
ಬೆಳಗಾವಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ ಎಂದು ಬಿಜೆಪಿ ಆರೋಪಿಸಿದ್ದು, ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4 ರಷ್ಟು ಮೀಸಲಾತಿಯನ್ನು ವಿರೋಧಿಸಿದೆ.
ಭಾನುವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಬಜೆಟ್ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದ್ದು, ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ಸರ್ಕಾರದ ಈ ಅನ್ಯಾಯವನ್ನು ಬಲವಾಗಿ ವಿರೋಧಿಸುತ್ತೇವೆಂದು ಹೇಳಿದ್ದಾರೆ.
ಮೀಸಲಾತಿ ವಿಚಾರವನ್ನು ಉಲ್ಲೇಖಿಸಿದ ಅವರು, ಸರ್ಕಾರಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿಯನ್ನು ಪರಿಚಯಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಖಂಡಿಸಿದರು, ಇದು ಅಸಂವಿಧಾನಿಕ ಮತ್ತು ವಿಭಜಕ ಎಂದು ಕರೆದರು.
ಸರ್ಕಾರದ ಈ ಕ್ರಮವು ಧಾರ್ಮಿಕ ಸಮುದಾಯಗಳ ನಡುವೆ ಬಿರುಕುಗಳನ್ನು ಉಂಟುಮಾಡುತ್ತದೆ. ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಲಾಗಿದ್ದು, ಇದರ ವಿರುದ್ಧ ಪ್ರತಿಭಟಿಸುತ್ತೇವೆಂದು ಹೇಳಿದರು.
ಬಿಜೆಪಿ ಅಧಿಕಾರಾವಧಿಯಲ್ಲಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಸುಮಾರು 19,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಈ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಈ ಪ್ರದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಕೃಷ್ಣಾ ನದಿ ಜಲಾನಯನ ಪ್ರದೇಶ ಅಭಿವೃದ್ಧಿಗೆ ವಾರ್ಷಿಕವಾಗಿ 10,000 ಕೋಟಿ ರೂ.ಗಳನ್ನು ಹಂಚಿಕೆ ಮಾಡುವ ಹಿಂದಿನ ಭರವಸೆಯನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳು ಅಗತ್ಯ ಅಭಿವೃದ್ಧಿ ಕಾರ್ಯಗಳ ಮೇಲೆ ಕರಿನೆರಳು ಬೀರಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಬೆಳಗಾವಿ ನಗರ ನಿಗಮದ ಮೇಲೆ ಬಿಜೆಪಿ ಮತ್ತೆ ಹಿಡಿತ ಸಾಧಿಸಿರುವುದಕ್ಕೆ ಅಭಿನಂದನೆ ತಿಳಿಸಿದ ವಿಜಯೇಂದ್ರ ಅವರು, ನಗರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು, ಎಲ್ಲಾ ಭಾಷೆ, ಸಮುದಾಯ ಮತ್ತು ಸಾಮಾಜಿಕ ಗುಂಪುಗಳ ಜನರೊಂದಿಗೆ ಒಗ್ಗೂಡಿ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಮರಾಠಿ ಮತ್ತು ಕನ್ನಡ ಸಮುದಾಯಗಳ ನಡುವಿನ ಸಾಮರಸ್ಯ ಹಾಳುಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದು "ಕ್ಷಮಿಸಲಾಗದ ಅಪರಾಧ" ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Advertisement