ರಾಜ್ಯದಲ್ಲಿ ಸುರ್ಜೇವಾಲಾ ಸರಣಿ ಸಭೆ: ಶಾಸಕರ ಬಳಿಕ ಸಚಿವರೊಂದಿಗೆ ಒನ್-ಟು-ಒನ್ ಮೀಟಿಂಗ್; ನವೆಂಬರ್‌ನಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ..?

ಸುರ್ಜೇವಾಲಾ ಅವರು ಸೋಮವಾರ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಮ್ ಖಾನ್ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
Randeep Singh Surjewala
ರಣದೀಪ್ ಸಿಂಗ್ ಸುರ್ಜೇವಾಲಾ
Updated on

ಬೆಂಗಳೂರು: ರಾಜ್ಯದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸರಣಿ ಸಭೆಗಳನ್ನು ನಡೆಸುತ್ತಿದ್ದು, ಶಾಸಕರ ದೂರುಗಳನ್ನು ಆಲಿಸಿದ ಬಳಿಕ ಇದೀಗ ಸಚಿವರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ.

ಈ ಸಭೆಗಳು ನವೆಂಬರ್ ನಂತರ ನಡೆಯಲಿರುವ ಸಂಭಾವ್ಯ ಸಚಿವ ಸಂಪುಟ ಪುನರಾಚನೆಗೆ ಮುಂಚಿತವಾಗಿ ನಡೆಸಲಾಗುತ್ತಿರುವ ಸಚಿವರ ಕಾರ್ಯಕ್ಷಮತೆಗಳ ಮೌಲ್ಯಮಾಪನ ಎಂದು ಹೇಳಲಾಗುತ್ತಿದೆ.

ಸುರ್ಜೇವಾಲಾ ಅವರು ಸೋಮವಾರ ಸಿದ್ದರಾಮಯ್ಯ ಅವರ ಆಪ್ತರು ಎಂದು ಪರಿಗಣಿಸಲಾದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಮ್ ಖಾನ್ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಸುರ್ಜೇವಾಲಾ ಅವರು ಮೊದಲು ಶಾಸಕರೊಂದಿಗೆ ಸಭೆ ನಡೆಸಿದ್ದು, ಸಿದ್ದು ಆಪ್ತರಲ್ಲಿ ಅಸಮಾಧಾನ ತರಿಸಿತ್ತು. ಏಕೆಂದರೆ, ಡಿ.ಕೆ.ಶಿವಕುಮಾರ್ ಪರವಿದ್ದ ಶಾಸಕರು ಮುಖ್ಯಮಂತ್ರಿ ಬದಲಾವಣೆಯನ್ನು ಬಯಸಿದ್ದರು. ಹೀಗಾಗಿಯೇ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ 5 ವರ್ಷವೂ ನಾನೇ ಸಿಎಂ ಎಂದು ಪ್ರತಿಪಾದಿಸಿದ್ದರು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸುರ್ಜೇವಾಲಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭೈರತಿ ಸುರೇಶ್ ಅವರು, "ರಾಜ್ಯ ಉಸ್ತುವಾರಿ ಸಚಿವರು ನಮ್ಮ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಇಲ್ಲಿಗೆ ಬಂದಿಲ್ಲ, ನಾವು ಜಾರಿಗೆ ತಂದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಲು ಮತ್ತು ನಮ್ಮನ್ನು ಪ್ರಶಂಸಿಸಲು ಬಂದಿದ್ದಾರೆ. ಶಾಸಕರು ನನ್ನ ವಿರುದ್ಧ ಒಂದೇ ಒಂದು ದೂರನ್ನೂ ನೀಡಿಲ್ಲ ಎಂದು ಹೇಳಿದರು.

Randeep Singh Surjewala
ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಜುಲೈ 16ಕ್ಕೆ ಫೈನಲ್; ಐದೂ ವರ್ಷ ನಾನೇ ಸಿಎಂ: ಸಿದ್ದರಾಮಯ್ಯ; Video

ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾತನಾಡಿ, "ಸುರ್ಜೇವಾಲ ಅವರು ನನ್ನ ಕೆಲಸದಿಂದ ಪ್ರಭಾವಿತರಾಗಿದ್ದು, ನಾನು ಪ್ರತಿಫಲಕ್ಕೆ ಅರ್ಹನಾಗಿದ್ದೇನೆಂದು ಹೇಳಿದ್ದಾರೆಂದು ತಿಳಿಸಿದರು.

ವಸತಿ ಮಂಜೂರಾತಿಯಲ್ಲಿ ಲಂಚದ ಆರೋಪ ಕುರಿತು ಸುರ್ಜೇವಾಲಾ ಅವರಿಗೆ ವಿವರಿಸಲಾಗಿದೆ. ಈ ಆರೋಪ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧವೇ ಹೊರತು ನನ್ನ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ್ದೇನೆಂದು ಹೇಳಿದರು.

ರಹೀಮ್ ಖಾನ್ ಅವರು ಮಾತನಾಡಿ, ಶಾಸಕರಿಂದ ಸುರ್ಜೇವಾಲ ಅವರು ಸ್ವತಃ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಶಾಸಕರ ಸಮಸ್ಯೆಗಳನ್ನು ಪರಿಹರಿಸುವಂತೆ ನನಗೆ ಸೂಚನೆ ನೀಡಿದ್ದಾರೆಂದು ತಿಳಿಸಿದ್ದಾರೆ.

ವಿಜಯನಗರ ಶಾಸಕ ಎಚ್.ಆರ್. ಗವಿಯಪ್ಪ ಮತ್ತು ಕಲ್ಯಾಣ ಕರ್ನಾಟಕದ ಇತರ ನಾಯಕರು ಅನುದಾನದಲ್ಲಿನ ಅಸಮಾನತೆಯ ಬಗ್ಗೆ ದೂರು ನೀಡಿದ್ದರು.

ಮಾತುಕತೆ ವೇಳೆ ಸುರ್ಜೇವಾಲ ಅವರು ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಪಿ) ಅಧ್ಯಕ್ಷ ಮತ್ತು ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರಿಗೆ ಕರೆ ಮಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಸೂಚಿಸಿದ್ದು, ಸಚಿವರು ಸಹಕಾರ ನೀಡುತ್ತಿಲ್ಲ ಎಂಬ ಶಿವಮೊಗ್ಗ ಶಾಸಕರು ಮಧು ಬಂಗಾರಪ್ಪ ವಿರುದ್ಧ ನೀಡಿರುವ ದೂರಿನ ಬಗ್ಗೆಯೂ ಸುರ್ಜೇವಾಲಾ ಅವರು ಚರ್ಚಿಸಿದ್ದಾರೆಂದು ಮೂಲಗಳು ತಿಳಿಸಿವೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com