
ಬೆಳಗಾವಿ: ನಾಯಕತ್ವ ಬದಲಾವಣೆ ಗೊಂದಲ ವಿಚಾರ ದೂರಾಗುತ್ತಿದ್ದಂತೆಯೇ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತು ಬಿರುಗಾಳಿ ಶುರುವಾಗಿದೆ.
ಕೈ ಪಾಳಯದ ಹಲವಾರು ನಾಯಕರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಹೊಸ ಅಧ್ಯಕ್ಷರನ್ನು ನೇಮಿಸಬೇಕೆಂದು ಹೈಮಾಂಡ್'ನ್ನು ಒತ್ತಾಯಿಸುತ್ತಿದ್ದಾರೆ.
2020ರಿಂದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದ್ದು, ಇದೀಗ ಅಧ್ಯಕ್ಷರನ್ನು ಬದಲಿಸಬೇಕೆಂದು ರಾಜ್ಯದ ನಾಯಕರು ಪಟ್ಟು ಹಿಡಿದಿದ್ದಾರೆಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸಬೇಕೆಂದು ಹೇಳಿದರು.
ನಾವು ಇದನ್ನು ಹಲವು ಬಾರಿ ಹೇಳಿದ್ದೇವೆ. ಅದನ್ನು ಪುನರಾವರ್ತಿಸುವ ಅಗತ್ಯವಿಲ್ಲ. ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಇತರ ಕೆಲವು ಸಚಿವರೊಂದಿಗೆ ನಡೆಸಿದ ಭೇಟಿಯ ಕುರಿತು ಮಾತನಾಡಿ, ನಾನು ಈಗಾಗಲೇ ಸಭೆಯ ಬಗ್ಗೆ ಮಾತನಾಡಿದ್ದೇನೆ. ಊಟದ ಸಮಯದಲ್ಲಿ ಭೇಟಿಯಾಗಿದ್ದೆವು, ಆದರೆ, ಅದನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ. ನಾವು ಖರ್ಗೆ ಅವರನ್ನು ಮೊದಲೇ ಭೇಟಿಯಾಗಿದ್ದೇವೆ. ಕಾಲಕಾಲಕ್ಕೆ ಅವರನ್ನು ಭೇಟಿಯಾಗುತ್ತಿರುತ್ತೇವೆ. ಖರ್ಗೆ ಪಕ್ಷದ ಅಧ್ಯಕ್ಷರು, ಆದ್ದರಿಂದ ನಾವು ಅವರನ್ನು ಭೇಟಿಯಾಗುವುದು ಕಡ್ಡಾಯ ಎಂದು ತಿಳಿಸಿದರು.
ಕೆಪಿಸಿಸಿಯಲ್ಲಿ ಸಂಭವನೀಯ ಬದಲಾವಣೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹೈಕಮಾಂಡ್ ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಏತನ್ಮಧ್ಯೆ, ಡಿಕೆಶಿ ಬಣ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತೆರವುಗೊಳಿಸುವಂತೆ ಕೇಳುವ ಮೊದಲು ಮುಖ್ಯಮಂತ್ರಿ ಸ್ಥಾನವನ್ನು ಮೊದಲು ಉಪಮುಖ್ಯಮಂತ್ರಿ ಅವರಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈಗಾಗಲೇ ಡಿಕೆಶಿ ಬಣ ಈ ಪ್ರಸ್ತಾವನೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಇಟ್ಟಿದ್ದು, ಶಿವಕುಮಾರ್ ಅವರಿಗೆ ಖರ್ಗೆ ಅವರ ಬೆಂಬಲವಿದೆ ಎಂದು ಅವರು ನಂಬಿದ್ದಾರೆಂದು ತಿಳಿದುಬಂದಿದೆ.
ಈ ಮಧ್ಯೆ, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ಮಾತನಾಡಿ, ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಪೂರ್ಣಗೊಳಿಸುತ್ತಾರೆಂದು ಹೇಳಿದ್ದಾರೆ.
ಮುಖ್ಯಮಂತ್ರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಈ ವಿಷಯದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ನಾಯಕತ್ವ ಬದಲಾವಣೆಯ ಬಗ್ಗೆ ಏಕೆ ಕೇಳುತ್ತಿದ್ದೀರಿ? ಎಂದು ಪ್ರಶ್ನಿಸಿದರು.
