
ಬೆಂಗಳೂರು: ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನವೇ ಪ್ರತಿಭಟನೆಗೆ ಪ್ರತಿಪಕ್ಷ ಬಿಜೆಪಿ ಸಜ್ಜಾಗಿದೆ. ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಕಾಂಗ್ರೆಸ್ ಸರ್ಕಾರದ ಕ್ರಮದ ವಿರುದ್ಧ ಶಾಸಕರ ಭವನದಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಲು ಯೋಜಿಸಿದೆ.
ವಿಧಾನಸೌಧದಲ್ಲಿ ಇಂದು ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಆರಂಭವಾಗುವ ಬಜೆಟ್ ಅಧಿವೇಶನ, ಮಾರ್ಚ್ 21 ರಂದು ಕೊನೆಗೊಳ್ಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7 ರಂದು ತಮ್ಮ 16 ನೇ ಬಜೆಟ್ ಮಂಡಿಸಲಿದ್ದಾರೆ. ಅದೇ ದಿನ, ಕೇಸರಿ ಪಕ್ಷವು ರಾಜ್ಯ ಸರ್ಕಾರದ "ಅಧಿಕ ಸಾಲಗಳ" ವಿರುದ್ಧ ಮತ್ತೊಂದು ಪ್ರತಿಭಟನಾ ಮೆರಣಿಗೆ ನಡೆಸಲು ಯೋಜಿಸಿದೆ.
2025-26ನೇ ಹಣಕಾಸು ವರ್ಷದಲ್ಲಿ ಸಿದ್ದರಾಮಯ್ಯನವರ ಬಜೆಟ್ 4 ಲಕ್ಷ ಕೋಟಿ ರೂಪಾಯಿಗಳನ್ನು ಮೀರುವ ಸಾಧ್ಯತೆಯಿದೆ ಎಂದು ಸಿಎಂ ಕಚೇರಿಯ ಮೂಲಗಳು ತಿಳಿಸಿವೆ. ಕಳೆದ ಬಾರಿ 3.71 ಲಕ್ಷ ಬಜೆಟ್ ಮಂಡಿಸಲಾಗಿತ್ತು.
ಆಂತರಿಕ ಭಿನ್ನಾಭಿಪ್ರಾಯದ ನಡುವೆಯೂ ಬಿಜೆಪಿ ತನ್ನ ಮೈತ್ರಿಕೂಟದ ಪಾಲುದಾರ ಜೆಡಿ(ಎಸ್) ಜೊತೆಗೂಡಿ ಬೆಂಗಳೂರು ಕೇಂದ್ರಿತ ಸಮಸ್ಯೆಗಳಾದ ಸುರಂಗ ರಸ್ತೆ ಯೋಜನೆ ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಒಗ್ಗಟ್ಟು ಪ್ರದರ್ಶಿಸಲು ನಿರ್ಧರಿಸಿದೆ.
Advertisement