್ಷ ಕಾಂಗ್ರೆಸ್‌ಗೂ ಒಂದು ಎಚ್ಚರಿಕೆ ಕರೆಗಂಟೆ ಹೋಗಿತ್ತು.
ಆದರೆ, ಸಂಡೂರು ಉಪ ಚುನಾವಣೆಯ ಸೋಲು ಸದ್ಯ ಬಿಜೆಪಿಯ ಆಂತರಿಕ ಕಲಹವನ್ನು ಬಟಾಬಯಲು ಮಾಡಿದೆ. ಅರಳುವ ಮುನ್ನವೇ ಮುದುಡಿದ ಸೂತಕದ ಛಾಯೆ ಬಳ್ಳಾರಿ ಬಿಜೆಪಿಯಲ್ಲಿ ಮನೆ ಮಾಡಿದೆ. ಸಮಸ್ಯೆ ಈಗ ಮತ್ತಷ್ಟು ಉಲ್ಬಣವಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಶ್ರೀರಾಮುಲು ಕಾರಣ ಎಂಬ ಆರೋಪ, ರೆಡ್ಡಿ ಮತ್ತು ಶ್ರೀರಾಮುಲು ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ಕಂದಕ ಸೃಷ್ಟಿಸಿದಂತಾಗಿದೆ.
Advertisement