
ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿಯಿರುವಂತೆಯೇ ಬೆಂಗಳೂರಿನಲ್ಲಿ ನಡೆದ ಎಐಸಿಸಿ ಒಬಿಸಿ ಸಲಹಾ ಮಂಡಳಿ ಸಭೆ ಚುನಾವಣಾ ಗಿಮಿಕ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಅಭ್ಯುದಯ, ಅಭಿವೃದ್ಧಿ ಹಿನ್ನೆಲೆಯಲ್ಲಿ ಸಭೆ ನಡೆದಿಲ್ಲ. ಸ್ವಾತಂತ್ರ್ಯಾನಂತರ ದೇಶ ಮತ್ತು ರಾಜ್ಯವನ್ನು ಬಹುಕಾಲ ಆಳಿದ ಕಾಂಗ್ರೆಸ್ ಈ ಸಮುದಾಯಗಳ ಹಿನ್ನಡೆಗೆ ಹೊಣೆ ಹೊರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಗಳ ಉನ್ನತಿ ಅಥವಾ ಅಭಿವೃದ್ಧಿಯ ಈ ಸಭೆಯ ಅಜೆಂಡಾ ಅಲ್ಲ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ಹೇಗೆ ಎಂಬುದು ನಿಜವಾದ ಅಜೆಂಡಾವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 55-60 ವರ್ಷಗಳಿಂದ ರಾಜ್ಯ ಹಾಗೂ ದೇಶ ಎರಡರಲ್ಲೂ ಆಡಳಿತ ನಡೆಸಿರುವ ಪಕ್ಷ ಕಾಂಗ್ರೆಸ್ ಆಗಿದೆ. ಈ ಸಮುದಾಯಗಳ ಅಭಿವೃದ್ಧಿ ಮ್ತು ಸಾಮಾಜಿಕ ನ್ಯಾಯ ದೊರೆಯದಿದ್ದರೆ ಯಾರು ಹೊಣೆ ಹೊರಬೇಕು? ಎಂದು ಪ್ರಶ್ನಿಸಿದರು. ದೇಶದಲ್ಲಿ ಸುಮಾರು 55 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಇದರ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.
ಬಿಹಾರ ಚುನಾವಣೆ ಸನ್ನಿಹದಲ್ಲಿರುವಂತೆಯೇ ಎಐಸಿಸಿಯ ಒಬಿಸಿ ಸಮಿತಿ ಸಭೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಭೆಗೆ ಯಾವುದೇ ಪ್ರಾಮುಖ್ಯತೆ, ಪ್ರಸ್ತುತತೆ ಇಲ್ಲ. ಇದು ಕೇವಲ ರಾಜಕೀಯ ಗಿಮಿಕ್ ಆಗಿದೆ. ಮುಂಬರುವ ಬಿಹಾರ ಚುನಾವಣೆಗೆ ಇದೊಂದು ಚುನಾವಣಾ ಗಿಮಿಕ್ ಆಗಿದೆ ಎಂದು ಅವರು ಹೇಳಿದರು.
Advertisement