
ಬೆಂಗಳೂರು: ತನ್ನ ಅಧಿಕಾರಾವಧಿಯ ಎರಡು ವರ್ಷಗಳನ್ನು ಪೂರೈಸಿರುವ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ಮಂಗಳವಾರ ಹೊಸಪೇಟೆಯಲ್ಲಿ ಸಾಧನಾ ಸಮಾವೇಶವನ್ನು ನಡೆಸಿದ್ದು, ಇದೀಗ ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ ನಡೆಸಲು ಮುಂದಾಗಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮೇಲ್ಮನೆಯ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ ನಡೆಸಲು ಚಿಂತನೆಗಳು ನಡೆಯುತ್ತಿವೆ. ಈ ಸಮಾವೇಶಕ್ಕೆ ಗ್ಯಾರಂಟಿ ಯೋಜೆಗಳ ಫಲಾನುಭವಿಗಳನ್ನು ಆಹ್ವಾನಿಸಲಾಗುತ್ತದೆ. ಈ ಮೂಲಕ ಪ್ರತೀ ಜಿಲ್ಲೆಯಲ್ಲೂ ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಲು ಸರ್ಕಾರ ಯತ್ನಿಸಲಿದೆ ಎಂದು ಹೇಳಿದ್ದಾರೆ.
ಸಮಾವೇಶದ ದಿನಾಂಕಗಳು ಇನ್ನೂ ಅಂತಿಮಗೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಕಾರ್ಯಕ್ರಮಗಳನ್ನು ಆಧರಿಸಿ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಇದು ಸರ್ಕಾರ ಮತ್ತು ಪಕ್ಷದ ಕಾರ್ಯಕ್ರಮವಾಗಿರಲಿದೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಆರೋಪ ಕುರಿತು ಮಾತನಾಡಿದ ಅವರು, ಸಲೀಂ ಅವರ ಪ್ರಕಾರ, ಬಿಜೆಪಿ ಸದಸ್ಯರು ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಸಾಧನೆಗಳನ್ನು ಮಾಡಿಲ್ಲ ಎಂದು ಆರೋಪಿಸುತ್ತಲೇ ಇದ್ದಾರೆ. ಇವು ಆಧಾರರಹಿತ ಆರೋಪಗಳಾಗಿವೆ. ಈ ಕಾರ್ಯಕ್ರಮಗಳ ಮೂಲಕ, ಬಡವರಿಗೆ ಯಾವ ರೀತಿಯ ಪ್ರಯೋಜನೆಗಳನ್ನು ನೀಡಲಾಗುತ್ತದೆ ಎಂಬುದನ್ನು ತಿಳಿಸಲಾಗುವುದು. ಬಳಿಕ ಈ ಯೋಜನೆಗಳನ್ನು ಬಿಜೆಪಿ ವಿರೋಧಿಸಲಿ ಎಂದು ಸವಾಲು ಹಾಕಿದರು.
ಈ ಸಮಾವೇಶದ ವೇಳೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನೂ ಎತ್ತಿ ತೋರಿಸಲಾಗುವುದು. ರಾಜ್ಯ ಸರ್ಕಾರಕ್ಕೆ ನೀಡಬೇಕಾದ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಕರ್ನಾಟಕದ ಇಬ್ಬರು ಪ್ರಮುಖ ಮಂತ್ರಿಗಳಾದ ನಿರ್ಮಲಾ ಸೀತಾರಾಮನ್ ಮತ್ತು ಪ್ರಹ್ಲಾದ್ ಜೋಶಿ ಇದ್ದಾರೆ. ಅವರು ರಾಜ್ಯಕ್ಕಾಗಿ ಏನು ಮಾಡಿದ್ದಾರೆ? ನಾವು ಈ ಬಗ್ಗೆ ಜನರಿಗೆ ತಿಳಿಸುತ್ತೇವೆಂದು ಹೇಳಿದರು.
Advertisement