

ಬೆಂಗಳೂರು: ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ನಿವೇಶನ ನೀಡಲಾಗುವುದು ಎಂಬ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಜೆಡಿಎಸ್ ತೀವ್ರವಾಗಿ ಕಿಡಿಕಾರಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ‘ನಮ್ಮ ತೆರಿಗೆ, ನಮ್ಮ ಹಕ್ಕು’ ಎಂದು ಗಂಟಲು ಹರಿದುಕೊಳ್ಳುವ ಕಾಂಗ್ರೆಸ್ಸಿಗರೇ ನಿಮ್ಮ ಡೋಂಗಿತನಕ್ಕೆ ಏನೆನ್ನಬೇಕು ? ಮತಕ್ಕೋಸ್ಕರ ಕನ್ನಡಿಗರ ಭೂಮಿಯನ್ನು ವಲಸಿಗರಿಗೆ ನೀಡಲು ಹೊರಟಿರುವ ನಿಮಗೆ ಧಿಕ್ಕಾರ ಎಂದು ಕಿಡಿಕಾರಿದೆ.
ಕನ್ನಡಿಗರ ಹಿತ ಕಾಪಾಡುವ ಬದಲು ಹೈಕಮಾಂಡ್ ಗುಲಾಮಗಿರಿಗಾಗಿ ಪರಭಾಷಿಕರನ್ನು ಮತಕ್ಕಾಗಿ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದೀರಿ. ನಮ್ಮ ರಾಜ್ಯದ ಹೆಚ್ಚು ಪಾಲು ಬಿಹಾರಕ್ಕೆ ಹೋಗುತ್ತೆ, ಅಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣ ಬಿಹಾರಿಗಳು ಕರ್ನಾಟಕಕ್ಕೆ ಬಂದು ಕನ್ನಡಿಗರ ಮಕ್ಕಳ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಅವರೇ ನಿಮ್ಮ ನಾಲಿಗೆಗಳು ಏಕೆ ಅಪಶೃತಿ ನುಡಿಯುತ್ತಿವೆ?
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ರಾಜ್ಯದಲ್ಲಿರುವ ಬಿಹಾರಿ ಮತದಾರರಿಗೆ ಬೆಂಗಳೂರಿನಲ್ಲಿ ನಿವೇಶನ, ಸೈಟು ಕೊಡುವುದಾಗಿ ಆಮಿಷ ಒಡ್ಡಿದ್ದೀರಿ? ಇದು ಎಷ್ಟು ಸರಿ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ಧಿಕ್ಕಾರ. ಕನ್ನಡಿಗರ ತೆರಿಗೆ ದುಡ್ಡು, ಕಾಂಗ್ರೆಸ್ಸಿನ ಜಾತ್ರೆ. ಯಾರದೋ ಜುಟ್ಟಿಗೆ ಮಲ್ಲಿಗೆ ಮುಡಿಸಲು ನಿಮಗೆ ನಾಚಿಕೆ ಸಂಕೋಚ ಆಗುವುದಿಲ್ಲವೇ? ಎಂದು ವಾಗ್ದಾಳಿ ನಡೆಸಿದೆ.
Advertisement