
ಬೆಂಗಳೂರು: ಕನ್ನಡ ಚಿತ್ರರಂಗದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಅವರ 'ನಟ್ಟು ಬೋಲ್ಟ್ ಟೈಟ್' ಹೇಳಿಕೆ ಇಂದು ವಿಧಾನಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ವಿಪಕ್ಷ ನಾಯಕ ಆರ್ ಅಶೋಕ್ ಅವರು ಈ ವಿಷಯ ಪ್ರಸ್ತಾಪಿಸಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕನ್ನಡ ಚಿತ್ರರಂಗದ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ‘ನಟ್ ಬೋಲ್ಟ್ ಟೈಟ್’ ಹೇಳಿಕೆ ಸಿನಿಮಾರಂಗ, ರಾಜಕೀಯ ವಲಯದ ಜೊತೆ ಸಾರ್ವಜನಿಕ ವಲಯದಲ್ಲೂ ಚರ್ಚೆ ಜೋರಾಗಿದ್ದು, ಇದೀಗ ವಿಧಾನಸಭೆ ಅಧಿವೇಶನದಲ್ಲೂ ಡಿಕೆಶಿ ಹೇಳಿಕೆ ಬಗ್ಗೆ ಚರ್ಚೆಯಾಗಿದೆ.
ಡಿಕೆಶಿ ಹೇಳಿಕೆ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಇಂದು ಸದನದಲ್ಲಿ ವಿಷಯ ಪ್ರಸ್ತಾಪಿಸಿ, 'ಸುದೀಪ್ ಮತ್ತಿತರಿಗೆ ಡಿಕೆಶಿ ನಟ್ ಬೋಲ್ಟ್ ಟೈಟ್ ಮಾಡ್ತೀನಿ ಅಂತಾರೆ. ನಾವೇನು ಕಲಾವಿದರಿಗೆ ದುಡ್ಡು ಕೊಡ್ತಿದೀವಾ ಹೀಗೆಲ್ಲ ಮಾಡೋಕೆ ಅಂತ ಕಿಡಿಕಾರಿದರು. 'ನಾನು ಮಂತ್ರಿ ಆಗಿದ್ದಾಗಲೂ ಚಲನ ಚಿತ್ರೋತ್ಸವಕ್ಕೆ ನಟರು ಬಂದಿರಲಿಲ್ಲ. ಅಷ್ಟಕ್ಕೇ ಸುದೀಪ್ ಮತ್ತಿತರಿಗೆ ಡಿಕೆಶಿ ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಅಂತಾರೆ. ನಾವೇನು ಕಲಾವಿದರಿಗೆ ದುಡ್ಡು ಕೊಡ್ತಿದೀವಾ ಅಂತ ಆಕ್ಷೇಪಿಸಿದರು.
ಈ ವೇಳೆ ಅಶೋಕ್ ಮಾತಿಗೆ ರವಿ ಗಣಿಗ ಸೇರಿದಂತೆ ಮತ್ತಿತರ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ನಟ್ಟು ಬೋಲ್ಟು ಟೈಟ್ ಮಾಡದೇ ಇನ್ನೇನು ಮಾಡಬೇಕು? ನೆಲ ಜಲ ಭಾಷೆ ಕಾರ್ಯಕ್ರಮಕ್ಕೆ ಬರಲ್ಲ ಅಂದ್ರೆ ಇನ್ನೇನು ಮಾಡಬೇಕು ಎಂದು ಡಿಕೆ ಶಿವಕುಮಾರ್ ಅವರನ್ನು ರವಿ ಗಣಿಗ ಸಮರ್ಥಿಸಿಕೊಂಡರು.
ಹೆದರಿಸೋದು ಸರ್ಕಾರದ ಕೆಲಸನಾ?
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಶಾಸಕ ಅಶ್ವತ್ಥ್ ನಾರಾಯಣ, ಹೆದರಿಸಿ ಬೆದರಿಸೋದು ಯಾಕ್ರೀ..? ಈ ರೀತಿ ನೇರ ಹೆದರಿಸೋದು ಸರ್ಕಾರದ ಕೆಲಸನಾ? ಇದು ಸರ್ಕಾರದ ನಡವಳಿಕೆನಾ?. ನೀವು ದುಡ್ಡು ಕೊಟ್ಟು ಜನರನ್ನ ಕರೆದುಕೊಂಡು ಬರಬೇಕು. ಕಲಾವಿದರು ಸುಮ್ನೆ ಸನ್ನೆ ಮಾಡಿದ್ರೆ ಜನ ಬರ್ತಾರೆ. ಜನ ಬಂದ್ರೆ ಈ ಸರ್ಕಾರ ಉಳಿಯುತ್ತಾ? ಇಷ್ಟ ಬಂದಂಗೆ ಮಾತಾಡಬಹುದಾ ಎಂದು ಕಿಡಿಕಾರಿದರು.
