
ಮೈಸೂರು: ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ತಮಿಳುನಾಡಿನ ತಮ್ಮ ಮೈತ್ರಿ ಪಕ್ಷ ಡಿಎಂಕೆಯನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ. ನಾನು ಐದೇ ನಿಮಿಷದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಒಪ್ಪಿಗೆ ಕೊಡಿಸುತ್ತೇನೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಹಳೆಯ ಮಾತಿಗೆ ನಾನು ಈಗಲೂ ಬದ್ದ. ಕಾಂಗ್ರೆಸ್ ನವರಿಗೆ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಶಕ್ತಿ ಇಲ್ಲ. ಅವರನ್ನು ಧಿಕ್ಕರಿಸುವ ಶಕ್ತಿಯೂ ಇಲ್ಲ. ತಮಿಳುನಾಡು ಸರ್ಕಾರವನ್ನು ಧಿಕ್ಕರಿಸಿ ಮೇಕೆದಾಟು ಯೋಜನೆ ಮಾಡಿದರೆ ಅದು ಆಗುತ್ತದೆ. ಇಲ್ಲದಿದ್ದರೆ ಮೇಕೆದಾಟು ಯೋಜನೆ ಅನುಷ್ಠಾನ ಕಾಂಗ್ರೆಸ್ ನಿಂದ ಸಾಧ್ಯವಿಲ್ಲ ಎಂದು ಹೇಳಿದರು.
ತಮಿಳುನಾಡು ಸರ್ಕಾರವನ್ನು ಒಪ್ಪಿಸದೆ ಮೇಕೆದಾಟು ಯೋಜನೆಯ ಕಚೇರಿ ತೆರೆದರೆ ಏನು ಪ್ರಯೋಜನ? ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇವೆ ಎಂದು ಹೇಳಿದವರು ಕಾಂಗ್ರೆಸ್ನವರೇ ವಿನಃ ನಾನಲ್ಲ. ಯೋಜನೆ ಮಾಡುತ್ತೇವೆ ಎಂದು ಜನರಿಗೆ ಭರವಸೆ ನೀಡಿದವರು ಮಾಡಬೇಕು ತಾನೇ ಎಂದು ಪ್ರಶ್ನಿಸಿದರು.
ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆಯ ಮೂಲಕ 2023 ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು, ಸಿದ್ದರಾಮಯ್ಯ ಸರ್ಕಾರ ಎರಡು ವರ್ಷಗಳನ್ನು ವ್ಯರ್ಥ ಮಾಡಿದೆ. ಅವರು ತಮ್ಮ ಜವಾಬ್ದಾರಿಯನ್ನು ನನ್ನ ಮೇಲೆ ವರ್ಗಾಯಿಸಿದರೆ ಯೋಜನೆಯನ್ನು ಹೇಗೆ ಕಾರ್ಯಗತಗೊಳಿಸಲು ಸಾಧ್ಯ? ನನ್ನೊಬ್ಬನ ಮೇಲೆ ಕಾಂಗ್ರೆಸ್ ನವರಿಗೆ ಅತಿಯಾದ ಭಯ ಇದೆ. ಹೀಗಾಗಿ ಪದೇ ಪದೇ ಕಾಂಗ್ರೆಸ್ ಮುಖಂಡರು ನನ್ನ ಹೆಸರನ್ನು ಜಪಿಸುತ್ತಾರೆ. ಬಿಜೆಪಿ-ಜೆಡಿಎಸ್ ಜೊತೆಯಾದ ಮೇಲಂತೂ ಕಾಂಗ್ರೆಸ್ ಗೆ ನಿದ್ದೆ ಬರುತ್ತಿಲ್ಲ. ಹಾಗಾಗಿ ನನ್ನ ಮೇಲೆ ಪದೇ ಪದೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
2028ರಲ್ಲಿ ನಮ್ಮದೇ ಸರ್ಕಾರ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಮುಂದಿನದ್ದಲ್ಲ ಇನ್ನೂ ಇಪ್ಪತ್ತು ವರ್ಷವೂ ನಿಮ್ಮದೇ ಇರಲಿ. ಮೊದಲು ಹೇಳಿದ ಕೆಲಸ ಮಾಡಿ. ಇಪ್ಪತ್ತು ವರ್ಷ ನಮ್ಮದೇ ಸರ್ಕಾರ ಎಂದವರು ಏನೇನಾದ್ರು ಎಂಬುದು ನಮಗೆ ಗೊತ್ತಿದೆ. ಮುಂದೆ ಯಾರದ್ದು ಸರ್ಕಾರ ಎಂಬುದನ್ನು ಜನರು ತೀರ್ಮಾನ ಮಾಡ್ತಾರೆ. ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಗಲಾಟೆಗಳೇ ನಡೆಯುತ್ತಿವೆ. ಗಲಾಟೆಯಲ್ಲಿ ಮುಳುಗಿರುವ ಕಾಂಗ್ರೆಸ್ಸನ್ನು ಜನ ಹೇಗೆ ಒಪ್ಪುತ್ತಾರೆ? ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದರು.
