
ಕಲಬುರಗಿ: ದಲಿತ ಮುಖ್ಯಮಂತ್ರಿ ಪ್ರಸ್ತಾವನೆಗೆ ಸಚಿವ ಸತೀಶ ಜಾರಕಿಹೊಳಿ ಅವರು ಭಾನುವಾರ ಫುಲ್‌ಸ್ಟಾಪ್ ಇಟ್ಟಿದ್ದು, 2028ರವರೆಗೆ ಈ ಕುರಿತ ಚರ್ಚೆಗಳು ಬೇಡ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ದಲಿತ ಸಿಎಂ ಕೂಗು ಕೇಳಿಬಂದಿಲ್ಲ. ಅದಕ್ಕೆ ಸಂಪೂರ್ಣ ಅಲ್ಪವಿರಾಮ ಹಾಕಲಾಗಿದೆ. ಮುಂಬರುವ 2028ರ ವಿಧಾನಸಭೆ ಚುನಾವಣೆಯ ವೇಳೆಗೆ ಅದರ ಬಗ್ಗೆ ಗಂಭೀರವಾಗಿ ಚರ್ಚೆ ಮಾಡೋಣ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸುತ್ತಿಲ್ಲ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿ, ವಿರೋಧ ಪಕ್ಷಗಳು ಕಳೆದ ಎರಡು ವರ್ಷಗಳಿಂದ ಈ ಆರೋಪವನ್ನು ಮಾಡುತ್ತಿವೆ. ಇನ್ನೂ ಮೂರು ವರ್ಷಗಳ ಕಾಲ ಅದನ್ನು ಮುಂದುವರಿಸುತ್ತವೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಸಂತೋಷವಾಗಿದ್ದಾರೆ. ಸರ್ಕಾರವು ಹಲವಾರು ಅಭಿವೃದ್ಧಿ ಕಾರ್ಯಗಳನ್ನೂ ಕೂಡ ಜಾರಿಗೊಳಿಸುತ್ತಿದೆ ಎಂದು ಸಮರ್ಥಿಸಿಕೊಂಡರು.
ಬೊಮ್ಮಾಯಿ ಅವಧಿಯಲ್ಲಿ ಸರ್ಕಾರಿ ಇಲಾಖೆಗಳಿಗೆ ಅನುದಾನ ಇರಲಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲ ಇಲಾಖೆಗಳಿಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರಕ್ಕೆ ನಾವು 2 ಲಕ್ಷ ಕೋಟಿ ಜಿಎಸ್‌ಟಿ ಹಣ ಕೊಡುತ್ತೇವೆ, ಹೀಗಾಗಿ ಅದರ ಅರ್ಧ ಹಣವಾದರೂ ಕೇಂದ್ರ ಸರ್ಕಾರ ನಮಗೆ ಕೊಡಬೇಕು. ಸದ್ಯ 36 ಸಾವಿರ ಕೋಟಿ ಜಿಎಸ್‌ಟಿ ಹಣ ಮಾತ್ರ ನಮ್ಮಗೆ ಕೊಟ್ಟಿದ್ದಾರೆ. ನಮ್ಮ ತೆರಿಗೆ ಹಣವನ್ನ ಯಮುನಾ, ಗಂಗಾ ಹೈವೆ ಎಕ್ಸ್ ಪ್ರೆಸ್‌ಗೆ ಬಳಕೆ ಮಾಡುತ್ತಿದ್ದಾರೆ. ನಮ್ಮ ತೆರಿಗೆ ಹಣದಿಂದ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ರಸ್ತೆ ಆಗುತ್ತಿವೆ ಎಂದು ಆಕ್ಷೇಪ ಹೊರಹಾಕಿದರು.
ಸೆಪ್ಟೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅವರ ಪಕ್ಷ ಬೇರೆ ನಮ್ಮ ಪಕ್ಷ ಬೇರೆ ಅವರ ಹೇಳಿಕೆಗೆ ನಾನೇಕೆ ಉತ್ತರಿಸಬೇಕು? ಎಂದರು.
ಬೆಂಗಳೂರು ಕಾಲ್ತುಳಿತಕ್ಕೆ ಸಿಎಂ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾರಣ ಎಂಬ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪ ಕುರಿತು ಮಾತನಾಡಿ, ಆರೋಪ "ಬಾಲಿಶ"ತನದ್ದು ಎಂದರು.
ಈ ಘಟನೆ ತೀವ್ರ ನೋವು ತಂದಿದೆ. ಘಟನೆ ಸಂಭವಿಸಬಾರದಿತ್ತು. ಪ್ರಕರಣ ಸಂಬಂಧ ನ್ಯಾಯಾಂಗ ಮತ್ತು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ, ಯಾರು ಹೊಣೆ ಎಂದು ತಿಳಿಯಲು ವರದಿಗಾಗಿ ನಾವು ಕಾಯಬೇಕು ಎಂದರು.
ಉತ್ತರ ಪ್ರದೇಶದಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿವೆ ಮತ್ತು ಅಹಮದಾಬಾದ್‌ನಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ಆ ಘಟನೆಗಳಿಗೆ ನರೇಂದ್ರ ಮೋದಿಯವರ ರಾಜೀನಾಮೆಗೆ ಯಾರಾದರೂ ಒತ್ತಾಯಿಸಿದ್ದಾರೆಯೇ? ಇಂತಹ ದುರಂತಗಳಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.
Advertisement