ರವಿ ಗಣಿಗ ಎಲ್ಲಪ್ಪಾ? ಮಂಡ್ಯಕ್ಕೆ ಹೋದ್ರೆ ಗಾಣಕ್ಕೆ ಹಾಕಿ ರುಬ್ಬುತ್ತಾರೆ!
ಇದೇ ವೇಳೆ 9 ವಿವಿಗಳನ್ನು ಮುಚ್ಚುವ ಕುರಿತು ವಿಷಯ ಎತ್ತಿದ ಆರ್ ಅಶೋಕ್, 'ಡಿಕೆಶಿ ನೇತೃತ್ವದಲ್ಲಿ ಸಮಿತಿ ಮಾಡಿ 9 ವಿವಿ ಮುಚ್ಚುವ ನಿರ್ಧಾರ ಮಾಡಿದೆ ಸರ್ಕಾರ. ನಾವು ವಿಶ್ವ ವಿದ್ಯಾಲಯಗಳನ್ನು ಮಾನದಂಡಗಳ ಮೇಲೆ ಆರಂಭಿಸಿದ್ದೆವು, ಸುಮ್ಮಸುಮ್ಮನೆ ವಿವಿಗಳಿಗೆ ಅನುಮತಿ ಕೊಡಲಿಲ್ಲ. ಮಂಡ್ಯ ವಿವಿಗೆ ಕೇಂದ್ರ 50 ಕೋಟಿ ಕೊಟ್ಟಿದೆ. ಆದ್ದರಿರಂದ ಮಂಡ್ಯದಲ್ಲಿ ಉತ್ತಮ ಕಟ್ಟಡವೂ ಇದೆ, ವಿದ್ಯಾರ್ಥಿಗಳು ಸಹ ಇದ್ದಾರೆ. ಹೀಗಿರುವಾಗ ಕಾಂಗ್ರೆಸ್ ಸರ್ಕಾರ ಮಂಡ್ಯ ವಿವಿ ರದ್ದು ಮಾಡ್ತೀವಿ ಅಂದ್ರೆ ಹೇಗೆ? ರವಿ ಗಣಿಗ ಎಲ್ಲಪ್ಪ? ರವಿ ಗಣಿಗ ನೀನು ಮಂಡ್ಯಕ್ಕೆ ಹೋದರೆ ಅಲ್ಲಿನವ್ರು ಗಾಣಕ್ಕೆ ಹಾಕಿ ರುಬ್ಬಿಬಿಡ್ತಾರೆ ಎಂದು ಟಾಂಗ್ ನೀಡಿದರು.
ರದ್ದು ಮಾಡೋದು ಬೇಡ ಅಂತ ಹೇಳಿದ್ದೀನಿ!
ಈ ವೇಳೆ ಮಾತನಾಡಿದ ರವಿ ಗಣಿಗ, 'ನಾನು ಈಗಾಗಲೇ ಡಿಸಿಎಂಗೆ ಹಾಗೂ ಮಂತ್ರಿಗಳಿಗೆ ಮಂಡ್ಯ ವಿವಿ ರದ್ದು ಬೇಡ ಅಂತ ಕೇಳ್ಕೊಂಡಿದ್ದೀನಿ. ಮಂಡ್ಯದ ಜನರ ಪರವಾಗಿ ವಿಶ್ವ ವಿದ್ಯಾಲಯ ಬೇಕು ಅಂದಿದ್ದೀನಿ ಎಂದು ಹೇಳಿದ್ದಾರೆ. ಈ ಮಾತು ಕೇಳಿದ ಅಶೋಕ್, ರವಿ ಗಣಿಗ ಮಾತಿಗೆ ಶ್ಲಾಘನೆ ವ್ಯಕ್ತಪಡಿಸಿ ಚಾಲೆಂಜ್ ಅಂದ್ರೆ ಇದು ಎಂದು ಹೇಳಿದರು. ಅಲ್ಲದೇ ಮಂಡ್ಯ ಉಸ್ತುವಾರಿ ಸಚಿವರು ಕೆಲಸಕ್ಕೆ ಬಾರದವ್ರು, ರವಿ ಗಣಿಗಗೆ ಇರೋ ಧಮ್ ಮಂಡ್ಯ ಉಸ್ತುವಾರಿ ಸಚಿವರಿಗಿಲ್ಲ ಎಂದು ಪರೋಕ್ಷವಾಗಿ ಚೆಲುವರಾಯಸ್ವಾಮಿ ಹೆಸರು ಹೇಳದೇ ಅಶೋಕ್ ಟಾಂಗ್ ನೀಡಿದ್ದಾರೆ.
Advertisement