ಆರ್‌ಎಸ್‌ಎಸ್ ಅನ್ನು ನಿಷೇಧಿಸುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಕುರಿತು ಮಾತನಾಡಿ, ಆರ್‌ಎಸ್‌ಎಸ್ ವಿಚಾರ ಇರಲಿ. ಮೊದಲು 40 ವರ್ಷದಿಂದ ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದೀರಾ ಎಂಬುದನ್ನು ಮೊದಲು ಹೇಳಿ. ಆರ್‌ಎಸ್‌ಎಸ್ ಬಂದ್ ಮಾಡುವುದಿರಲಿ, ಈಗ ಕಾಂಗ್ರೆಸ್ ಎಲ್ಲಾ ಕಡೆಯೂ ಬಂದ್ ಆಗುತ್ತಿದೆ. ಜನರೇ ಬಹುತೇಕ ಕಡೆ ಕಾಂಗ್ರೆಸ್ಸನ್ನು ಬ್ಯಾನ್ ಮಾಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲಿ. ಪ್ರಿಯಾಂಕ್ ಖರ್ಗೆ ಬಾಯಿ ಚಪಲಕ್ಕೆ ಮೂಲ ವಿಚಾರಗಳನ್ನು ಮರೆ ಮಾಚಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೇ ಎಂದರು.
ಸಚಿವ ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಬರಿ ಸಂಸದರ ಹಣವಲ್ಲ, ವಿಶೇಷ ಅನುದಾನಗಳನ್ನೂ ತಂದಿದ್ದೇನೆ. ಮಾಹಿತಿ ಇಲ್ಲದಿದ್ದರೆ ಮಾತನಾಡಬಾರದು. ನಾನು ದೇಶದ ಹಲವಾರು ಭಾಗಗಳಿಂದ ಎಷ್ಟು ಅನುದಾನ ತಂದಿದ್ದೇನೆ ಎಂಬುದನ್ನು ಮೊದಲು ಅವರು ತಿಳಿದುಕೊಳ್ಳಲಿ. ನಾನು ಸಂಸದರ ಅನುದಾನ ಅಲ್ಲದೆ ಸಿಎಸ್ ಆರ್ ಅನುದಾನವನ್ನೂ ತಂದಿದ್ದೇನೆ ಎಂಬುದು ಮಂಡ್ಯ ಜನತೆಗೆ ಗೊತ್ತಿದೆ. ಅವರು ಸಭೆಗಳಿಗೆ ಕರೆದಾಗ ನನಗೆ ಪೂರ್ವ ನಿಯೋಜಿತ ಸಭೆಗಳು ಇರುತ್ತವೆ. ಹಾಗಾಗಿ ನನಗೆ ಹೋಗಲು ಆಗಿಲ್ಲ ಅಷ್ಟೇ ಎಂದರು.
Advertisement