
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸೋಮವಾರ ಪ್ರತಿಭಟನೆ ನಡೆಸಿದವು.
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಇದರ ಬೆನ್ನಲ್ಲೇ ಪ್ರತಿಪಕ್ಷಗಳ ನಾಯಕರು ಶಾಸಕರ ಭವನದಿಂದ ವಿಧಾನಸೌಧಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ, ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ, ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಶಾಸಕರ ಭವನದಿಂದ ವಿಧಾನಸೌಧಕ್ಕೆ ಮೆರವಣಿಗೆ ನಡೆಸಿದರು.
ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ವಿವಿಧ ನೇಮಕಾತಿಗಳಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ ನಾಯಕರು, ಸಿದ್ದರಾಮಯ್ಯ ಸರ್ಕಾರವು "ನೀಚ ರಾಜಕಾರಣದಲ್ಲಿ ತೊಡಗಿದೆ" ಎಂದು ಕಿಡಿಕಾರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಂವಿಧಾನವು ರಾಜ್ಯಪಾಲರಿಗೆ ವಿಶೇಷ ಅಧಿಕಾರಗಳನ್ನು ನೀಡಿದೆ. ಆದರೆ, ಸರ್ಕಾರ ಆ ಅಧಿಕಾರವನ್ನು ಕಸಿದುಕೊಳ್ಳುವ ಮೂಲಕ "ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಾನೂನುಗಳಿಗೆ ಗರಿಷ್ಠ ತಿದ್ದುಪಡಿಗಳನ್ನು ಮಾಡುವ ಮೂಲಕ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಸಂವಿಧಾನವನ್ನು ಅವಮಾನಿಸಿದೆ. ಇದೀಗ ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ವಿವಿಧ ನೇಮಕಾತಿಗಳಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಆದರೆ, ಈ ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ, ಮುಂದೆ ಏನನ್ನಾದರೂ ಮಾಡಲು ಯಾವ ದೂರದೃಷ್ಟಿಯೂ ಹೊಂದಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ. ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸಿ, ಅವರ ದಾರಿ ತಪ್ಪಿಸಿದ್ದಲ್ಲದೆ ನಾಡಿನ ಜನರ ದಿಕ್ಕನ್ನೂ ತಪ್ಪಿಸಿದೆ. ರಾಜ್ಯಪಾಲರ ಭಾಷಣ ಕೇಳಿದರೆ ಈ ಸರ್ಕಾರಕ್ಕೆ ಯಾವ ಗೊತ್ತು ಗುರಿಯಿಲ್ಲ ಎಂಬುದಂತು ಸ್ಪಷ್ಟ.
ಕನ್ನಡಿಗರನ್ನು ಸಾಲದ ಪ್ರಪಾತಕ್ಕೆ ತಳ್ಳಿದ್ದರ ಬಗ್ಗೆ ಇಂದಿನ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವೇ ಇಲ್ಲ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿರುವುದೇ ದೊಡ್ಡ ಸಾಧನೆಯಾಗಿದೆ. ಯಾವುದೇ ಸರ್ಕಾರಕ್ಕೆ ಪ್ರಮುಖವಾಗಿ ಎರಡು ಆದ್ಯತೆಗಳಿರುತ್ತವೆ. ಒಂದು ಜನಕಲ್ಯಾಣ ಮತ್ತೊಂದು ಅಭಿವೃದ್ಧಿ. ಆದರೆ, ಕಾಂಗ್ರೆಸ್ ಸರ್ಕಾರ ಇವೆರಡರ ನಡುವೆ ಸಮತೋಲನ ಸಾಧಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಒಟ್ಟಿನಲ್ಲಿ ನಾನು ನನ್ನ ರಾಜಕೀಯ ಜೀವನದಲ್ಲೇ ಇಷ್ಟೊಂದು ನಿಸ್ಸಾರವಾದ ರಾಜ್ಯಪಾಲರ ಭಾಷಣವನ್ನು ಎಂದೂ ಕೇಳಿರಲಿಲ್ಲ. ಏನನ್ನೂ ಮಾಡದ, ಮಾಡಲಾಗದ ಸರ್ಕಾರವನ್ನು ಆರಿಸಿ ಕಳುಹಿಸಿದ್ದು ಈ ನಾಡಿನ ದೌರ್ಭಾಗ್ಯ ಎಂಬುದು ರಾಜ್ಯಪಾಲರ ಭಾಷಣದಿಂದ ರಾಜ್ಯದ ಜನರಿಗೆ ಇಂದು ಮನವರಿಕೆಯಾಗಿದೆ ಎಂದು ಕಿಡಿಕಾರಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ನೇಮಕ ಸಂಬಂಧ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ರದ್ದುಪಡಿಸಿ, ಮುಖ್ಯಮಂತ್ರಿಗೆ ನೀಡುವ ಉದ್ದೇಶ ಹೊಂದಿರುವ ‘ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ–2024’ಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಡೆದ ಅಧಿವೇಶನದ ವೇಳೆ ವಿಪಕ್ಷಗಳು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ, ಸದನದಿಂದ ಹೊರ ನಡೆದಿದ್ದು. ಇದರ ನಡುವೆಯೂ ಸರ್ಕಾರ ತಿದ್ದುಪಡಿಯನ್ನು ಅಂಗೀಕರಿಸಿತ್ತು. ಬಳಿಕ ತಿದ್ದುಪಡಿ ಮಸೂದೆ ರಾಜ್ಯಪಾಲರ ಅಂಗಳ ತಲುಪಿತ್ತು. ಆದರೆ, ಹೆಚ್ಚಿನ ಸ್ಪಷ್ಟತೆ ಕೋರಿ ರಾಜ್ಯಪಾಲರು ಮಸೂದೆಯನ್ನು ಹಿಂದಿರುಗಿಸಿದ್ದರು.
Advertisement