

ಬೆಂಗಳೂರು: ಬಿಹಾರ ರಾಜ್ಯದಲ್ಲಿ ನಡೆದದ್ದು ಮತಗಳ್ಳತನವಲ್ಲ, ಪ್ರಜಾಪ್ರಭುತ್ವದ ದರೋಡೆ ಎಂದು ವಿಧಾನ ಪರಿಷತ್'ನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರು ಶನಿವಾರ ಆರೋಪಿಸಿದ್ದಾರೆ.
ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಹಾಗೂ ಭಾರತದ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
"ಇದು ಕೇವಲ ಮತ ಕಳ್ಳತನವಲ್ಲ, ಪ್ರಜಾಪ್ರಭುತ್ವದ ದರೋಡೆ", ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಗೆಲುವಿಗೆ ನೆರವಾಗಿದೆ ಎಂದು ಆರೋಪಿಸಿದ್ದಾರೆ.
ಇದು ಜನಾಭಿಪ್ರಾಯವಲ್ಲ. ಬಿಹಾರ ಗೆಲ್ಲಲು ಮೋದಿ, ಅಮಿತ್ ಶಾ ಚುನಾವಣಾ ಆಯೋಗದೊಂದಿಗೆ ಸೇರಿ ಷಡ್ಯಂತ್ರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನದ ರಕ್ಷಣೆ ಗಾಗಿ ಮತಗಳ್ಳತನ ಅಭಿಯಾನ ಮಾಡುತ್ತಿದ್ದೇವೆ. ಮತದಾನ ಪ್ರತಿಯೊಬ್ಬರ ಅಧಿಕಾರ. ಇದರಲ್ಲಿ ಮೋಸ ಆಗಬಾರದು. ಬಿಹಾರದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ಚುನಾವಣಾ ಆಯೋಗದ ಜೊತೆ ಸೇರಿ ಪಿತೂರಿ ನಡೆಸಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಮತಕಳ್ಳತನ ವಿರುದ್ದ ದೊಡ್ಡ ಹೋರಾಟ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿ ಹಂತದಲ್ಲಿ ಎಷ್ಟು ಜನ ಸಾಧ್ಯವೋ ಅಷ್ಟು ಜನರನ್ನು ಒಗ್ಗೂಡಿಸಿ ಮತಕಳ್ಳತನದ ವಿರುದ್ಧ ಜನಾಭಿಪ್ರಾಯ ರೂಪಿಸಬೇಕು. ಜನರ ಹಕ್ಕನ್ನು ಕಾಪಾಡುವಂತೆ ಪ್ರೇರೇಪಿಸಬೇಕು. ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಈ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಮತಗಳ್ಳತನವನ್ನು ನಾವು ಸಹಿಸಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಹೋರಾಟದ ಮಾರ್ಗ ಅನಿವಾರ್ಯ.ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ರಕ್ಷಣೆಗೆ ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಹೋರಾಟ ನಡೆಸಲಿದೆ. ಮೋದಿ ಪ್ರಧಾನಿಯಾದ ಮೇಲೆ ಇ.ಡಿ., ಐ.ಟಿ., ಸಿಬಿಐ ಹಾಗೂ ಎಲ್ಲ ಸಂಸ್ಥೆಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ.ಈ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಕೇಂದ್ರದ ಅಣತಿಯಂತೆ ನಡೆದುಕೊಳ್ಳುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಆಂದೋಲನ ಮಾಡುತ್ತಿದ್ದೇವೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಹೋರಾಟ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕೆಂದು ಸಲೀಂ ಅಹ್ಮದ್ ರವರು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಕರೆ ನೀಡಿದರು.
ಏತನ್ಮಧ್ಯೆ, ನೂರಾರು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಧ್ಯಾಹ್ನ 1.30 ರ ಸುಮಾರಿಗೆ "ವೋಟ್ ಚೋರಿ" ಮತ್ತು ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಅಲ್ಲದೆ, ಪ್ರತಿಭಟನಾಕಾರರು ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ನಡೆಸಿ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ, ಪೊಲೀಸರು ಸುಮಾರು 70 ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.
Advertisement