2028 ರಲ್ಲಿ ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ನೀಡಿರುವ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, "ಎಲ್ಲರೂ ಪಕ್ಷದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಜಲಾಶಯ (ಕಾಂಗ್ರೆಸ್) ನಿರ್ಮಿಸಲು ಬಂಡೆ, ಮಣ್ಣು ಮತ್ತು ಇತರ ಕಚ್ಚಾ ವಸ್ತುಗಳನ್ನು ಸೇರಿಸಿದ್ದೇವೆ. ಶಿವಕುಮಾರ್ ಮಾತ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದನ್ನು ನಾವು ಒಪ್ಪುವುದಿಲ್ಲ. ಹಿಂದೆ ಕೆಪಿಸಿಸಿ ಮುಖ್ಯಸ್ಥರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್ ಮತ್ತು ಆರ್.ವಿ. ದೇಶಪಾಂಡೆ ಅವರ ಕೊಡುಗೆಗಳನ್ನು ಇದೇ ವೇಳೆ ಮಹದೇವಪ್ಪ ಅವರು ಸ್ಮರಿಸಿದರು.
ಏತನ್ಮಧ್ಯೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ನಿರಾಕರಿಸಿದರು.
ಸ್ಥಿರ ಸರ್ಕಾರ ನೀಡುವುದು ನಮ್ಮ ಜವಾಬ್ದಾರಿ. ಸರ್ಕಾರ ಪಕ್ಷದಿಂದ ಬಂದಿದೆ, ಸಿದ್ದರಾಮಯ್ಯ ಆ ಕುರ್ಚಿಯಲ್ಲಿ ಇರುವವರೆಗೂ ಸಿಎಂ ಆಗಿರುತ್ತಾರೆ, ಯಾವುದೇ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಶಿವಕುಮಾರ್ ಅವರಿಗೆ ಶಾಸಕರ ಬೆಂಬಲದ ಕೊರತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಶಾಸಕರ ಬೆಂಬಲ ಪಕ್ಷಕ್ಕೆ ಎಂದು ಹೇಳಿದರು.
ಶಾಸಕರು ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಆಡಳಿತವನ್ನು ಬಯಸುತ್ತಾರೆ, ಸಿದ್ದರಾಮಯ್ಯ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ. ಸಚಿವ ಸಂಪುಟ ಪುನಾರಚನೆ ಶೀಘ್ರದಲ್ಲೇ ಆಗಬಹುದು ಎಂದು ಅವರು ತಿಳಿಸಿದರು.
'ಸೆಪ್ಟೆಂಬರ್ ಕ್ರಾಂತಿ' ಕುರಿತ ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಮತ್ತು ಪಕ್ಷದಲ್ಲಿ ಏನು ಬೇಕಾದರೂ ಆಗಬಹುದು, ಅದು ಸಾಧ್ಯವಿದೆ ಎಂದರು.
ಈ ನಡುವೆ ಸಿದ್ದರಾಮಯ್ಯ ಬಣ, ಶಿವಕುಮಾರ್ ಅವರ ಸಹೋದರ ಮತ್ತು ಬಮುಲ್ ಮುಖ್ಯಸ್ಥ ಡಿಕೆ ಸುರೇಶ್ ಅವರನ್ನು ಎದುರಿಸಲು ಕೆಎಂಎಫ್ ಮುಖ್ಯಸ್ಥ ಹುದ್ದೆಗೆ ಮಾಲೂರು ಶಾಸಕ ಮತ್ತು ಕೋಮುಲ್ ಮುಖ್ಯಸ್ಥ ನಂಜೇಗೌಡ ಅವರನ್ನು ಬೆಂಬಲಿಸಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ. ಹಾಲಿ ಅಧ್ಯಕ್ಷ ಭೀಮಾ ನಾಯಕ್ ಅವರು, ಸಿದ್ದು ಬೆಂಬಲಿಗರಾಗಿದ್ದು, ಹುದ್ದೆಗೆ ಪ್ರಬಲ ಸ್ಪರ್ಧಿಯಾಗಲಿದ್ದೇನೆಂದು ಅವರು ಹೇಳಿದ್ದಾರೆ.
Advertisement