

ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈ ನಡುವಲ್ಲೇ ಬೆಂಗಳೂರು ನಗರದಲ್ಲಿ ವಾಸವಿರುವ ಬಿಹಾರಿಗಳ ಓಲೈಸಲು ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ.
ಬ್ಯಾಟರಾಯನಪುರದ ಕಾಫಿ ಬೋರ್ಡ್ ಲೇಔಟ್ ನಲ್ಲಿ ಬಿಹಾರ ಮೂಲದ ಬೆಂಗಳೂರು ನಿವಾಸಿಗಳ ಸಂಘದ ಸದಸ್ಯರನ್ನು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಭಾನುವಾರ ಭೇಟಿ ಮಾಡಿದ್ದು, ಮತಯಾಚನೆ ಮಾಡಿದರು.
3-4 ದಿನಗಳ ರಜೆ ತೆಗೆದುಕೊಂಡು ತಮ್ಮ ಊರುಗಳಿಗೆ ಹೋಗಿ ಇಂಡಿಯಾ ಮೈತ್ರಿಕೂಟಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಇದೇ ವೇಳೆ ಬೆಂಗಳೂರಿನಲ್ಲಿ ಬಿಹಾರಿಗಳ ಸಂಘಕ್ಕೆ ನಾಗರಿಕ ಸೌಲಭ್ಯ ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಸ್ಥಳದಲ್ಲಿದ್ದ ಕೆಲ ಬಿಹಾರಿ ನಿವಾಸಿಗಳು, ಡಿಕೆ.ಶಿವಕುಮಾರ್ ಅವರು ಸಿಎಂ ಆಗಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ ಅವರು, ಮೊದಲು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿ. ತೇಜಸ್ವಿ ಯಾದವ್ ಬಿಹಾರ ರಾಜ್ಯದ ಸಿಎಂ ಆಗಲಿ. ತೇಜಸ್ವಿ ಅವರನ್ನು ಸಿಎಂ ಮಾಡುವುದು ಮತ್ತು ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು ಪ್ರಮುಖ ಆದ್ಯತೆಯಾಗಿದೆ ಹೇಳಿದರು.
ನನಗೆ ದೊಡ್ಡ ಸ್ಥಾನ ಬೇಕು ಎಂದು ನೀವೆಲ್ಲರೂ ಹೇಳಿದ್ದೀರಿ. ನನಗೆ ಅದು ಮುಖ್ಯವಲ್ಲ. ಬಿಹಾರದಲ್ಲಿ ಮಹಾಘಟ ಬಂಧನ ಅಧಿಕಾರಕ್ಕೆ ತಂದರೆ ನನಗೆ ಎಲ್ಲಾ ಸ್ಥಾನವನ್ನು ನೀವು ಕೊಟ್ಟಂತೆ. ನಿಮ್ಮ ಒಂದೊಂದು ಮತವೂ ಮಹಾಘಟಬಂದನ್ ಅಧಿಕಾರಕ್ಕೆ ಬರಲು ಮುಖ್ಯವಾದುದು. ಈ ಮೊದಲಿನಂತೆ ನಿತೀಶ್ ಕುಮಾರ್ ಅವರ ಕೈಯಲ್ಲಿ ಬಿಹಾರವಿಲ್ಲ. ಅವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ.
ಬಿಹಾರದ ಅಭಿವೃದ್ಧಿಗೆ ಲಾಲುಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ರಾಹುಲ್ ಗಾಂಧಿಯವರು ಘೋಷಣೆ ಮಾಡಿದ್ದಾರೆ. ರಾಹುಲ್ ಗಾಂಧಿಯವರನ್ನು ಈ ದೇಶದ ಪ್ರಧಾನಿಯಾಗಿ ಮಾಡಬೇಕು. ನೆಹರು ಅವರ ಕುಟುಂಬ ಈ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಈ ಕಾರಣಕ್ಕೆ ಅವರಿಗೆ ನೀವು ಶಕ್ತಿ ನೀಡಬೇಕು. ತೇಜಸ್ವಿ ಯಾದವ್ ಅವರನ್ನ ಬೆಂಬಲಿಸಬೇಕು ಎಂದರು.
ಬಿಹಾರದಲ್ಲಿ ಲಕ್ಷಾಂತರ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಲಾಗಿದೆ. ನಿಮ್ಮ ಊರಿನಲ್ಲಿರುವವರ ಬದುಕನ್ನು ಉಳಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ನೀವುಗಳು ಇಲ್ಲಿ ಬದುಕು ಕಟ್ಟಿಕೊಂಡಿರಬಹುದು. ಆದರೆ, ನಿಮ್ಮ ಮತಗಳು ಅಲ್ಲಿರಬಹುದು. ಅಥವಾ ನಿಮ್ಮ ಸಂಬಂಧಿಕರು ಅಲ್ಲಿರಬಹುದು. ಅವರಿಗೆ ಮತದಾನ ಮಾಡಲು ನೀವು ತಿಳಿಸಿ. ನೀವುಗಳು ಸಹ ಮತದಾನ ಮಾಡಲು ಊರಿಗೆ ತೆರಳಿ. ನಿಮಗೆಲ್ಲರಿಗು ಮೂರು ದಿನ ರಜೆ ನೀಡುವಂತೆ ನೀವುಗಳು ಕೆಲಸ ನಿರ್ವಹಿಸುವ ಸಂಸ್ಥೆಗಳು, ಗುತ್ತಿಗೆದಾರರಿಗೆ ಹಾಗೂ ಕ್ರೆಡಾಯ್ ಸಂಸ್ಥೆಗೆ ಸೂಚಿಸುತ್ತೇನೆ ಎಂದು ತಿಳಿಸಿದರು.
Advertisement