
ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಗಡಿಗಳಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗಿದ್ದು, ಇದರ ಬೆನ್ನಲ್ಲೇ ವಿಜಯನಗರದ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ನಡೆಸಲು ಕಾಂಗ್ರೆಸ್ ಮುಂದಾಗಿದ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಸರ್ಕಾರವು ತನ್ನ ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಿಜಯನಗರದ ಹೊಸಪೇಟೆಯಲ್ಲಿ 'ಸಾಧನಾ ಸಮಾವೇಶ' ರ‍್ಯಾಲಿ ನಡೆಸಲು ಮುಂದಾಗಿತ್ತು. ಆದರೆ, ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ರ‍್ಯಾಲಿಯನ್ನು ಮುಂದೂಡಲಾಗಿತ್ತು.
ಇದೀಗ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಮೇ 20 ರಂದು ರ‍್ಯಾಲಿ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯುದ್ಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಘಟನೆಗೆ ಸಿದ್ಧರಾಗಿರುವಂತೆ ಸೂಚನೆ ನೀಡಿದ್ದರು. ನಂತರ ಕದನ ವಿರಾಮ ಘೋಷಣೆಯಾದ ಬಳಿಕ ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದ್ದರು.
ಬಳಿಕ ಮೇ 20 ರ ರ‍್ಯಾಲಿಗೆ ಸಿದ್ಧತೆಗಳ ನಡೆಸುವಂತೆ ವಿಜಯನಗರ ಜಿಲ್ಲಾಧಿಕಾರಿಗೆ ಭಾನುವಾರ ಬೆಳಿಗ್ಗೆ ಸೂಚನೆ ನೀಡಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, 'ಹಟ್ಟಿ' ಮತ್ತು 'ತಾಂಡಾ'ಗಳಂತಹ ಸ್ಥಳಗಳಲ್ಲಿ ವಾಸಿಸುವ 1 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸರ್ಕಾರ ಮುಂದುವರಿಸಲಿದೆ ಎಂದು ಹೇಳಿದರು.
ರಾಮನಗರದಲ್ಲಿ ಭಾನುವಾರ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪ್ರಮಾಣವಚನ ಸಮಾರಂಭವಾದ 'ಯುವ ಪರ್ವ' ರ‍್ಯಾಲಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, 'ಸಾಧನಾ ಸಮಾವೇಶ' ರ್ಯಾಲಿಯಲ್ಲಿ 1 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗುವುದು ಎಂದು ಹೇಳಿದರು.
ಸರ್ಕಾರದ ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ್ದು, ಮೇ.20 ರಂದು ರ‍್ಯಾಲಿ ನಡೆಸುವ ಯೋಜನೆಯಿದೆ. ಸಚಿವ ಕೃಷ್ಣ ಬೈರೇಗೌಡ ಮೇಲ್ವಿಚಾರಣೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಆದರೆ, ಯುದ್ಧದಂತಹ ಪರಿಸ್ಥಿತಿಯಿಂದಾಗಿ ರ‍್ಯಾಲಿ ನಡೆಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಚಿಂತಿಸುತ್ತಿದ್ದೇವೆಂದು ಹೇಳಿದರು.
ರ‍್ಯಾಲಿಯಲ್ಲಿ ಸರ್ಕಾರ ತನ್ನ ಎರಡು ವರ್ಷಗಳ ಸಾಧನೆಯನ್ನು ಪ್ರದರ್ಶಿಸಲಿದ್ದು, ಇಡೀ ಸಚಿವ ಸಂಪುಟ ಭಾಗವಹಿಸುವ ನಿರೀಕ್ಷೆಯಿದೆ.
Advertisement